ಮಂಗಳವಾರ, ನವೆಂಬರ್ 12, 2019
28 °C

ಕಬ್ಬಿಣದ ತುಂಡು ಬಿದ್ದು ವ್ಯಕ್ತಿ ಸಾವು

Published:
Updated:

ಬೆಂಗಳೂರು: ಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ತುಂಡು ತಲೆಯ ಮೇಲೆ ಬಿದ್ದು ಸಂಪತ್ (23) ಎಂಬುವರು ಸಾವನ್ನಪ್ಪಿರುವ ಘಟನೆ ಪೀಣ್ಯದ ಒಂದನೇ ಹಂತದಲ್ಲಿರುವ ಖಾಸಗಿ ಕಂಪೆನಿಯಲ್ಲಿ ಶನಿವಾರ ನಡೆದಿದೆ.ಮಾಗಡಿಯವರಾದ ಸಂಪತ್, ಎರಡೂವರೆ ತಿಂಗಳ ಹಿಂದಷ್ಟೇ ಕಂಪೆನಿಗೆ ಟ್ರೈನಿಯಾಗಿ ಕೆಲಸಕ್ಕೆ ಸೇರಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರು ಕಬ್ಬಿಣದ ತುಂಡನ್ನು ಸ್ಥಳಾಂತರಿಸುತ್ತಿದ್ದಾಗ ಆಕಸ್ಮಿಕವಾಗಿ ಕಬ್ಬಿಣದ ತುಂಡು ತಲೆಯ ಮೇಲೆ ಬಿದ್ದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಸಹ ಕಾರ್ಮಿಕರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ, ಮಾರ್ಗ ಮಧ್ಯೆ ಸಂಪತ್ ಸಾವನ್ನಪ್ಪಿದ್ದರು ಎಂದು ಪೊಲೀಸರು ಹೇಳಿದ್ದಾರೆ.

`ಸಂಪತ್ ಅವರ ತಲೆ ಮೇಲೆ ಬಿದ್ದ ಕಬ್ಬಿಣದ ತುಂಡು ಸುಮಾರು 200 ಕೆ.ಜಿ. ತೂಕವಿತ್ತು. ಘಟನೆ ಸಂಬಂಧ ಮೃತರ ತಂದೆ ವೆಂಕಟಪ್ಪ ಎಂಬುವರು ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಕಂಪೆನಿ ವ್ಯವಸ್ಥಾಪಕರಾದ ಇಂದ್ರೇಶ್, ಕಿರಣ್ ಸೇರಿದಂತೆ ಐದು ಮಂದಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೀಣ್ಯ ಪೊಲೀಸರು ತಿಳಿಸಿದರು.ಮೋರಿಗೆ ಬಿದ್ದು ಸಾವು: ಕಾಂಪೌಂಡ್ ಮೇಲೆ ಕುಳಿತಿದ್ದ ಕೃಷ್ಣಮೂರ್ತಿ (46) ಎಂಬುವರು ಆಕಸ್ಮಿಕವಾಗಿ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪೀಣ್ಯದ 80 ಅಡಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಖಾಸಗಿ ಕಂಪೆನಿಯೊಂದರ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅವರು ಪೀಣ್ಯದಲ್ಲೇ ವಾಸ ಮಾಡುತ್ತಿದ್ದರು. ಅವರ ಕುಟುಂಬ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೃತರ ಸಂಬಂಧಿಕರು ಪೀಣ್ಯ ಪೊಲಿಸರನ್ನು ಸಂಪರ್ಕಿಸಿ ಶವ ಪಡೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)