ಭಾನುವಾರ, ಡಿಸೆಂಬರ್ 15, 2019
26 °C

ಕಬ್ಬನ್ ಉದ್ಯಾನದಲ್ಲಿ `ಪಾರಿವಾಳಕ್ಕೆ ಕಾಳು' ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬನ್ ಉದ್ಯಾನದಲ್ಲಿ `ಪಾರಿವಾಳಕ್ಕೆ ಕಾಳು' ಸಂಘರ್ಷ

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಪ್ರತಿನಿತ್ಯ ಪಾರಿವಾಳಗಳಿಗೆ ಕಾಳು ಹಾಕುತ್ತಿರುವುದು ನಡಿಗೆದಾರರು ಹಾಗೂ ಪಕ್ಷಿ ಪ್ರೇಮಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ನಡಿಗೆದಾರರ ದೂರಿನ ಹಿನ್ನೆಲೆಯಲ್ಲಿ ಕಾಳು ಎಸೆಯುವು ದಕ್ಕೆ ಬುಧವಾರದಿಂದ ನಿರ್ಬಂಧ ಹೇರಲಾಗಿದೆ.ಪಾರಿವಾಳಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿರುವುದರಿಂದ ನಡಿಗೆಗೆ ತೊಂದರೆಯಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ನಡಿಗೆದಾರರ ಸಂಘದ ಸದಸ್ಯರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬುಧವಾರ ಬೆಳಿಗ್ಗೆ ನಿರ್ಬಂಧ ವಿಧಿಸಲಾಯಿತು. ಕಾಳು ಎಸೆಯಲು ಬಂದವರನ್ನು ವಾಪಸ್ ಕಳುಹಿಸಲಾಯಿತು. ಈ ವಿಷಯ ಮಾತಿನ ಜಟಾಪಟಿಗೂ ಕಾರಣವಾಯಿತು. ಕೆಲವು ಪಕ್ಷಿಪ್ರೇಮಿಗಳು ನಿರ್ಬಂಧ ಲೆಕ್ಕಿಸದೆ ಕಾಳುಗಳನ್ನು ಹಾಕಿಯೇ ತೆರಳಿದರು.ಉದ್ಯಾನದೊಳಗೆ ಹಲವು ಸಮಯದಿಂದ ಸುಮಾರು 5,000 ಕ್ಕೂ ಅಧಿಕ ಪಾರಿವಾಳಗಳಿಗೆ ಪ್ರತಿನಿತ್ಯ ಆಹಾರ ಹಾಕಲಾಗುತ್ತಿದೆ. ಸುಮಾರು 30ಕ್ಕೂ ಅಧಿಕ ಮಂದಿ ಕೆ.ಜಿ.ಗಟ್ಟಲೆ ಕಾಳು ಹಾಕುತ್ತಿದ್ದರು. ಹೈಕೋರ್ಟ್ ಸಮೀಪದಲ್ಲಿ ಪಾರಿವಾಳಗಳಿಗೆ ಕಾಳು ಹಾಕಲಾಗುತ್ತಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಲ್ಲಿ ನಿರ್ಬಂಧ ವಿಧಿಸಲಾಯಿತು. ಬಳಿಕ ಎನ್‌ಜಿಒ ಸಭಾಂಗಣದ ಸಮೀಪ, ಕೇಂದ್ರ ಗ್ರಂಥಾಲಯದ ಹತ್ತಿರ ಕಾಳು ಹಾಕುವ ಪರಿಪಾಠ ಬೆಳೆದು ಬಂತು. ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉದ್ಯಾನದೊಳಗೆ ಕಾಳು ಎಸೆಯಲು ತೋಟಗಾರಿಕಾ ಇಲಾಖೆ ಅನುಮತಿ ನೀಡಿತು. ಇದಾದ ಬಳಿಕ ಜಯಚಾಮರಾಜೇಂದ್ರ ವೃತ್ತದ ಬಳಿ, ಕಾರಂಜಿಗಳ ಬಳಿಯಲ್ಲಿ ಪಕ್ಷಿ ಪ್ರೇಮಿಗಳು ಕಾಳುಗಳನ್ನು ಹಾಕಲಾರಂಭಿಸಿದರು. ಇದರಿಂದಾಗಿ ಉದ್ಯಾನಕ್ಕೆ ಬರುವ ಪಾರಿವಾಳಗಳ ಸಂಖ್ಯೆಯಲ್ಲೂ ಹೆಚ್ಚಳವಾಯಿತು. ಉದ್ಯಾನದ ಕಾರಂಜಿಗಳಿಗೂ ಹಾನಿ ಉಂಟು ಮಾಡಿದವು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.`ಈ ಹವ್ಯಾಸದಿಂದಾಗಿ ಬೆಳಿಗ್ಗೆ ಹೊತ್ತು ನಡಿಗೆದಾರರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂತು. ಪಾರಿವಾಳಗಳ ಹಿಕ್ಕೆ, ಪುಕ್ಕಗಳು ಮೈಮೇಲೆ ಬೀಳುತ್ತಿದೆ ಎಂದು ನಡಿಗೆದಾರರು ದೂರಿದರು. ಈ ಸಂಬಂಧ ತೋಟಗಾರಿಕಾ ಇಲಾಖೆಗೆ ಹಾಗೂ ಸಚಿವರಿಗೆ ದೂರು ಸಲ್ಲಿಸಿದರು. ಪಾರಿವಾಳಗಳು ಬಿಟ್ಟ ಆಹಾರದಿಂದ ಹೆಗ್ಗಣಗಳ ಸಂತಾನ ವೃದ್ಧಿಯಾಯಿತು. ಕೆಲವೇ ತಿಂಗಳಲ್ಲಿ ಹೆಗ್ಗಣಗಳ ಸಂಖ್ಯೆ ನೂರಾರಾಯಿತು. ಇವುಗಳು ಬಿಲ ತೋಡಿ ಗಿಡಗಳ ಬೆಳವಣಿಗೆಗೆ ಅಡ್ಡಿಯಾದವು. ಕೇಂದ್ರ ಗ್ರಂಥಾಲಯದ ಗೋಡೆಗಳಿಗೂ ಹಾನಿ ಮಾಡಿದವು' ಎಂದು ಅಧಿಕಾರಿಗಳು ದೂರುತ್ತಾರೆ.ಲಾಲ್‌ಬಾಗ್ ಹಾಗೂ ಕಬ್ಬನ್ ಉದ್ಯಾನದಲ್ಲಿ ಪಾರಿವಾಳಗಳ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗವು ಅಧ್ಯಯನ ನಡೆಸಿ ಇಲಾಖೆಗೆ ವರದಿ ಸಲ್ಲಿಸಿತು. `ಪಾರಿವಾಳಗಳಿಂದಾಗಿ ಹಕ್ಕಿ ಜ್ವರ ಹರಡುವ ಸಾಧ್ಯತೆ ಇದೆ. ಇದಕ್ಕೆ ನಿಯಂತ್ರಣ ಹೇರಬೇಕು. ಉದ್ಯಾನದಲ್ಲಿ ಅಡ್ಡಾಡುವ ಮಕ್ಕಳ ಆರೋಗ್ಯಕ್ಕೂ ಹಾನಿ ಉಂಟಾಗುತ್ತಿದೆ ಎಂದು ವರದಿಯಲ್ಲಿ  ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರವೃತ್ತಿಗೆ ಕಡಿವಾಣ ಹಾಕುವ ಯತ್ನ ನಡೆಸಲಾಯಿತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಕೈಬಿಡಲಾಯಿತು. ಈಗ ನಡಿಗೆದಾರರು ಹಾಗೂ ಪಕ್ಷಿಪ್ರೇಮಿಗಳ ನಡುವೆ ಜಟಾಪಟಿ ನಡೆದಿದೆ' ಎಂದು ಅವರು ಮಾಹಿತಿ ನೀಡಿದರು.`ಪಕ್ಷಿಗಳ ಆಹಾರಕ್ಕೆ ಕಲ್ಲು- ಅನ್ಯಾಯದ ಪರಮಾವಧಿ'

ಕಬ್ಬನ್ ಉದ್ಯಾನದ ಆಸುಪಾಸಿನಲ್ಲಿ 30 ವರ್ಷದಿಂದ ಪಾರಿವಾಳಗಳಿಗೆ ಕಾಳು ಹಾಕುತ್ತಿದ್ದೇನೆ. ಮೊದಲು ಹೈಕೋರ್ಟ್ ಹತ್ತಿರ ಕಾಳು ಹಾಕಲಾಗುತ್ತಿತ್ತು. ಹೈಕೋರ್ಟ್ ಚಟುವಟಿಕೆಗೆ ತೊಂದರೆಯಾಗುತ್ತಿದೆ ಎಂಬ ಕಾರಣದಿಂದ ನಿರ್ಬಂಧ ವಿಧಿಸಲಾಯಿತು. ಬಳಿಕ ಟೆನಿಸ್ ಕ್ರೀಡಾಂಗಣದ ಸಮೀಪದ ಕಾರಂಜಿ ಹತ್ತಿರ ಕಾಳು ಹಾಕುತ್ತಿದ್ದೆವು. ಇಲ್ಲೂ ಸಂಚಾರ ದಟ್ಟಣೆ ಆಗುತ್ತಿದೆ ಎಂಬ ನೆಪ ಒಡ್ಡಿ ನಿರ್ಬಂಧಿಸಲಾಯಿತು. ಉದ್ಯಾನದೊಳಗೆ ಹಾಕಿ ಎಂದು ತೋಟಗಾರಿಕಾ ಇಲಾಖೆಯವರು ಸೂಚಿಸಿದರು. ಈಗ ಏಕಾಏಕಿ ನಿರ್ಬಂಧ ಹೇರಿದ್ದಾರೆ. ಇದರ ಹಿಂದಿರುವ ಹುನ್ನಾರ ಅರ್ಥವಾಗುತ್ತಿಲ್ಲ. ಪಾರಿವಾಳಗಳಿಂದ ಹಕ್ಕಿ ಜ್ವರ ಬರುತ್ತದೆ ಎಂಬ ಸಬೂಬು ಹೇಳುತ್ತಿದ್ದಾರೆ. ಪಾರಿವಾಳದಿಂದ ಹಕ್ಕಿ ಜ್ವರ ಬಂದಿರುವ ನಿದರ್ಶನ ಈವರೆಗೆ ನಡೆದಿಲ್ಲ. ಪಕ್ಷಿಗಳ ಆಹಾರಕ್ಕೆ ಕಲ್ಲು ಹಾಕುತ್ತಿದ್ದಾರೆ. ಇಂತಹ ತೀರ್ಮಾನ ಅನ್ಯಾಯದ ಪರಮಾವಧಿ.

-ಸಂಜಯ್ ಸಿಸೋಡಿಯಾ, ಪಕ್ಷಿ ಪ್ರೇಮಿ`ಒಂದೇ ಕಡೆ ಕಾಳು ಹಾಕಿ'


ಪಾರಿವಾಳಕ್ಕೆ ಕಾಳು ಎಸೆಯುವುದಕ್ಕೆ ತೋಟಗಾರಿಕಾ ಇಲಾಖೆ ನಿರ್ಬಂಧ ವಿಧಿಸಿಲ್ಲ. ಕಾಳು ಎಸೆಯುವುದರಿಂದ ಸಾರ್ವಜನಿಕರಿಗೆ ಹಾಗೂ ನಡಿಗೆದಾರರಿಗೆ ತೊಂದರೆಯಾಗುತ್ತದೆ ಎಂಬ ದೂರು ಬಂದಿದೆ. ಈ ಸಂಬಂಧ ನಡಿಗೆದಾರರು ಸಚಿವರಿಗೂ ಮನವಿ ಸಲ್ಲಿಸಿದ್ದಾರೆ. ನಡಿಗೆದಾರರ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಬುಧವಾರ ಕಾಳು ಹಾಕುವುದನ್ನು ತಡೆ ಹಾಕಲಾಗಿದೆ. ಉದ್ಯಾನದ ತುಂಬೆಲ್ಲ ಕಾಳು ಹಾಕದಂತೆ ಪಕ್ಷಿ ಪ್ರೇಮಿಗಳಿಗೆ ವಿನಂತಿಸಲಾಗಿದೆ. ಬಾಲಭವನದ ಹತ್ತಿರ ಇರುವ ಬಂಡೆ ಮೇಲೆ ಕಾಳು ಹಾಕುವಂತೆ ಕೇಳಿಕೊಳ್ಳಲಾಗಿದೆ.

- ಮಹಾಂತೇಶ ಮುರಗೋಡು ಉಪನಿರ್ದೇಶಕ, ಕಬ್ಬನ್ ಉದ್ಯಾನ

ಪ್ರತಿಕ್ರಿಯಿಸಿ (+)