ಶುಕ್ರವಾರ, ಜೂನ್ 25, 2021
30 °C

ಕಬ್ಬಿಗೆ ನಿಗದಿತ ದರ ಆಗ್ರಹಿಸಿ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಸಕ್ಕರೆ ಕಾರ್ಖಾನೆ­ಗಳು ಸರ್ಕಾರ ನಿಗದಿಪಡಿಸಿದ ಕಬ್ಬಿನ ಬೆಲೆ ನೀಡದಿರುವ ಕ್ರಮವನ್ನು ಖಂಡಿಸಿ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸದಸ್ಯರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಸೋಮವಾರ ರಸ್ತೆತಡೆ ನಡೆಸಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ‘ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ರೈತರ ಕಬ್ಬಿಗೆ ಸೂಕ್ತ ಬೆಲೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹೈದರಾಬಾದ್‌ ಕರ್ನಾಟಕ ಭಾಗದ ರೈತರ ನೋವು ಏಕೆ ಅರ್ಥವಾಗುತ್ತಿಲ್ಲ?  ಕಬ್ಬಿಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರು ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಈ ವಿಷಯದಲ್ಲಿ ಸಹಕಾರ ಸಚಿವರು ಸಕಾರಾತ್ಮಕ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.ಸಂಘದ ಕಾರ್ಯಾಧ್ಯಕ್ಷ ಕೆ.ಟಿ ಗಂಗಾಧರ, ಗೌರವಾಧ್ಯಕ್ಷ ಸೋಮ­ಬುದ್ಧ ರಂಗಸ್ವಾಮಿ, ಉಪಾಧ್ಯಕ್ಷ ಎಂ.ರಂಗಸ್ವಾಮಿ, ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ ಕೌಟಾ, ತಾಲ್ಲೂಕು ಅಧ್ಯಕ್ಷ ಸತೀಶ ನನ್ನೂರೆ ಅಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕು­ಗಳ ಪದಾಧಿಕಾರಿಗಳು ಮತ್ತು ಜೆಡಿಎಸ್‌ ಜಿಲ್ಲಾಧ್ಯಕ್ಷ ನಸ್ಸಿಮೋದ್ದೀನ್‌ ಎನ್‌. ಪಟೇಲ ಇದ್ದರು.ಮಧ್ಯಾಹ್ನ 12ರಿಂದ ಸಂಜೆ 4ಗಂಟೆ­ವರೆಗೆ ಕಾರ್ಯಕರ್ತರು ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿದರು. ಸರ್ಕಾರ ನಿಗದಿಗೊಳಿಸಿದ ದರವನ್ನು ಪಾವತಿಸುವ ಕುರಿತು ಅಧಿಕೃತ ಘೋಷಿಸು­ವರೆಗೆ ಪ್ರತಿಭಟನೆ ನಡೆಸ­ಲಾಗುವುದು. ಮಂಗಳವಾರ ಮತ್ತೆ ಪ್ರತಿಭಟನೆ ಮುಂದುವರಿಸ­ಲಾಗುವುದು ಎಂದು ಪ್ರತಿಭಟನಾ­ಕಾರರು ತಿಳಿಸಿದರು.ಡಿವೈಎಸ್ಪಿ ಅಮರನಾಥರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.ಬೀದರ್ ವರದಿ: ಜಿಲ್ಲೆಯ ಮೂರೂ ಸಹಕಾರ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₨ 2,650 ಬೆಲೆ ಪಾವತಿಸ­ಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಭಗತ್‌ಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿ ಮನವಿ  ಸಲ್ಲಿಸಿದರು.ರಾಜ್ಯ ಸರ್ಕಾರ ಈಗಾಗಲೇ ಪ್ರತಿ ಟನ್ ಕಬ್ಬಿಗೆ ₨ 2,650 ಬೆಲೆ ನಿಗದಿ­ಪಡಿಸಿದೆ. ಆದರೂ ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆ ಪಾವತಿಸುತ್ತಿಲ್ಲ ಎಂದು ಮುಖ್ಯಮಂತ್ರಿ­ಗಳಿಗೆ ಬರೆದ ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.ಸರ್ಕಾರದ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿಗದಿತ ಬೆಲೆ ಪಾವತಿಗೆ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಮಾಸಿಕ  ₨3 ಸಾವಿರ ಮಾಸಾಶನ ನೀಡ­ಬೇಕು ಎಂದು ಆಗ್ರಹಿಸಿದರು.ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಜಿಲ್ಲಾ ಅಧ್ಯಕ್ಷ ಸೈಬಣ್ಣ ಹಸರಗುಂಡಗಿ, ತಾಲ್ಲೂಕು ಅಧ್ಯಕ್ಷ ಸಾಬೇರ್ ಸಾಹೇಬ್ ರೇಕುಳಗಿ, ಖುದ್ದುಸ್ ನಾಗನಕೇರಾ, ನಜೀರ್ ಅಹಮ್ಮದ್ ಚೌಳಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.