ಕಬ್ಬು ಅರೆಯುವಿಕೆ ವಿಳಂಬ: ಪ್ರತಿಭಟನೆ

7

ಕಬ್ಬು ಅರೆಯುವಿಕೆ ವಿಳಂಬ: ಪ್ರತಿಭಟನೆ

Published:
Updated:

ಪಾಂಡವಪುರ; ಕಬ್ಬು ಅರೆಯುವಿಕೆ ಕಾರ್ಯ ನಿಧಾನವಾಗಿ ಸಾಗುತ್ತಿರುವು ದರಿಂದ ಕಬ್ಬು ತುಂಬಿದ ಎತ್ತಿನ ಗಾಡಿಗಳು ದಿನಗಟ್ಟಲೆ ಕಾಯಬೇಕಾಗಿದೆ ಎಂದು ಆರೋಪಿಸಿ ಕಬ್ಬು ಸರಬರಾಜುದಾರರು ಪಿಎಸ್‌ಎಸ್‌ಕೆ ಎದುರು ರಸ್ತೆ ತಡೆ ನಡೆಸಿದರು. ಈ ವೇಳೆ ಸಂಚಾರ ದಟ್ಟಣೆ ತೆರವುಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ವ್ಯಕ್ತಿಯೊಬ್ಬನ ತಲೆಗೆ ಪೆಟ್ಟು ಬಿದ್ದ ಘಟನೆ ಶುಕ್ರವಾರ ನಡೆಯಿತು.ಕಬ್ಬು ಸರಬರಾಜುದಾರರು ಎತ್ತಿನಗಾಡಿಯಲ್ಲಿ ಕಬ್ಬು ತುಂಬಿಕೊಂಡು ಬಂದು ದಿನಗಟ್ಟಲೆ ಕಾದರೂ ಕಬ್ಬು ನುರಿಸಲು ಕಾರ್ಖಾನೆಯ ಆಡಳಿತ ವರ್ಗ ವಿಳಂಬ ಮಾಡುತ್ತಿದೆ. ಇದರಿಂದಾಗಿ ರೈತರಿಗೆ ತುಂಬ ಅನಾನುಕೂಲ ವಾಗುತ್ತಿದೆ ಎಂದು ಆರೋಪಿಸಿ ದೀಢಿರ್ ರಸ್ತೆ ತಡೆ ನಡೆಸಿದರು.ಪಾಂಡವಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು.  ಇದಕ್ಕೆ ಒಪ್ಪದೆ ಇದ್ದಾಗ ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದಾಗ ಕೆಳಗೆ ಬಿದ್ದ ಎಲೆಕೆರೆ ಗ್ರಾಮದ ರೇವಣ್ಣನಿಗೆ ತಲೆಗೆ ಪೆಟ್ಟುಬಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ನಂತರ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ನರಸಿಂಹಯ್ಯ ಮತ್ತು ವೆಂಕಟೇಶ್ ಮೂರ್ತಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪ್ರತಿಭಟನಾಕಾರರು ಹಾಗೂ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದ ಮೇಲೆ ಪ್ರತಿಭಟನೆ ಅಂತ್ಯಗೊಂಡಿತು.ತಹಶೀಲ್ದಾರ್ ಬಿ.ಸಿ.ಶಿವಾನಂದ ಮೂರ್ತಿ ಮತ್ತು ಡಿವೈಎಸ್‌ಪಿ ಕಲಾ ಕೃಷ್ಣಸ್ವಾಮಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ಆಲ್ಪಾನ್ಸ್‌ರಾಜ ಹಾಗೂ ಮುಖ್ಯಅಧೀಕ್ಷಕ ಸುರೇಶ್ ಅವರೊಂದಿಗೆ ಸಭೆ ನಡೆಸಿ ಕಾರ್ಖಾನೆ ಕಾರ್ಯಾರಂಭ ಕುರಿತು ಚರ್ಚಿಸಿದರು.ತಹಶೀಲ್ದಾರ್ ಶಿವಾನಂದಮೂರ್ತಿ ಮಾತನಾಡಿ, ಮೊದಲು ಕಬ್ಬು ತುಂಬಿದ ಎತ್ತಿನ ಗಾಡಿಗಳಿಗೆ ಪ್ರಾಶಸ್ತ್ಯ ಕೊಡಿ, ನಂತರ ಲಾರಿಗಳ ಕಬ್ಬು ಅರೆಯಿರಿ. ಫೀಲ್ಡ್‌ಮ್ಯಾನ್‌ಗಳು ಗದ್ದೆಯ ಕಬ್ಬು ಕಟಾವಿನ ಕಾರ್ಯದ ಕಡೆ ಗಮನವಿಡಿ. ಕಬ್ಬು ಸರಬರಾಜುದಾರರು ಹಾಗೂ  ಕಾರ್ಮಿಕರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry