ಕಬ್ಬಿಗೆ ಏಕರೂಪದ ಬೆಲೆ: ಮೂಡದ ಒಮ್ಮತ

7

ಕಬ್ಬಿಗೆ ಏಕರೂಪದ ಬೆಲೆ: ಮೂಡದ ಒಮ್ಮತ

Published:
Updated:

ಬೆಳಗಾವಿ: ಪ್ರಸಕ್ತ ವರ್ಷದ ಕಬ್ಬಿನ ಬೆಲೆ ನಿಗದಿಗಾಗಿ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಕರೆದಿದ್ದ ಸಭೆಯಲ್ಲಿ ಸಹಮತ ವ್ಯಕ್ತಗೊಳ್ಳದೇ ಇರುವುದರಿಂದ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ.ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹಾಗೂ ಸಕ್ಕರೆ ನಿರ್ದೇಶನಾಲಯದ ಪ್ರಭಾರಿ ಆಯುಕ್ತ ಹರೀಶ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ರೂ. 3 ಸಾವಿರ ನೀಡಬೇಕು ಎಂದು ರೈತರು ಪಟ್ಟು ಹಿಡಿದರೆ, ಸಕ್ಕರೆ ಕಾರ್ಖಾನೆ ಮಾಲೀಕರು ರೂ. 2000ದಿಂದ 2550ರವರೆಗೆ ನೀಡುವ ತಮ್ಮ ನಿಲುವನ್ನು ಬದಲಾಯಿಸಲಿಲ್ಲ.ಡಿಸೆಂಬರ್ 5ರೊಳಗೆ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು. ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ 3000 ರೂಪಾಯಿ ಘೋಷಿಸಬೇಕು ಎಂದು ರೈತ ಸಂಘಟನೆಗಳ ಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, `ಕಳೆದ ವರ್ಷ ಸರ್ಕಾರ ನಿಗದಿಪಡಿಸಿದಂತೆ 2000 ರೂಪಾಯಿ ಮುಂಗಡವನ್ನು ಪಾವತಿಸದ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಆಡಳಿತ ವೈಫಲ್ಯಗಳಿಂದ ಸಕ್ಕರೆ ಕಾರ್ಖಾನೆಗಳಲ್ಲಿ ಹಾನಿ ಸಂಭವಿಸುತ್ತಿದ್ದು, ಅದನ್ನು ರೈತರ ಮೇಲೆ ಹಾಕಬಾರದು' ಎಂದು ಒತ್ತಾಯಿಸಿದರು.`ಎಸ್‌ಎಪಿ ಕಾಯ್ದೆ ಜಾರಿಗೊಳಿಸಿದರೆ, ರೈತರು ಪ್ರತಿ ವರ್ಷ ಕಬ್ಬಿನ ಬೆಲೆಗಾಗಿ ಹೋರಾಟ ನಡೆಸುವ ಅಗತ್ಯ ಇರುವುದಿಲ್ಲ. ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸದೇ, ಇದೇ ಅಧಿವೇಶನದಲ್ಲಿ ಎಸ್‌ಎಪಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಕಬ್ಬಿಗೆ ರೂ. 3000 ಘೋಷಿಸಬೇಕು' ಎಂದು ಆಗ್ರಹಿಸಿದರು.ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು, `ಪ್ರತಿ ಟನ್‌ಗೆ ರೂ. 2550 ಮುಂಗಡ ನೀಡಲಾಗುವುದು. ಸಕ್ಕರೆ ಮಾರಾಟದ ಆಧಾರದಲ್ಲಿ ಹೆಚ್ಚಿನ ಹಣವನ್ನು ರೈತರಿಗೆ ಪಾವತಿಸಲಾಗುವುದು. ಎಸ್‌ಎಪಿ ಕಾಯ್ದೆಗಿಂತಲೂ ಹೆಚ್ಚಿನ ಬೆಲೆಯನ್ನು ನೀಡಲಾಗುವುದು' ಎಂದು ಭರವಸೆ ನೀಡಿತು.ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯು ಮೊದಲ ಕಂತಾಗಿ ರೂ. 2000 ನೀಡಲಾಗುವುದು. ಸರ್ಕಾರ ಬೆಲೆ ನಿಗದಿಗೊಳಿಸಿದ ಬಳಿಕ ಅದಕ್ಕೆ ತಕ್ಕಂತೆ ಹಣ ನೀಡಲಾಗುವುದು ಎಂದು ತಿಳಿಸಿತು. ಉಳಿದ ಸಕ್ಕರೆ ಕಾರ್ಖಾನೆಗಳು ರೂ. 2500 ರೂಪಾಯಿ ಮುಂಗಡ ನೀಡುವುದಾಗಿ ಮಾಹಿತಿ ನೀಡಿತು.`ಕಾಲ ಕಾಲಕ್ಕೆ ಜಿಲ್ಲಾಡಳಿತ ಸಭೆ ನಡೆಸಬೇಕು. ಸಭೆಗೆ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಹಾಗೂ ಸಕ್ಕರೆ ಉತ್ಪಾದನಾ ವೆಚ್ಚದ ಕುರಿತು ಮುಕ್ತವಾಗಿ ಚರ್ಚೆ ನಡೆಯಲಿದೆ. ವಿಧಾನಸಭೆಯಲ್ಲಿ ಎಸ್‌ಎಪಿ ಕಾಯ್ದೆ ಜಾರಿಗೊಳಿಸಲು ಸಾಧ್ಯವಾಗದಿದ್ದರೆ, ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು' ಎಂದು ರೈತ ಮುಖಂಡರು ಒತ್ತಾಯಿಸಿದರು.ಏಕರೂಪದ ಬೆಲೆ: `ಹಿರಣ್ಯಕೇಶಿ ಕಾರ್ಖಾನೆ, ವಿಶ್ವನಾಥ್ ಸಕ್ಕರೆ ಕಾರ್ಖಾನೆ, ಸತೀಶ್ ಶುಗರ್ಸ್‌, ಘಟಪ್ರಭಾ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಹಲವು ಕಾರ್ಖಾನೆಗಳು ಕಾನೂನು ಬಾಹಿರವಾಗಿ ಅಲ್ಪಾವಧಿ ತಳಿಗೆ ರೂ. 2500 ಹಾಗೂ ದೀರ್ಘಾವಧಿ ತಳಿಗೆ ರೂ. 2400 ಬೆಲೆ ನಿಗದಿಗೊಳಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನೀಡಬೇಕು. ಏಕ ರೂಪದ ಬೆಲೆಯನ್ನು ನೀಡುವಂತೆ ಸೂಚಿಸಬೇಕು' ರೈತ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.ಜಿಲ್ಲಾಧಿಕಾರಿ ಅನ್ಬುಕುಮಾರ ಮಾತನಾಡಿ, `ಸಭೆಯಲ್ಲಿ ರೈತರ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಅಭಿಪ್ರಾಯವನ್ನು ಕೂಡಲೇ ಸರ್ಕಾರದ ಗಮನಕ್ಕೆ ಇಂದೇ ತರಲಾಗುವುದು. ಅಗತ್ಯ ಬಿದ್ದರೆ, ಇನ್ನೊಂದು ಸಭೆಯನ್ನು ನಡೆಸಲಾಗುವುದು' ಎಂದರು. ರೈತ ಮುಖಂಡರಾದ ಟಿ.ಟಿ. ಮುರಕಟ್ನಾಳ, ಮಾಜಿ ಸಚಿವ ಶಶಿಕಾಂತ ನಾಯಿಕ, ಸಿದಗೌಡ ಮೋದಗಿ, ಕಲ್ಯಾಣರಾವ್ ಮುಚಳಂಬಿ ಪಾಲ್ಗೊಂಡಿದ್ದರು.3ನೇ ದಿನಕ್ಕೆ ಉಪವಾಸ ಸತ್ಯಾಗ್ರಹ

ಬೆಳಗಾವಿ:
ಪ್ರತಿ ಟನ್ ಕಬ್ಬಿಗೆ 3000 ರೂಪಾಯಿ ನೀಡುವುದು ಹಾಗೂ ಎಸ್.ಎ.ಪಿ. ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ರೈತರು ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹವು ಸೋಮವಾರ 2ನೇ ದಿನಕ್ಕೆ ಕಾಲಿಟ್ಟಿದೆ.ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ನೇತೃತ್ವದಲ್ಲಿ ಆಗಮಿಸಿದ ಹಲವು ವಕೀಲರು ರೈತರೊಂದಿಗೆ ಚರ್ಚಿಸಿ, ಹೋರಾಟ ರೂಪುರೇಷೆಯ ಬಗ್ಗೆ ಮಾರ್ಗದರ್ಶನ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry