ಕಬ್ಬಡ್ಡಿ : ರೋಚಕತೆಯ ಉತ್ತುಂಗ

7

ಕಬ್ಬಡ್ಡಿ : ರೋಚಕತೆಯ ಉತ್ತುಂಗ

Published:
Updated:

ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದ್ದ ಏಷ್ಯಾ'ಕಪ್ ಕಬಡ್ಡಿ ಫೈನಲ್ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪಂದ್ಯದ ಒಂದು ಹಂತದಲ್ಲಿ ಭಾರತದ ಆಟಗಾರರು ತಮ್ಮ ಪ್ರತಿಭಟನೆಯ ಸಂಕೇತವಾಗಿ ಆಟ ನಿಲ್ಲಿಸಿ ಅಂಗಣದಿಂದ ಹೊರ ನಡೆದರು. ಪಾಕ್ ಕಪ್ ಎತ್ತಿಕೊಂಡಿತ್ತು.ಕೇವಲ ಒಂದು ತಿಂಗಳ ಹಿಂದೆ ಈ ಸುದ್ದಿ `ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡಾಗ ಹಲವು ಮಂದಿ ಕಬಡ್ಡಿಪ್ರಿಯರು ಅದೇನದು ಗಲಾಟೆ, ಆ ಭಾರತ ತಂಡದಲ್ಲಿ ಕರ್ನಾಟಕದವರು ಎಷ್ಟು ಜನರಿದ್ದರು... ಇತ್ಯಾದಿ ಪ್ರಶ್ನೆಗಳನ್ನು ಮಾಧ್ಯಮ ಕಚೇರಿಗೆ ಫೋನಾಯಿಸಿ ಕೇಳಿದ್ದರು. ಆ ಫೈನಲ್ ಪಂದ್ಯದ ಚಿತ್ರಗಳೂ ಪ್ರಕಟಗೊಂಡಿದ್ದವು. ಆಟಗಾರರೆಲ್ಲರೂ ಕೇವಲ ಚಡ್ಡಿಯೊಂದನ್ನು ಧರಿಸಿದ್ದು ಪೈಲ್ವಾನರಂತೆ ಕಾಣಿಸುತ್ತಿದ್ದರು. ರಗ್ಬಿ ಆಟಗಾರರಂತೆ ಗಟ್ಟಿಮುಟ್ಟಾಗಿದ್ದರು.ಇದೇನಿದು ಕಬಡ್ಡಿಯನ್ನು ಸಮವಸ್ತ್ರ ಧರಿಸದೆಯೇ ಆಡುತ್ತಿದ್ದಾರಲ್ಲಾ ಎಂದೂ ಆ ಪ್ರಕಟಿತ ಚಿತ್ರಗಳ ಕುರಿತು ಕುತೂಹಲ ವ್ಯಕ್ತಪಡಿಸಿದ್ದವರೂ ಬಹಳ.

ಇದೀಗ, ಪಂಜಾಬ್‌ನಲ್ಲಿ ನಡೆಯುತ್ತಿರುವ (ಡಿಸೆಂಬರ್ 1ರಿಂದ 15ರವರೆಗೆ) ವಿಶ್ವಕಪ್ ಕಬಡ್ಡಿಯಲ್ಲಿ ಗೆದ್ದವರಿಗೆ ನೀಡಲಾಗುವ ಬಹುಮಾನದ ಮೊತ್ತ (4ಕೋಟಿ ರೂಪಾಯಿ)ವನ್ನು ಕೇಳಿಯೇ ಬಹಳ ಮಂದಿ ಅಚ್ಚರಿಗೊಂಡಿದ್ದಾರೆ. ಕರ್ನಾಟಕ ಮುಂತಾದ ರಾಜ್ಯಗಳಲ್ಲಿ 4ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವಿದ್ದರೆ ಅದೊಂದು ಮಹತ್ತರ ಸಂಗತಿ ಎನ್ನುವವರೇ ಹೆಚ್ಚು.ಹೌದು, ದಕ್ಷಿಣ ಭಾರತದ ಮಂದಿಗೆ ಈ ಅಚ್ಚರಿ ಸಹಜ. ಸಾಮಾನ್ಯವಾಗಿ 13ಮೀ. ಉದ್ದ ಮತ್ತು 8ಮೀ. ಅಗಲದ ಅಂಗಣದಲ್ಲಿ ಆಡುವ ನ್ಯಾಶನಲ್ ಕಬಡ್ಡಿಯೇ ನಮಗೆ ಪರಿಚಿತ. ನಮ್ಮ ಹಳ್ಳಿಪಟ್ಟಣಗಳ ಎಲ್ಲೆಂದರಲ್ಲಿ ಈ ಕಬಡ್ಡಿ ಆಡಿದವರ ಮತ್ತು ಆಡುವವರ ಸಂಖ್ಯೆ ಅಪಾರ. ಇನ್ನು ಬೀಚ್ ಕಬಡ್ಡಿ ಬಗ್ಗೆಯೂ ಕೇಳಿ ಗೊತ್ತು. ಆದರೆ ಸರ್ಕಲ್ ಕಬಡ್ಡಿಯ ಬಗ್ಗೆ ಗೊತ್ತಿರುವವರು ಬಹಳ ಕಡಿಮೆ. ಕಳೆದ ತಿಂಗಳು ಲಾಹೋರ್‌ನಲ್ಲಿ ನಡೆದ ಏಷ್ಯಾ ಕಪ್ ಅಥವಾ ಪ್ರಸಕ್ತ ಪಂಜಾಬ್‌ನಲ್ಲಿ ನಡೆದಿರುವ ವಿಶ್ವಕಪ್ ಪಂದ್ಯಗಳು ನಮಗೆ ಪರಿಚಿತವಾದ ನ್ಯಾಶನಲ್ ಕಬಡ್ಡಿ ಅಲ್ಲ. ಅದು ಸರ್ಕಲ್ ಕಬಡ್ಡಿ !ಉತ್ತರ ಭಾರತದಲ್ಲಿ ಹತ್ತು ಹಲವು ಕಬಡ್ಡಿ ಟೂರ್ನಿಗಳಲ್ಲಿ ಆಡಿರುವ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ರಮೇಶ್ ಅವರೊಂದಿಗೆ `ಸರ್ಕಲ್ ಕಬಡ್ಡಿ' ಬಗ್ಗೆ ಮಾತನಾಡಿದಾಗ, ಅವರು `ದಕ್ಷಿಣ ಭಾರತದಲ್ಲಿ ನನಗೆ ಗೊತ್ತಿರುವ ಮಟ್ಟಿಗೆ ಸರ್ಕಲ್ ಕಬಡ್ಡಿ ಟೂರ್ನಿ ಈವರೆಗೆ ಎಲ್ಲೂ ನಡೆದಿಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಭಾರತದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿಯೇ ಈ ಆಟ ಬಲು ಜನಪ್ರಿಯ. ಇದನ್ನು ಆಡುವುದು ಬಲು ಕಷ್ಟ ಕೂಡಾ. ಆಟಗಾರನ ಫಿಟ್‌ನೆಸ್ ಅತ್ಯುತ್ತಮ ಮಟ್ಟದ್ದಾಗಿರಲೇ ಬೇಕು' ಎನ್ನುತ್ತಾರೆ.ಕಬಡ್ಡಿಯ ನಿಯಮಗಳು ಸುಮಾರು 90 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ರೂಪುಗೊಂಡು ನಂತರ ದೇಶದಾದ್ಯಂತ ಜನಪ್ರಿಯಗೊಂಡಿತು. ಆದರೆ ಈ `ಸರ್ಕಲ್ ಕಬಡ್ಡಿ' ಇದೆಯಲ್ಲಾ, ಇದು ಮೂರು ದಶಕಗಳ ಈಚೆಗಷ್ಟೇ ಈ ಸ್ವರೂಪದಲ್ಲಿ ಜನಮನ ತಟ್ಟುತ್ತಿದೆ. ಕಬಡ್ಡಿಯ ಕೆಲವು ಮೂಲನಿಯಮಗಳನ್ನು ಹಾಗೆಯೇ ಉಳಿಸಿಕೊಂಡು, ಬೇರೆಯೇ ಮಾದರಿಯಲ್ಲಿ ಈ ಆಟ ಜನಜನಿತಗೊಂಡಿದೆ.ಸಮತಟ್ಟಾದ ಸ್ವಾಭಾವಿಕ ಹುಲ್ಲುಹಾಸಿನ ಮೈದಾನದ ನಡುವಿನಲ್ಲಿ 22ಮೀ. ತ್ರಿಜ್ಯದ ಮಧ್ಯ ಗೆರೆಯ ಸುತ್ತಲೂ ಅಷ್ಟೇ ಪರಿಧಿಯ ವೃತ್ತಾಕಾರದ ಮೈದಾನದಲ್ಲಿ ಈ ಆಟ ನಡೆಯುತ್ತದೆ. ಸಾಮಾನ್ಯವಾಗಿ ಕಬಡ್ಡಿಯಲ್ಲಿ ದಾಳಿಗಾರ ಎದುರಾಳಿ ಅಂಕಣದಲ್ಲಿರುವವರನ್ನು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮುಟ್ಟಿ, ಯಶಸ್ವಿಯಾಗಿ ಮಧ್ಯಗೆರೆ ದಾಟಿ ಬಂದರೆ, ಆತ ಎಷ್ಟು ಜನರನ್ನು ಮುಟ್ಟಿದ್ದನೋ ಅಷ್ಟೂ ಪಾಯಿಂಟ್ಸ್ ಗಳಿಸುತ್ತಾನೆ. ಅದೇ ರೀತಿ ದಾಳಿಗಾರನನ್ನು ಎದುರಾಳಿ ತಂಡದ ಎಲ್ಲಾ ಆಟಗಾರರೂ ಸುತ್ತುವರಿದು ಒಗ್ಗೂಡಿ ಹಿಡಿಯಬಹುದು. ಆದರೆ `ಸರ್ಕಲ್ ಕಬಡ್ಡಿ'ಯ ನಿಯಮ ಹಾಗಿಲ್ಲ. ದಾಳಿಗಾರ ಎದುರಾಳಿ ತಂಡದ ಒಬ್ಬನನ್ನು ಮಾತ್ರ ಮುಟ್ಟಬಹುದು. ಅದೇ ರೀತಿ ಆ ತಂಡದಲ್ಲಿ ಮುಟ್ಟಿಸಿಕೊಂಡವನು ಮಾತ್ರ ದಾಳಿಗಾರನನ್ನು ಅಡ್ಡಗಟ್ಟಿ ಮಧ್ಯಗೆರೆ ತಲುಪದಂತೆ ತಡೆಯಬಹುದು.ಈ ದಾಳಿ ಪ್ರಕ್ರಿಯೆಯಲ್ಲಿಯೇ ವಿಶಿಷ್ಠ ರೋಚಕತೆ ಅಡಗಿದೆ. ದಾಳಿಗಾರ ಒಬ್ಬನನ್ನು ಮುಟ್ಟಿದ ತಕ್ಷಣ ಮುಟ್ಟಿಸಿಕೊಂಡವನು ದಾಳಿಗಾರನ ಬೆನ್ನಟ್ಟುತ್ತಾನೆ. ಅವನು ಮುಂದುವರಿಯದಂತೆ ಆತನ ಮೇಲೆ ಜಿಗಿದು ಕೊರಳನ್ನು ತನ್ನ ತೋಳಿನಿಂದ ಬಳಸಿ ಹಿಡಿಯುತ್ತಾನೆ ಅಥವಾ ಸೊಂಟವನ್ನು ತನ್ನೆರಡೂ ತೋಳುಗಳಿಂದ ಗಟ್ಟಿಯಾಗಿ ಬಳಸಿ ಹಿಡಿದು ನೆಲಕ್ಕುರುಳಿಸಿ `ಕುಸ್ತಿಪಟ್ಟು' ಗಳನ್ನು ಹಾಕಿ ಬಿಡುತ್ತಾನೆ. ಆ `ಪಟ್ಟು'ಗಳನ್ನು ಅತೀವ ಶಕ್ತಿ ಮತ್ತು ಯುಕ್ತಿಯಿಂದ ಬಿಡಿಸಿಕೊಂಡು ತನ್ನ `ಕೋರ್ಟ್'ನತ್ತ ದಾಳಿಗಾರ ಹೋದರೆ ಆ ತಂಡಕ್ಕೆ ಪಾಯಿಂಟ್ ಸಿಕ್ಕಿದಂತೆಯೇ. ಈ ನಡುವೆ ದಾಳಿಗಾರ ಕಬಡ್ಡಿ ಕಬಡ್ಡಿ... ಎನ್ನುತ್ತಾ ಉಸಿರು ಬಿಗಿಯಾಗಿ ಹಿಡಿದಿರಲೇ (ಕ್ಯಾಂಟ್) ಬೇಕು. ದಾಳಿಗಾರ ವಿಶಾಲ ಮೈದಾನದ ಎಲ್ಲೆಂದರಲ್ಲಿ ಮಧ್ಯಗೆರೆಯನ್ನು ದಾಟುವಂತಿಲ್ಲ. ಮಧ್ಯಗೆರೆಯ ಮಧ್ಯದಲ್ಲಿ ಮೂರು ಮೀಟರ್‌ಗಳ `ಗೇಟ್' ಅಥವಾ 'ಪಾಲ' ಮೂಲಕವೇ ಆತ ದಾಟಬೇಕು. ಮೈಗೆ ಅಂಟಿದಂತಿರುವ ಚಿಕ್ಕ ಚಡ್ಡಿಯೊಂದನ್ನು ಹೊರತು ಪಡಿಸಿ ಇನ್ನೇನು ಧರಿಸದ ಈ ಆಟಗಾರರು `ಪೈಲ್ವಾನ'ರಂತೆ  ತೊಡೆ ತಟ್ಟುತ್ತಾ ಎದುರಾಳಿಯ `ಕೋರ್ಟ್'ಗೆ ನುಗ್ಗುವ ಪರಿ ಕುಸ್ತಿ ಕ್ರೀಡೆಯನ್ನೇ ನೆನಪಿಗೆ ತರುತ್ತದೆ.ಪ್ರತಿ ತಂಡದಲ್ಲಿ 14 ಆಟಗಾರರು ಇರುತ್ತಾರೆ. ಇವರಲ್ಲಿ 8ಮಂದಿ ಆಟಕ್ಕಿಳಿದರೆ, ಆರು ಮಂದಿ ಮೀಸಲು ಆಟಗಾರರು. ತಲಾ 20 ನಿಮಿಷಗಳ ಎರಡು ಅವಧಿಯ ಈ ಕ್ರೀಡೆಯಲ್ಲಿ ಆಡುವವರಿಗೆ ಕಟ್ಟುಮಸ್ತಾದ ಮೈಕಟ್ಟು, ಶಕ್ತಿ, ಸಹಿಷ್ಣುತೆ ಇರಲೇಬೇಕು.  ದಾಳಿಗಾರ ಮತ್ತು ಆತನನ್ನು ಹಿಡಿಯುವ ಯತ್ನದಲ್ಲಿನ ಇಬ್ಬರ ನಡುವಣ ಸೆಣಸಾಟ ಕುಸ್ತಿಯ ಸ್ವರೂಪವನ್ನೇ ಪಡೆದುಕೊಂಡು ಬಿಡುತ್ತದೆ.ಈ ಆಟ ನಡೆಯುವಾಗ ಮೈದಾನದ ಒಳಗೆ ಮುಖ್ಯರೆಫ್ರಿ ಇದ್ದರೆ, ಎರಡೂ ಕಡೆ ಅಂಚುಗೆರೆಗಳ ಬಳಿ ಇಬ್ಬರು ಮತ್ತು ಸ್ಕೋರುಮೇಜಿನ ಬಳಿ ಇನ್ನೊಬ್ಬರು ಇರುತ್ತಾರೆ. ಈ ಆಟ ಬಹಳ ಒರಟು ತಂತ್ರಗಳಿಂದಲೇ ಕೂಡಿರುವುದರಿಂದ ರೆಫ್ರಿ ಸದಾ ಹದ್ದಿನ ಕಣ್ಣು ಹೊಂದಿರಬೇಕಾಗುತ್ತದೆ. ಒರಟು ಆಟವಾಡಿದವರಿಗೆ ಮೊದಲಿಗೆ ಎಚ್ಚರಿಕೆಯ ಹಸಿರು ಕಾರ್ಡು ತೋರಿಸಲಾಗುತ್ತದೆ. ಮತ್ತೆ ಅದೇ ತಪ್ಪು ಕಂಡು ಬಂದರೆ ಹಳದಿ ಕಾರ್ಡು ತೋರಿಸಿ ಎರಡು ನಿಮಿಷಗಳ ಕಾಲ ಹೊರಗೆ ಕಳುಹಿಸಲಾಗುತ್ತದೆ. ಆಟಗಾರ ನಿಯಮಗಳನ್ನು ಉಲ್ಲಂಘಿಸಿ ಒರಟು ಆಟಕ್ಕಿಳಿದು ದೊಡ್ಡ ತಪ್ಪನ್ನೆಸಗಿದರೆ ಕೆಂಪು ಕಾರ್ಡು ತೋರಿಸಿ ಆ ಪಂದ್ಯದಿಂದಲೇ ಹೊರಗಿಡಲಾಗುತ್ತದೆ.ಈ ಆಟ ಈಚೆಗಿನ ದಿನಗಳಲ್ಲಿ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಅದೆಷ್ಟು ಜನಪ್ರಿಯತೆ ಪಡೆದುಕೊಂಡು ಬಿಟ್ಟಿದೆಯೆಂದರೆ ಇದಕ್ಕೆ ಸಂಬಂಧಿಸಿದ ಟೂರ್ನಿಗಳು ನಡೆದರೆ, ಆ ಊರಲ್ಲಿ ಹಬ್ಬದ ಸಂಭ್ರಮ. ಜಾತ್ರೆಯ ಕಳೆ. ಅಕ್ಕಪಕ್ಕದ ಮತ್ತು ದೂರದ ಊರುಗಳಿಂದ ನೂರಾರು ಮಂದಿ ಬಸ್ಸು, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸೇರುತ್ತಾರೆ. ಗಗನ್‌ದೀಪ್ ಸಿಂಗ್, ಮಂಗತ್‌ಸಿಂಗ್ ಸೇರಿದಂತೆ ಹತ್ತು ಹಲವು ಆಟಗಾರರು ಈ ಆಟದಲ್ಲಿ ನೈಪುಣ್ಯತೆ ಸಾಧಿಸಿ ಪಂಜಾಬ್‌ನಲ್ಲಿ ಜನಮನ ಗೆದ್ದು `ಹೀರೊ'ಗಳಾಗಿಬಿಟ್ಟಿದ್ದಾರೆ. ಹೀಗಾಗಿ ಈ ಆಟದ ಸುತ್ತಲೇ ಹೆಣೆಯಲಾದ ಹಲವು ಚಲನಚಿತ್ರಗಳು ಪಂಜಾಬಿ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿ ಜನಪ್ರಿಯಗೊಂಡಿವೆ.  `ಕಬಡ್ಡಿ ಇಕ್ ಮೊಹಬ್ಬತ್', `ದಿಲ್ ಕಬಡ್ಡಿ', `ಕಬಡ್ಡಿ ಒನ್ಸ್ ಅಗೈನ್' ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣಗೊಂಡಿದ್ದು ಪ್ರೇಕ್ಷಕರ ಮನಗೆದ್ದಿವೆ.ಇದೇ ವರ್ಷ ದುಬೈನಲ್ಲಿ ದುಬೈ ಇಂಟರ್‌ನ್ಯಾಶನಲ್ ಕಪ್ ಮತ್ತು ಲಾಹೋರ್‌ನಲ್ಲಿ ಏಷ್ಯಾ ಕಪ್ ಮತ್ತು ಇದೀಗ ವಿಶ್ವಕಪ್ ಕೂಟಗಳು ನಡೆದಿವೆ. ಈ ಆಟದ ಜನಪ್ರಿಯತೆಯಿಂದಾಗಿ ಪ್ರಸಕ್ತ ವಿಶ್ವಕಪ್ ಕಬಡ್ಡಿಯನ್ನು ಸ್ವತಃ ಪಂಜಾಬ್ ಸರ್ಕಾರವೇ ಮುಂದೆ ನಿಂತು ಸಂಘಟಿಸುತ್ತಿದೆ. ಹಿಂದಿನ ವಿಶ್ವಕಪ್ 16 ನಗರಗಳಲ್ಲಿ ನಡೆದಿದ್ದು ಒಟ್ಟು 4ಕೋಟಿ ರೂಪಾಯಿಗಳ ಬಹುಮಾನ ನೀಡಲಾಗಿತ್ತು. ಆಗ ಭಾಗವಹಿಸಿದ್ದ ಪ್ರತಿತಂಡಕ್ಕೂ 10ಲಕ್ಷ ರೂಪಾಯಿ ನೀಡಲಾಗಿತ್ತು. ಆ ಸಲ ಉದ್ಘಾಟನಾ ಸಮಾರಂಭಕ್ಕೆ ಚಿತ್ರನಟ ಶಾರೂಖ್ ಖಾನ್ ಬಂದಿದ್ದರೆ, ಸಮಾರೋಪದಲ್ಲಿ ಅಕ್ಷಯ್ ಕುಮಾರ್ ಪಾಲ್ಗೊಂಡು ಮನರಂಜನೆ ನೀಡಿದ್ದರು. ಉತ್ತರ ಭಾರತದ ಪ್ರಭಾವಿ ರಾಜಕಾರಣಿಗಳೇ ಅಲ್ಲದೆ ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಸುಜಾಹಸನ್ ಮತ್ತು ಪಾಕ್‌ನ ಪಂಜಾಬ್ ಪ್ರಾಂತ್ಯದ ಹಲವು ಸಚಿವರು ಭಾಗವಹಿಸಿದ್ದರು. ಪಾಕ್ ಟೀವಿ ಚಾನೆಲ್‌ಗಳು ವಿಶ್ವಕಪ್‌ನ ಪ್ರತಿ ಪಂದ್ಯಗಳನ್ನೂ ನೇರ ಪ್ರಸಾರ ಮಾಡಿವೆ. ಹೀಗೆ ಭಾರತ ಕಂಡ ಅಪರೂಪದ ಕ್ರೀಡೆ `ಸರ್ಕಲ್ ಕಬಡ್ಡಿ' ಇವತ್ತು ಹಣದ ಹೊಳೆಯಲ್ಲಿ ಮೀಯುತ್ತಿದೆ.ಇದು `ಕೋಟಿ'ಗಳ ಆಟ...

ಹರಪ್ರೀತ್‌ಸಿಂಗ್ ಭಾರತದ ಖ್ಯಾತ ಕಬಡ್ಡಿ ಆಟಗಾರರಲ್ಲಿ ಒಬ್ಬರು. ಬುಸಾನ್ ಏಷ್ಯನ್ ಕ್ರೀಡಾಕೂಟ ಸೇರಿದಂತೆ ಏಷ್ಯಾದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಇವರು ಎರಡು ವಿಶ್ವಕಪ್‌ಗಳಲ್ಲಿ ಆಡಿದ ಅನುಭವಿ. ಜತೆಗೆ ಪಂಜಾಬ್ ಮಟ್ಟಿಗಿನ ಸರ್ಕಲ್ ಕಬಡ್ಡಿಯ ಹತ್ತು ಹಲವು ಟೂರ್ನಿಗಳಲ್ಲಿ ಆಡಿದವರು. ಇವರು `ಪ್ರಜಾವಾಣಿ' ಜತೆಗೆ ಸರ್ಕಲ್ ಕಬಡ್ಡಿಯ ಇನ್ನೊಂದು ಮುಖದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದು ಇಲ್ಲಿದೆ.

- ಸರ್ಕಲ್ ಕಬಡ್ಡಿಗೂ `ನ್ಯಾಶನಲ್ ಕಬಡ್ಡಿ'ಗೂ ಇರುವ ವ್ಯತ್ಯಾಸ ?

ನ್ಯಾಷನಲ್ ಕಬಡ್ಡಿ ಆಡಿದರೆ ಹಣ ಸಿಗೋಲ್ಲ. ಸರ್ಕಲ್ ಕಬಡ್ಡಿಯಲ್ಲಿ ಹಣದ ಸುರಿಮಳೆ.

- ಒಬ್ಬ ಆಟಗಾರ ವರ್ಷಕ್ಕೆ ಎಷ್ಟು ಗಳಿಸಬಹುದು ?

ಕನಿಷ್ಠ ಒಂದು ಕೋಟಿಗೂ ಹೆಚ್ಚು !

- ಅದು ಹೇಗೆ ?

ಪಂಜಾಬ್‌ನಲ್ಲೇ ಸುಮಾರು ನೂರಕ್ಕೂ ಹೆಚ್ಚು ಸರ್ಕಲ್ ಕಬಡ್ಡಿ ಕ್ಲಬ್‌ಗಳಿವೆ. ಬಹಳಷ್ಟು ಕ್ಲಬ್‌ಗಳಿಗೆ ಕೆನಡಾ, ಇಟಲಿ, ಇಂಗ್ಲೆಂಡ್‌ಗಳಲ್ಲಿರುವ ಅನಿವಾಸಿ ಭಾರತೀಯರಿಂದ ಹಣ ಹರಿದು ಬರುತ್ತದೆ. ಹೀಗಾಗಿ ಒಬ್ಬೊಬ್ಬ ಆಟಗಾರನೂ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಗಳಿಸುತ್ತಾನೆ.

- ವಿದೇಶದಲ್ಲಿಯೂ ಹೀಗೆ ಹಣ ಸಿಗುತ್ತಾ ?

ಹೌದು, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಸಿಖ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ `ಸರ್ಕಲ್ ಕಬಡ್ಡಿ' ಟೂರ್ನಿಗಳು ನಡೆಯುತ್ತವೆ. ಆಗ ಭಾರತದಿಂದಲೇ ಆಟಗಾರರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಕೈಗೆ ಲಕ್ಷಾಂತರ ರೂಪಾಯಿ ನೀಡುತ್ತಾರೆ.

- ಬೆಟ್ಟಿಂಗ್ ಇದೆಯಾ ?

ಇಂತಹ ರೋಚಕ ಆಟದಲ್ಲಿ ಜನ ಬೆಟ್ಟಿಂಗ್ ನಡೆಸುವುದು ಸಹಜ ತಾನೆ. ಒಂದೊಂದು ರೈಡ್‌ಗೂ ಲಕ್ಷಾಂತರ ರೂಪಾಯಿಗಳ ಬೆಟ್ಟಿಂಗ್ ಇದ್ದೇ ಇರುತ್ತದೆ.ಮೂರನೇ ವಿಶ್ವಕಪ್

- 2012ರ ವಿಶ್ವಕಪ್ ಸರ್ಕಲ್ ಕಬಡ್ಡಿ ಡಿಸೆಂಬರ್ 1ರಂದು ಆರಂಭವಾಗಿದ್ದು, 15ರವರೆಗೆ ನಡೆಯಲಿದೆ.

- ಪಂಜಾಬ್ ರಾಜ್ಯದ 13 ಪ್ರಮುಖ ನಗರಗಳಲ್ಲಿ ಈ ಕೂಟದ ಪಂದ್ಯಗಳು ನಡೆಯುತ್ತಿವೆ.

- ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಅಘ್ಘಾನಿಸ್ತಾನ, ಡೆನ್ಮಾರ್ಕ್, ಅಮೆರಿಕ, ಕೆನಡಾ, ನ್ಯೂಜಿಲೆಂಡ್, ನಾರ್ವೆ, ಶ್ರೀಲಂಕಾ, ಇಟಲಿ,  ಸ್ಕಾಟ್‌ಲೆಂಡ್, ಸಿಯೆರ್‌ಲೋನ್, ಅರ್ಜೆಂಟಿನಾ, ಇರಾನ್, ಕೆನ್ಯಾ ತಂಡಗಳು ಇಲ್ಲಿ ಹಣಾಹಣಿ ನಡೆಸುತ್ತಿವೆ.

- ಪ್ರಶಸ್ತಿ ಗೆದ್ದವರಿಗೆ ಅಧಿಕೃತವಾಗಿ 2ಕೋಟಿ ರೂಪಾಯಿಗಳ ಬಹುಮಾನ ನೀಡಲಾಗುತ್ತದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ 1ಕೋಟಿ ಮತ್ತು 50ಲಕ್ಷ ರೂಪಾಯಿಗಳನ್ನು ಪಡೆಯುತ್ತವೆ.

- ಪಾಕಿಸ್ತಾನದ ಜಿಯೊ ಮತ್ತು ಪಿಟಿಸಿ ವಾಹಿನಿಗಳು ಈ ಪಂದ್ಯಗಳನ್ನು ಪಾಕ್‌ದಾದ್ಯಂತ ನೇರ ಪ್ರಸಾರ ಮಾಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry