ಕಬ್ಬನ್ ಉದ್ಯಾನದ ರಸ್ತೆ ಅವಾಂತರ

7

ಕಬ್ಬನ್ ಉದ್ಯಾನದ ರಸ್ತೆ ಅವಾಂತರ

Published:
Updated:
ಕಬ್ಬನ್ ಉದ್ಯಾನದ ರಸ್ತೆ ಅವಾಂತರ

ಬೆಂಗಳೂರು:  ಮಳೆ ಬಂದರೆ ನಗರದಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ ಎಂದು ಹೇಳಲು ಸಾಧ್ಯವೇ ಇಲ್ಲ. ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ಸಂಗ್ರಹವಾಗುವುದು, ಮನೆಗಳಿಗೆ ನೀರು ಆವರಿಸುವುದು ಸಾಮಾನ್ಯ ಸಂಗತಿ. ಇಂತಹದೇ ಸ್ಥಿತಿ ನಿತ್ಯ ನಗರಕ್ಕೆ ಸಾವಿರಾರು ಜನ ಭೇಟಿ ನೀಡುವ ಕಬ್ಬನ್ ಉದ್ಯಾನದ ರಸ್ತೆಯಲ್ಲೂ ಉಂಟು.ಕಬ್ಬನ್ ಉದ್ಯಾನದಲ್ಲಿರುವ ಬಾಲಭವನದ ಬಿದಿರು ಮನೆ ಎದುರಿರುವ ರಸ್ತೆಯಲ್ಲಿ ಮಳೆ ಬಂದರೆ ರಸ್ತೆಯಲ್ಲಿ `ಕೆರೆ~ಯೇ ನಿರ್ಮಾಣವಾಗುತ್ತದೆ. ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ವಾಹನ ಸಂಚಾರ ಮಾಡಬೇಕಾಗುತ್ತದೆ. ಉದ್ಯಾನಕ್ಕೆ, ಬಾಲಭವನಕ್ಕೆ ಆಗಮಿಸುವ ಚಿಣ್ಣರು ಮತ್ತು ವಿಹಾರಿಗಳಿಗಂತೂ ರಸ್ತೆಯಲ್ಲಿ ನಡೆದಾಡಲು ಪರದಾಡಬೇಕಾದ ಪರಿಸ್ಥಿತಿಯಿದೆ.ನಿತ್ಯ ಸಾವಿರಾರು ಜನ ಬಾಲಭವನಕ್ಕೆ ಭೇಟಿ ನೀಡುತ್ತಾರೆ. ಮಳೆ ಬಂದಾಗ ರಸ್ತೆ ಸ್ಥಿತಿ ನೋಡಿದರೆ ಇತ್ತ ಮತ್ತೊಮ್ಮೆ ಧಾವಿಸಬಾರದು ಎಂದು ರೋಸಿ ಹೋಗುವಷ್ಟು ಇಲ್ಲಿ ಪರಿಸ್ಥಿತಿ ಸೃಷ್ಟಿಯಾಗುತ್ತದೆ.ಬಾಲ ಭವನಕ್ಕೆ ನೀರು: ರಸ್ತೆಯಲ್ಲಿ ಸಂಗ್ರಹವಾದ ನೀರು ಬಾಲಭವನಕ್ಕೆ ನುಗ್ಗುತ್ತದೆ. ಪರಿಣಾಮ ಅಲ್ಲಿ ಅವಾಂತರವೇ ಸೃಷ್ಟಿಯಾಗುತ್ತದೆ. ಆದರೂ, `ಇಲ್ಲಿನ ವಾತಾವರಣವೇ ಉತ್ತಮವಾಗಿಲ್ಲ ಅಂದರೆ ಯಾರು ಬರುತ್ತಾರೆ. ಈವರೆಗೂ ಯಾವುದೇ ಹಾನಿಯಾಗಿಲ್ಲ. ಮಳೆ ನೀರು ಕೆರೆಗೆ ಸೇರುವಂತೆ ಕ್ರಮ ಕೈಗೊಳ್ಳುವುದು ತೋಟಗಾರಿಕೆ ಇಲಾಖೆಯದ್ದು~ ಎನ್ನುತ್ತಾರೆ ಬಾಲಭವನದ ಸಿಬ್ಬಂದಿ.ರಸ್ತೆಯಲ್ಲಿ ನೀರು ಸಂಗ್ರಹವಾಗದಂತೆ ಕೆಲವು ದಿನಗಳ ಹಿಂದೆ ರಸ್ತೆಬದಿಗಳಲ್ಲಿ ಸರಳುಗಳನ್ನು ಅಳವಡಿಸಲಾಗಿತ್ತು. ರಸ್ತೆ ನವೀಕರಣಗೊಂಡ ನಂತರ ಬದಿಗಳಲ್ಲಿ ಟೈಲ್ಸ್ ಅಳವಡಿಸಿರುವ ಕಾರಣ ನೀರು ಸರಾಗವಾಗಿ `ಲೋಟಸ್~ ಕೊಳಕ್ಕೆ ಸೇರದೇ ವ್ಯರ್ಥವಾಗಿ ಹರಿಯುತ್ತಿದೆ.ಕಬ್ಬನ್ ಉದ್ಯಾನದ ಈ ಕೊಳದಲ್ಲಿ ವಿವಿಧ ಭಾಗಗಳಿಂದ ಹರಿದು ಬಂದ ಮಳೆನೀರನ್ನು ಸಂಗ್ರಹಿಸಲಾಗುತ್ತದೆ. ಈ ನೀರನ್ನು ಬಾಲಭವನದ ದೋಣಿ ವಿಹಾರ ನಡೆಸುವ ಕೆರೆಗೆ ಶುದ್ಧೀಕರಿಸಿ ಬಿಡಲಾಗುತ್ತಿದೆ. ನಗರದಲ್ಲಿ ಹಲವು ಬಾರಿ ಉತ್ತಮ ಮಳೆಯಾದರೂ ಕೆರೆ ಇನ್ನೂ ಭರ್ತಿಯಾಗಿಲ್ಲ. ಕಾರಣ ಈ ರಸ್ತೆಯ ಮಳೆ ನೀರೆಲ್ಲಾ ಚರಂಡಿ ಪಾಲಾಗುತ್ತಿದೆ.ಅಪಘಾತ: ವಿಧಾನಸೌಧದ ಮುಂಭಾಗ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಾರಣ ಇದೇ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಸ್ತೆ ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ನಿರ್ಧರಿಸಲಾಗಿತ್ತು.ಬಾಲಭವನಕ್ಕೆ ಬರುವ ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಅಪಘಾತಗಳ ಸಂಭವ ಇರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಬೇಕು ಎಂಬುದು ಬಾಲ ಭವನಕ್ಕೆ ಬರುವ ವಿಹಾರಿಗಳ ಕೋರಿಕೆ.ಮಳೆಯ ನೀರು ಕೆರೆ ಸೇರುವಂತೆ ಕ್ರಮ ತೆಗೆದುಕೊಳ್ಳಲು ರಸ್ತೆ ಬದಿ ಬೃಹದಾಕಾರವಾಗಿ ಬೆಳೆದಿರುವ ಬಿದಿರು ಮೆಳೆಗಳು ಅಡ್ಡಿಯಾಗಿವೆ. ಬಿದಿರು ತೆರವು ಮಾಡಲು ಮುಂದಾದರೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ. ಈ ಕುರಿತು ಪ್ರತ್ಯೇಕ ಕೊಳವೆ ಅಳವಡಿಸುವ ಮೂಲಕ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಜಗದೀಶ್ `ಪ್ರಜಾವಾಣಿ~ ಗೆ ತಿಳಿಸಿದ್ದಾರೆ.ಕರಗದ ಕುಂಟೆ ಕಲ್ಯಾಣಿ ಅಭಿವೃದ್ಧಿ: ಕಬ್ಬನ್ ಉದ್ಯಾನದಲ್ಲಿರುವ ಕರಗದ ಕುಂಟೆ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಕೈಗೆತ್ತುಕೊಳ್ಳಲಾಗಿದೆ. ಕರಗದ ಉತ್ಸವ ಆರಂಭಕ್ಕೂ ಮುನ್ನ ಈ ಕಲ್ಯಾಣಿಯಲ್ಲೇ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಕಲ್ಯಾಣಿಯಲ್ಲಿ ಹೂಳು ತುಂಬಿದ್ದು ಹೆಚ್ಚಿನ ನೀರು ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ.ಈ ಸಂಬಂಧ ತೋಟಗಾರಿಕೆ ಇಲಾಖೆಯಿಂದ 20 ಲಕ್ಷ ರೂಪಾಯಿಗಳನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಈಗಿರುವ ಕಲ್ಯಾಣಿಯ ಮಟ್ಟವನ್ನು 4 ಅಡಿಗಳವರೆಗೆ ಹೆಚ್ಚಿಸುವುದು ಸೇರಿದಂತೆ ಸುತ್ತಲಿನ ಪ್ರದೇಶವನ್ನು ಸುಂದರಗೊಳಿಸಲು ಯೋಜನೆ ಸಿದ್ಧಗೊಂಡಿದೆ. ಕಾಮಗಾರಿಗೆ ಮಳೆ ಅಡ್ಡಿಯಾಗಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.ದಿನನಿತ್ಯ ಬಾಲಭವನ ಹಾಗೂ ಕಬ್ಬನ್ ಉದ್ಯಾನಕ್ಕೆ ನೂರಾರು ಮಕ್ಕಳು ಪೋಷಕರು ಮನರಂಜನೆಗಾಗಿ ಆಗಮಿಸುತ್ತಾರೆ. ಅವರ ಮನರಂಜನೆಗೆ ತಣ್ಣೀರೆರಚದೆ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವುದೇ...?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry