ಭಾನುವಾರ, ಮೇ 22, 2022
27 °C

ಕಬ್ಬಿನ ಬಾಕಿ ಪಾವತಿಗೆ 23ರವರೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ಮುಧೋಳ ಕಬ್ಬು ಬೆಳೆಗಾರರ ಹೋರಾಟದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸಭೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಆರ್. ಪಾಟೀಲ ನೇತೃತ್ವದಲ್ಲಿ ಹಾಗೂ ಶಾಸಕ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರ ಉಪಸ್ಥಿತಿಯಲ್ಲಿ ಸೌಹಾರ್ದಯುತವಾಗಿ ನಡೆದಿದ್ದು ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ ಎಳೆಯಾಗಿ ಸಭೆಯ ಮುಂದಿಟ್ಟ ರೈತರು, ಅದನ್ನು ರೈತರ ಧ್ವನಿಯಾಗಿ ಸಮರ್ಥನೆ ನೀಡಿ ಅನುಮೋದಿಸಿದ ಶಾಸಕ ಗೋವಿಂದ ಕಾರಜೋಳ,  ಕಾರ್ಖಾನೆ ಆಡಳಿತ ಮಂಡಳಿಯ ಮನ ಒಲಿಸಲು ಯಶಸ್ವಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಇವು ಬುಧವಾರ ಪುರಸಭೆ ಸಭಾ ಭವನದಲ್ಲಿ ನಡೆದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಕಂಡ ಅಪರೂಪದ ಘಟನೆಗಳು.ಜುಲೈ 23 ರ ಒಳಗಾಗಿ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಪಾವತಿಸುವುದು. ಹಾಗೂ ಕಬ್ಬು ಕಟಾವು ತಂಡವನ್ನು ಈ ವರ್ಷ ಅರ್ಧದಷ್ಟು ಕಾರ್ಖಾನೆ ಆಡಳಿತ ಮಂಡಳಿ ನಿಯೋಜಿಸಬೇಕು ಹಾಗೂ ಅರ್ಧ ಟ್ರ್ಯಾಕ್ಟರ್ ಮಾಲೀಕರು ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿರ್ಣಯಗಳಿಗೆ ಉಭಯತರು ಒಪ್ಪಿಕೊಂಡರು.ಕಬ್ಬಿನ ಬೆಲೆ ನಿಗದಿಗಾಗಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ 5 ಜನ ರೈತ ಪ್ರತಿನಿಧಿಗಳು, 5 ಜನ ಸಕ್ಕರೆ ಕಾರ್ಖಾನೆ ಆಡಳಿತಮಂಡಳಿ ಸದಸ್ಯರು, ಹಾಗೂ 5 ಜನ ಸರಕಾರದ ಅಧಿಕಾರಿಗಳ ಸಮಿತಿ ರಚಿಸಲು ಸರಕಾರದಿಂದ ಬಿಲ್ ಪಾಸ್ ಆಗಿದ್ದು ಅದನ್ನು ಕೂಡಲೇ ಅನುಷ್ಠಾನಕ್ಕೆ ತರಲು ಕಾರಜೋಳರು ಮನವಿಗೆ ಮಾಡಿದರು. ಮನವಿಗೆ ಸ್ಪಂದಿಸಿದ ಜಿಲ್ಲೆಯ ಉಸ್ತುವಾರಿ ಸಚಿವ ಪಾಟೀಲರು ಮುಖ್ಯಮಂತಿಗಳನ್ನು ಕಂಡು ಶೀಘ್ರ ಸಮಿತಿ ಅನುಷ್ಠಾಗೊಳಿಸುವ ಭರವಸೆ ನೀಡಿದರು.ಜಿಲ್ಲೆಯ ಇನ್ನಿತರ ಶಾಸಕರು ಈ ಸಭೆಗೆ ಬಾರದಿರುವುದಕ್ಕೆ ರೈತರ ಆಕ್ರೋಶ, ದಕ್ಷಿಣ ಕರ್ನಾಟಕ ಭಾಗದ ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ, ರಾಜ್ಯದಲ್ಲಿ ಉತ್ಪಾದಿಸುವ ಒಟ್ಟು 330 ಲಕ್ಷ ಟನ್ ಕಬ್ಬಿನಲ್ಲಿ 280 ಲಕ್ಷ ಟನ್ ಕಬ್ಬನ್ನು ಬೆಳಗಾವಿ ವಲಯದಲ್ಲಿ ಬೆಳೆಯಲಾಗುತ್ತಿದೆ. ಆದರೂ ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಕುರಿತು ಚರ್ಚೆ ನಡೆಯಿತು.ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಪರವಾಗಿ ಪ್ರಭುಲಿಂಗೇಶ್ವರ ಸಕ್ಕರೆ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಗುಡಗುಂಟಿ ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಬಿ. ಎಚ್. ಪಾಟೀಲ ಮಾತನಾಡಿದರು

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಸುಮಾರು 50ಕ್ಕೂ ಅಧಿಕ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಹೊರಗಡೆ ನೂರಾರು ರೈತರು ಜಮಾಯಿಸಿದ್ದರು. ಅಪಾರ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಒಬ್ಬ ಡಿಎಸ್‌ಪಿ, 3 ಸಿಪಿಐ, 5 ಪಿಎಸ್‌ಐ 50 ಕ್ಕೂ ಅಧಿಕ ಸಿಬ್ಬಂದಿ ಇದ್ದರು.ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಶ ಶಿರಬೂರ, ನಾಗೇಶ ಸೋರಗಾಂವಿ, ರುದ್ರಪ್ಪ ಅಡವಿ, ಸದಾಶಿವ ಸಂಕ್ರಟ್ಟಿ, ಬಂಡು ಘಾಟಗೆ, ಪ್ರಕಾಶ ಲಿಂಬಿಕಾಯಿ, ಸಂಗಪ್ಪ ಕೋಮಾರ, ಈರಪ್ಪ ಹಂಚಿನಾಳ, ಉದಯ ಸಾರವಾಡ, ವೆಂಕಪ್ಪ ಗಿಡ್ಡಪ್ಪನವರ, ರವಿ ಪಾಟೀಲ, ಮಹೇಶ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಸ್ವಾಗತಿಸಿದರು. ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕನವಾಡಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.