ಕಬ್ಬನ್ ಪಾರ್ಕ್ ಸಸ್ಯಸಂಕುಲಕೆ ಮಳೆ ನೀರ ಪೋಷಣೆ

7

ಕಬ್ಬನ್ ಪಾರ್ಕ್ ಸಸ್ಯಸಂಕುಲಕೆ ಮಳೆ ನೀರ ಪೋಷಣೆ

Published:
Updated:
ಕಬ್ಬನ್ ಪಾರ್ಕ್ ಸಸ್ಯಸಂಕುಲಕೆ ಮಳೆ ನೀರ ಪೋಷಣೆ

ಬೆಂಗಳೂರು: ಮಳೆ ನೀರನ್ನೇ ಸಂಗ್ರಹಿಸಿ ಸಸಿಗಳಿಗೆ ನೀರುಣಿಸಲು ತೋಟಗಾರಿಕೆ ಇಲಾಖೆಯು ಕಬ್ಬನ್ ಉದ್ಯಾನದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಂಡಿದೆ.ಮಳೆಗಾಲದಲ್ಲಿ ಸುರಿಯುವ ಮತ್ತು ಹರಿಯುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಸಿಗಳಿಗೆ ಜೀವ ತುಂಬುವುದಕ್ಕೆ ಇಲಾಖೆಯು ಈಗಾಗಲೇ ಸಜ್ಜಾಗಿದೆ. ಉದ್ಯಾನದಲ್ಲಿ ಸುಮಾರು 1,900 ನೀರು ಸಿಂಚನ ಕೊಳವೆಗಳಿವೆ. ಈ ಕೊಳವೆಗಳಿಗೆ ಕಂಠೀರವ ಕ್ರೀಡಾಂಗಣದ ಮುಂಭಾಗದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಈಗಾಗಲೇ ನೀರು ಪೂರೈಕೆಯಾಗುತ್ತಿದ್ದು, ಇದರ ಜತೆಯಲ್ಲಿಯೇ ನೀರು ಸಂಗ್ರಹ ಪದ್ಧತಿಗೆ ಚಾಲನೆ ನೀಡಲಾಗಿದೆ.ಬೇಸಿಗೆ, ಮಳೆ ಹಾಗೂ ಚಳಿಗಾಲ ಸೇರಿದಂತೆ ಎಲ್ಲ ಕಾಲದಲ್ಲೂ ಉದ್ಯಾನಗಳಲ್ಲಿರುವ ಸಸಿಗಳಿಗೆ ನೀರು ಉಣಿಸುವ ಅವಶ್ಯಕತೆಯಿರುತ್ತದೆ. 192 ಎಕರೆ ವಿಸ್ತೀರ್ಣವಿರುವ ಕಬ್ಬನ್ ಉದ್ಯಾನದಲ್ಲಿ ಸುಮಾರು 18 ಸಾವಿರ ಮರಗಳಿದ್ದು, ಅದರಲ್ಲಿ 400 ಜಾತಿಯ ವಿಶಿಷ್ಟ ತಳಿಗಳಿವೆ. ಪ್ರತಿ ದಿನ 15 ದಶಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ. ಆದರೆ, ಮಳೆಗಾಲದಲ್ಲಿ ಕನಿಷ್ಠ 5 ದಶಲಕ್ಷ ಲೀಟರ್ ನೀರು ಉಣಿಸಬೇಕು. ಹಾಗಾಗಿ ಇಲಾಖೆಯ ವಿವಿಧ ಜಲಮೂಲಗಳಿಂದ ನೀರು ಸಂಗ್ರಹಿಸುತ್ತಿದ್ದು, ಹೆಚ್ಚಳಗೊಂಡ ನೀರನ್ನು ಇಂಗು ಗುಂಡಿಗಳಿಗೆ ಹರಿಬಿಡುತ್ತಿದೆ.ಕರಗುಂಟೆ ಕಲ್ಯಾಣಿ ಕಾಮಗಾರಿ: ಕಂಠೀರವ ಕ್ರೀಡಾಂಗಣದ ಮುಂಭಾಗದಲ್ಲಿರುವ ಕಬ್ಬನ್ ಉದ್ಯಾನದಲ್ಲಿನ ಕರಗುಂಟೆ ಪ್ರದೇಶ ತುಸು ತಗ್ಗು ಪ್ರದೇಶವಾದ್ದರಿಂದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಗೊಳ್ಳುತ್ತದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಕಲ್ಯಾಣಿಯು 23 ಲಕ್ಷ ಲೀಟರ್ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿತ್ತು. ಪ್ರಸ್ತುತ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂರು ಅಡಿಯಲ್ಲಿದ್ದ ಕಲ್ಯಾಣಿಯನ್ನು ಹತ್ತು ಅಡಿಯವರೆಗೆ ಆಳ ಮಾಡಲಾಗಿದೆ. ಇದರಿಂದ ಸುಮಾರು 65 ಲಕ್ಷ ಲೀಟರ್ ನೀರನ್ನು ಹಿಡಿದಿಡಬಹುದು. ನೀರಿನ ಅಭಾವ ಉಂಟಾದಾಗ ಕೊಳವೆಯ ಮೂಲಕ ಬಳಸಿಕೊಳ್ಳಬಹುದು.  ಐತಿಹಾಸಿಕ ಮಹತ್ವ ಹೊಂದಿರುವ ಕರಗ ಮಹೋತ್ಸವದಲ್ಲಿ ಕರಗುಂಟೆ ಕಲ್ಯಾಣಿಯು ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿ ವರ್ಷ ನಗರದಲ್ಲಿ ನಡೆಯುವ ಕರಗ ಮಹೋತ್ಸವದಲ್ಲಿ ತಿಗಳ ಸಮುದಾಯದವರು ಈ ಕಲ್ಯಾಣಿಗೆ ಪೂಜೆ ಸಲ್ಲಿಸಿಯೇ ಕರಗ ಮಹೋತ್ಸವ ನಡೆಸುತ್ತಾರೆ.ಇನ್ನು, ವಿಧಾನಸೌಧ ಮತ್ತು ವಿಕಾಸಸೌಧ, ಕೆ.ಆರ್. ವೃತ್ತದಲ್ಲಿರುವ ಇತರೆ ಸರ್ಕಾರಿ ಕಚೇರಿಗಳ ಕೊಳಚೆ ನೀರು ಕಂಠೀರವ ಕ್ರೀಡಾಂಗಣದ ಮುಂಭಾಗದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಶುದ್ದಿಯಾಗುತ್ತದೆ. ಶುದ್ಧಗೊಂಡ ನೀರನ್ನೇ ಉದ್ಯಾನ ಸಸಿಗಳಿಗೆ ಬಳಸಲಿದೆ.ಶುದ್ಧಗೊಂಡ ನೀರು ಹರಿದು ಬರುವ ಮಾರ್ಗದ ಮಧ್ಯೆ ಅಂದರೆ, ಸೆಂಚುರಿ ಕ್ಲಬ್‌ನಿಂದ ಹಡ್ಸನ್ ವೃತ್ತದವರೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಪ್ರತಿ 25 ಅಡಿಗೆ ನಾಲ್ಕು ಅಡಿ ಆಳ ಮತ್ತು ಅಗಲದ ಇಂಗು ಗುಂಡಿಗಳನ್ನು ಸುಮಾರು 19 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೀಗೆ ಸುಮಾರು 50 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.ಈ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಜಗದೀಶ್, `ಈ ವರ್ಷ ಸುಮಾರು 200ಕ್ಕೂ ಹೆಚ್ಚಿನ ತಳಿಗಳನ್ನು ನೆಡಲಾಗಿದೆ. ಕಮಲ, ನೈದಿಲೆ ಸೇರಿದಂತೆ ಕೆಲವು ತಳಿಗಳಿಗೆ ಎಲ್ಲ ಕಾಲದಲ್ಲೂ ನೀರಿನ ಅವಶ್ಯಕತೆಯಿರುತ್ತದೆ. ಇದನ್ನು ಸಾಕಾರಗೊಳಿಸಲು ಇಲಾಖೆ ಸಿದ್ದತೆ ನಡೆಸಿಕೊಂಡಿದೆ~ ಎಂದು ಹೇಳಿದರು.  `ಇದರೊಂದಿಗೆ ಬಾಲಭವನದ ಸಮೀಪದಲ್ಲಿ 2 ಲಕ್ಷ ರೂಪಾಯಿ ವೆಚ್ಚದಲ್ಲಿ ತಾವರೆಕೊಳವನ್ನು ನಿರ್ಮಿಸಲಾಗಿದೆ. ಈ ಕೊಳವು 15 ಲಕ್ಷ ಲೀಟರ್ ನೀರನ್ನು ಹಿಡಿದಿಡುತ್ತದೆ. ಕೊಳ ತುಂಬಿದರೆ ಹೆಚ್ಚುವರಿ ನೀರನ್ನು ಕೊಳವೆ ಮೂಲಕ ವೆಂಕಟಪ್ಪ ಕಲಾ ಗ್ಯಾಲರಿ ಸಮೀಪವಿರುವ ಇಂಗು ಗುಂಡಿಗೆ ಬಿಡಲಾಗುತ್ತದೆ. ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಮುಂದಿನ ದಿನಗಳಲ್ಲಿ ಈ ಕೊಳದಲ್ಲಿ ಯಥೇಚ್ಛವಾಗಿ ತಾವರೆ ಹಾಕಲು ಉದ್ದೇಶಿಸಲಾಗಿದೆ.  ಇದರಿಂದ ಉದ್ಯಾನದ ಅಂದ ಹೆಚ್ಚುವುದಲ್ಲದೇ, ಶುದ್ಧ ನೀರನ್ನು ಇಂಗಿಸಲು ಸಹಾಯವಾಗುತ್ತದೆ~ ಎಂದು ಹೇಳಿದರು.ಪರಿಸರವಾದಿ ಅ.ನ. ಯಲ್ಲಪ್ಪರೆಡ್ಡಿ ಪ್ರತಿಕ್ರಿಯಿಸಿ, `ಕೆಲವು ತಳಿಗಳಿಗೆ ಎಲ್ಲ ಕಾಲದಲ್ಲೂ ಯಥೇಚ್ಛ ನೀರು ಪೂರೈಸಬೇಕಾಗುತ್ತದೆ. ಇದರೊಂದಿಗೆ ಶುದ್ಧ ನೀರು ಪೂರೈಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸೀಸ, ಕಬ್ಬಿಣ ಸೇರಿದಂತೆ ವಿಷಕಾರಕ ಖನಿಜಾಂಶವಿರುವ ನೀರು ಪೂರೈಕೆ ಸಸಿಯನ್ನು ಹಾಳುಗೆಡವುತ್ತದೆ. ಹಾಗಾಗಿ, ಉದ್ಯಾನಗಳ ಕೊಳದಲ್ಲಿ ನೈದಿಲೆ ಮತ್ತು ಕಮಲವನ್ನು ಬೆಳೆಸುವುದು ಉತ್ತಮ~ ಎಂದು ಸಲಹೆ ನೀಡಿದರು.`ಸಸಿಗಳಿಗೆ ನೀರು ಪೂರೈಕೆ ಮಾಡುವ ಕಾರ್ಯದಂತೆ, ಅಂತರ್ಜಲ ಹೆಚ್ಚಿಸುವ ಬಗ್ಗೆಯೂ ಒತ್ತು ನೀಡಬೇಕು. ಉದ್ಯಾನದಲ್ಲಿ ನೀರು ಹರಿಯುವ ಜಾಗದ ವಿರುದ್ಧವಾಗಿ ಸಣ್ಣಗೆ ದಿಬ್ಬ ಮಾಡಿ, ಅಲ್ಲಲ್ಲಿ ನೀರು ನಿಂತು ಇಂಗುವಂತೆ ಮಾಡಬೇಕು. ಹೀಗೆ ಮಾಡಿದಾಗ ನಿಂತ ನೀರು ಮರದ ಬೇರುಗಳನ್ನು ಸಡಿಲಗೊಳಿಸಿ, ಭೂಮಿಯ ಆಳಕ್ಕೆ ಇಳಿಯುತ್ತದೆ. ನಗರದ ಎಲ್ಲ ಪ್ರಮುಖ ಉದ್ಯಾನಗಳಲ್ಲಿ ಇಂತಹ ವಿನ್ಯಾಸವನ್ನು ಅಳವಡಿಸಿಕೊಳ್ಳಬೇಕು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry