ಬುಧವಾರ, ಜೂನ್ 16, 2021
27 °C

ಕಬ್ಬಳ: ನಾಳೆ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ತಾಲ್ಲೂಕಿನ ಕಬ್ಬಳ (ಎನ್.ಜಿ. ಹಳ್ಳಿ) ಗ್ರಾಮದಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿಯ ನೂತನ ರಥ ನಿರ್ಮಿಸಿದ್ದು, ಮಾರ್ಚ್ 8ರಂದು ಬೆಳಿಗ್ಗೆ 8.30 ಕ್ಕೆ ರಥೋತ್ಸವ ನಡೆಯಲಿದೆ.ಜೋಡಿ ತುಂಬಿನಕೆರೆಯ ಶಿಲ್ಪಿ ರಾಮಚಂದ್ರಾಚಾರಿ ಮತ್ತು ಐವರು ಸಹಾಯಕರು ನೂತನ ರಥ ನಿರ್ಮಿಸಿದ್ದಾರೆ. ರಥ ಒಟ್ಟು 32 ಅಡಿ ಎತ್ತರವಿದ್ದು, 326 ಘನ ಅಡಿ ಬೇವು, ಬಾಗಿ ಮರ ಮತ್ತು 45 ಘನ ಅಡಿ ತೇಗದ ಮರ ಬಳಸಲಾಗಿದೆ. ರಥದಲ್ಲಿ ತೇಗದಿಂದ ಲಕ್ಷೀ, ಸರಸ್ವತೀ, ಗಣಪತಿ, ಗರುಡ, ಆಂಜನೇಯ ಮತ್ತು ಲಕ್ಷ್ಮೀ ನರಸಿಂಹಸ್ವಾಮಿ ವಿಗ್ರಹಗಳನ್ನು ಕೆತ್ತಲಾಗಿದೆ. ಮೂಲೆಗಳಲ್ಲಿ ನಾಲ್ಕು ಕುದುರೆ, ಮುಂಭಾಗದಲ್ಲಿ ನಾಲ್ಕು ಸಿಂಹದ ಮಾದರಿ ನಿರ್ಮಿಸಲಾಗಿದೆ.ಮರ, ಕಬ್ಬಿಣ, ಹಿತ್ತಾಳೆಯ ತಗಡುಗಳು, ಶಿಲ್ಪಿಯ ಸಂಭಾವನೆ ಮತ್ತು ಸಾರಿಗೆ ವೆಚ್ಚಗಳು ಸೇರಿ ಒಟ್ಟು ರೂ.25 ಲಕ್ಷ ಖರ್ಚಾಗಿದೆ. ಗ್ರಾಮಸ್ಥರು ಮತ್ತು ಭಕ್ತರು ರಥ ನಿರ್ಮಾಣಕ್ಕೆ ಹಣ ನೀಡಿದ್ದು, ಹಗಲಿರುಳು ಶ್ರಮಿಸಿ ಏಳು ತಿಂಗಳಲ್ಲಿ ನೂತನ ರಥ ನಿರ್ಮಿಸಲಾಗಿದೆ. ರಥ ನಿರ್ಮಾಣಕ್ಕೆ ಸಹಕಾರ ಮತ್ತು ಆರ್ಥಿಕ ನೆರವು ನೀಡಿದ ಗ್ರಾಮಸ್ಥರು ಮತ್ತು ಸ್ವಾಮಿಯ ಸಮಸ್ತ ಭಕ್ತರನ್ನು ಅಭಿನಂದಿಸುತ್ತೇವೆ ಎನ್ನುತ್ತಾರೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ನಿವೃತ್ತ ಶಿಕ್ಷಕ ಎಸ್. ಚಂದ್ರಪ್ಪ ಹಾಗೂ ಕಾರ್ಯದರ್ಶಿ ಕೆ.ಆರ್. ಮಲ್ಲಪ್ಪ.ಇಲಿನ ದೇವರಿಗೆ ಕಂಬದ ನರಸಿಂಹಸ್ವಾಮಿ ಎಂಬ ಹೆಸರಿದ್ದು, ಕಂಬದ ಮಾದರಿಯಲ್ಲಿರುವ ಒಡಮೂಡಿದ ವಿಶೇಷ ಕಲ್ಲಿನ ವಿಗ್ರಹವಿದೆ. ದೇವರ ನೆಲೆ ಮತ್ತು ಪವಾಡಗಳ ಬಗ್ಗೆ ಹಿರಿಯರು ಅನೇಕ ದಂತಕತೆ ಹೇಳುತ್ತಾರೆ.

 

ಹಸುವೊಂದು ಮನೆಯಲ್ಲಿ ಒಂದು ದಿನವೂ ಹಾಲು ಕೊಡುತ್ತಿರಲಿಲ್ಲ. ಹಸುವಿನ ಬಗ್ಗೆ ಅನುಮಾನಗೊಂಡ ಮಾಲೀಕ ಹಸು ಎಲ್ಲಿ ಹಾಲು ಕೊಡುತ್ತಿರುಬಹುದು ಎಂದು ಪತ್ತೆ ಹಚ್ಚಲು ಮುಂದಾದ. ಒಂದು ದಿನ ಹಸುವನ್ನೇ ಹಿಂಬಾಲಿಸಿ ಹೋದಾಗ ಊರ ಹೊರಗಿನ ಮೆಳೆಯೊಂದರಲ್ಲಿ ನಿಂತು ಹಾಲು ಸುರಿಸುತ್ತಿತ್ತು. ಇದನ್ನು ಗಮನಸಿದ ಅವನು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ.ನಂತರ ಊರಿನ ಜನ ಅಲ್ಲಿನ ಮೆಳೆಗಳನ್ನು ತೆರವುಗೊಳಿಸಿ ನೋಡಿದಾಗ ಕಂಬದ ಆಕಾರದ ವಿಗ್ರಹವೊಂದು ಕಣ್ಣಿಗೆ ಬಿತ್ತು. ಆಗ ಅಲ್ಲಿ ದೇವಾಲಯ ನಿರ್ಮಿಸಿ ದೇವರನ್ನು ಪೂಜಿಸಲಾಯಿತು. ಅಂದಿನಿಂದಲೂ ಕಂಬದ ದೇವರು ಬೆಳೆಯುತ್ತಿದ್ದು, ಈಗ 6 ಅಡಿ ಎತ್ತರವಿದೆ ಎನ್ನುತ್ತಾರೆ ಅವರು.ಮಾರ್ಚ್ 9ರಂದು ಓಕಳಿ, ಕಂಕಣ ವಿಸರ್ಜನೆ, ಹೂವಿನ ಪಲ್ಲಕ್ಕಿ ಉತ್ಸವ, ಶಯನೋತ್ಸವಗಳು ನಡೆಯಲಿದ್ದು, ರಾತ್ರಿ `ಕುಡುಕ ಕಟ್ಟಿದ ಪ್ರೇಮ ಕೋಟೆ~ ನಾಟಕ ಪ್ರದರ್ಶನ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.