ಕಬ್ಬು ಕಟಾವಿಗೂ ಯಂತ್ರ

7

ಕಬ್ಬು ಕಟಾವಿಗೂ ಯಂತ್ರ

Published:
Updated:

`ಮಂಡಿಯುದ್ದ ಕಬ್ಬು ಬೆಳೆವ ವೇಳೆಗೆ ಎದೆಯುದ್ದ ಸಾಲ~ ಎನ್ನುವ ಆಡು ಮಾತು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಇಂದಿನ ಸಂಕಷ್ಟ ಸ್ಥಿತಿಗೆ ಹಿಡಿದ ಕನ್ನಡಿ. ಇಳುವರಿ ಹೆಚ್ಚಳ, ಖರ್ಚಿನಲ್ಲಿ ಮಿತವ್ಯಯ ಹಾಗೂ ಮಣ್ಣಿನ ಫಲವತ್ತತೆ, ಸುಸ್ಥಿರತೆ ಕಾಪಾಡುವುದು ಇಂದು ಕಬ್ಬು ಬೆಳೆಗಾರನ ಮುಂದಿರುವ ಪ್ರಮುಖ ಸವಾಲು. ದಿನೇ ದಿನೇ ಏರಿಕೆಯಾಗುತ್ತಿರುವ ಕೂಲಿ ದರ, ಹೆಚ್ಚು ಕೂಲಿ ನೀಡಿದರೂ ಸಿಗದ ಕೃಷಿ ಕಾರ್ಮಿಕರು. ಈ ವಿದ್ಯಮಾನಗಳು ರೈತರನ್ನು ಕಂಗಾಲು ಮಾಡಿವೆ. ಕಬ್ಬಿನ ಬೇಸಾಯಕ್ಕೆ ತಗಲುವ ಒಟ್ಟು ಖರ್ಚಿನಲ್ಲಿ ಸುಮಾರು ಅರ್ಧದಷ್ಟು ಕೂಲಿ ಕಾರ್ಮಿಕರಿಗೇ ವ್ಯಯವಾಗುತ್ತಿದೆ.

 

ಇದನ್ನು ಕಡಿಮೆ ಮಾಡಿ ಕಬ್ಬಿನ ಬೇಸಾಯವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಆರು ಅಡಿ ಅಂತರದ ಸಾಲುಗಳ ಯಾಂತ್ರಿಕೃತ ಬೇಸಾಯ ಪದ್ಧತಿ ಪ್ರಸ್ತುತ ರೈತರಿಗೆ ವರದಾನವಾಗಿದೆ.ಮದ್ದೂರು ಬಳಿಯ ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆರು ಅಡಿ ಅಂತರದ ಸಾಲುಗಳ ಯಾಂತ್ರಿಕೃತ ಕಬ್ಬಿನ ಬೇಸಾಯಕ್ಕೆ ರೈತರನ್ನು ಪ್ರೋತ್ಸಾಹಿಸುತ್ತಿದೆ.

 

ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿನಲ್ಲಿ ನೇಕ ರೈತರು ಈಗ 800 ಎಕರೆಗೂ  ಹೆಚ್ಚು ಪ್ರದೇಶದಲ್ಲಿ ಈ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅದರ ಫಲವಾಗಿ ಸಮೃದ್ಧ ಕಬ್ಬು ಬೆಳೆ ತೊನೆದು ತೂಗುತ್ತಿದೆ.ಮದ್ದೂರು ತಾಲ್ಲೂಕು ಚಾಮನಹಳ್ಳಿಯ ಪ್ರಗತಿ ಪರ ಕೃಷಿಕ ಪ್ರಕಾಶ್ 24 ಎಕರೆ ಪ್ರದೇಶದಲ್ಲಿ ಈ ಬೇಸಾಯ ಪದ್ಧತಿ ಅಳವಡಿಸಿ ಸಮೃದ್ಧ ಕಬ್ಬು ಬೆಳೆದಿದ್ದಾರೆ. ಇತ್ತೀಚೆಗೆ ಕಾರ್ಖಾನೆ ಅಧಿಕಾರಿಗಳ ನೇತೃತ್ವದಲ್ಲಿ ಅವರ ಜಮೀನಿನಲ್ಲಿ ಯಾಂತ್ರಿಕೃತ ಕಬ್ಬು ಕಟಾವು ಪ್ರಾತ್ಯಕ್ಷಿಕೆ ನಡೆಯಿತು.ಇದೇ ಮೊದಲ ಬಾರಿಗೆ ತಮ್ಮೂರಿನ ಕಬ್ಬಿನ ಗದ್ದೆಗೆ ಬಂದಿಳಿದ ಜಾನ್ ಡಿಯರ್ ಕಂಪೆನಿಯ ಬೃಹತ್ ಕಬ್ಬಿನ ಕಟಾವು ಯಂತ್ರವನ್ನು ಕಂಡ ನೂರಾರು ರೈತರು ಮೂಕ ವಿಸ್ಮಿತರಾದರು. ಅಲ್ಲದೇ ಒಂದೇ ದಿನದಲ್ಲಿ ಅದು 5 ಎಕರೆಯಲ್ಲಿನ ಕಬ್ಬು ಕಟಾವು ಮಾಡಿದ್ದನ್ನು ಕಂಡು ಬೆಕ್ಕಸ ಬೆರಗಾದರು.

 

ಕಬ್ಬು ಕಟಾವು ಕಾರ್ಯ ಇಷ್ಟೊಂದು ಸುಲಭವಾದರೆ ಈ ಪದ್ಧತಿಯನ್ನು ನಾವು ಏಕೆ ಅಳಡಿಸಿಕೊಳ್ಳಬಾರದು ಎಂದು ಮನಸ್ಸಿನಲ್ಲಿ ಲೆಕ್ಕಚಾರವನ್ನೂ ಕೂಡ ಹಾಕಿದರು. ನಂತರ ಚಾಂಷುಗರ್ ಕಾರ್ಖಾನೆ ಅಧಿಕಾರಿಗಳನ್ನು ಕಂಡು ಅಂತರ ಬೇಸಾಯ ಪದ್ಧತಿಯ ಬಗೆಗೆ ಮಾಹಿತಿ ಪಡೆದರು.ಏನು ಮಾಡಬೇಕು?

ಭೂಮಿ ಹದಗೊಳಿಸಿದ ನಂತರ 6 ಅಡಿ ಅಂತರದಲ್ಲಿ ಟ್ರಾಕ್ಟರ್ ಚಾಲಿತ ರಿಡ್ಜರ್ ಸಹಾಯದಿಂದ ಸುಮಾರು ಒಂದುವರೆ ಅಡಿ ಆಳದ ಸಾಲುಗಳನ್ನು ತೆಗೆಯಬೇಕು. ಎಕರೆಗೆ 3 ಕಣ್ಣುಗಳುಳ್ಳ 8 ರಿಂದ 9 ಸಾವಿರ ಬಿತ್ತನೆ ಕಬ್ಬುಗಳ ತುಂಡನ್ನು ಬೆವಸ್ಟೀನ್ ಶಿಲೀಂದ್ರ ನಾಶಕದಿಂದ ಉಪಚರಿಸಿ ಜೋಡಿಸಾಲು ಪದ್ಧತಿಯಲ್ಲಿ ಸುಮಾರು ಅರ್ಧ ಇಲ್ಲವೇ ಮುಕ್ಕಾಲು ಅಡಿ ಅಂತರದಲ್ಲಿ ನಾಟಿ ಮಾಡಬೇಕು.

 

ಇದಾದ 3 ರಿಂದ 5 ದಿನಗಳಲ್ಲಿ ಸಾಲುಗಳಿಗೆ ಸೀಮಿತಗೊಂಡಂತೆ ಎಕರೆ ಅರ್ಧ ಕಿಲೊ ಟ್ರಾಜಿನ್ ಕಳೆನಾಶಕ ಸಿಂಪಡಿಸಬೇಕು. ಹೆಚ್ಚು ತೊಂಡೆಯೊಡೆಯುವ ಹಾಗೂ ಶೀಘ್ರಗತಿಯಲ್ಲಿ ಬೆಳೆಯುವ ಸಿ.ಓ 86032 ಕಬ್ಬಿನ ತಳಿ ಈ ಬೇಸಾಯ ಪದ್ಧತಿಗೆ ಸೂಕ್ತವಾಗಿದ್ದು, ರಸಗೊಬ್ಬರ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಬೇಕಿಲ್ಲ.ಮಿನಿ ಟ್ರಾಕ್ಟರ್ ಚಾಲಿತ ರೊಟೋವೇಟರ್ ಸಹಾಯದಿಂದ ಕಳೆ ನಿಯಂತ್ರಿಸಬಹುದಾಗಿದ್ದು, ಟ್ರಾಕ್ಟರ್ ಚಾಲಿತ ಡಿಸ್ಕ್ (ಬಾಂಡಲಿ) ಸಹಾಯದಿಂದ ಏಕ ಕಾಲದಲ್ಲಿ ದಿಂಡು ಕೊರೆಯುವುದು ಹಾಗೂ ಕೊರೆದ ಮಣ್ಣಿನಿಂದ ತರಗು ಮುಚ್ಚುವುದು ಮಾಡಬಹುದಾಗಿದೆ. ಮಿನಿ ಟ್ರಾಕ್ಟರ್ ಚಾಲಿತ ಕೂಪರ್ ಸಹಾಯದಿಂದ ಮುರಿ ಮಾಡುವುದು ಹಾಗೂ ಯಂತ್ರದ ಸಹಾಯದಿಂದ ನೀರು ಹಾಯಿಸಲು ಕಾಲುವೆ ತೆಗೆಯಬಹುದಾಗಿದೆ.ಹನಿ ನೀರಾವರಿ

ನೀರು ಮತ್ತು ವಿದ್ಯುತ್ ಅಭಾವವಿರುವ ಜಾಗದಲ್ಲಿ ಕಬ್ಬು ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೊಳ್ಳಬಹುದು. ಇದರಿಂದ ಕಬ್ಬು ಇಳುವರಿ ಶೇ 25 ರಷ್ಟು ಹೆಚ್ಚಲಿದೆ. ಇತ್ತೀಚೆಗೆ ಬಳಕೆಗೆ ಬಂದ ಸಬ್ ಸರ್ಫೇಸ್ (ಮಣ್ಣಿನ ಒಳಗೆ 6-8 ಹನಿ ನೀರಾವರಿ ಪೈಪುಗಳನ್ನು ಹೂಳುವುದು) ಹನಿ ನೀರಾವರಿ ತಂತ್ರಜ್ಞಾನ ಅಳವಡಿಕೆಯಿಂದ ಕಬ್ಬು ಬೇಸಾಯ ಸುಲಭವಾಗಲಿದೆ.ಅಂತರ ಬೇಸಾಯ

ಆರು ಅಡಿ ಅಂತರ ಬೇಸಾಯ ಪದ್ಧತಿಯಲ್ಲಿ ಅಂತರ ಬೆಳೆಯಾಗಿ ಟೊಮೆಟೋ, ಬೀನ್ಸ್, ಸೋಯಾ ಅವರೆ, ಅಲಸಂದೆ, ಅವರೆ, ಹೆಸರು, ಉದ್ದು ಇತ್ಯಾದಿ ದ್ವಿದಳ ಧಾನ್ಯ ಬೆಳೆಯಬಹುದು. ಈ ಬೆಳೆಗಳ ಕಟಾವಿನ ನಂತರ ಉಳಿದ ಸಸ್ಯಭಾಗವನ್ನು ಮಣ್ಣಿಗೆ ಸೇರಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ.ಈ ಪದ್ಧತಿ ಅಳವಡಿಕೆಯಿಂದ ಹೆಚ್ಚಿನ ಸೂರ್ಯ ರಶ್ಮಿಯ ಒಳಸೂಸುವಿಕೆ ಹತೋಟಿಯಲ್ಲಿ ಇರುತ್ತದೆ. ಹೀಗಾಗಿ ಸಸಿಗಳು ಸಾಯುವ ಸಂಖ್ಯೆ ಕಡಿಮೆಯಾಗುತ್ತದೆ. ಗಾಳಿಯಲ್ಲಿನ ಆರ್ದ್ರತೆ ಇಳಿಮುಖಗೊಂಡು ಬೆಳೆಯ ಉಷ್ಣಾಂಶ ಹೆಚ್ಚಳವಾಗುವುದರಿಂದ ಬಿಳಿ ಉಣ್ಣೆ, ಹೇನು ಇತ್ಯಾದಿ ಕೀಟಗಳು ಹಾಗೂ ರೋಗಗಳ ಹಾವಳಿ ಕಡಿಮೆಯಾಗಲಿದೆ.ಮಣ್ಣಿನಲ್ಲಿ ಸಾವಯವ ಅಂಶ ವೃದ್ಧಿಸಿ ನೀರಿನ ಬೇಡಿಕೆ ಕಡಿಮೆಯಾಗುತ್ತದೆ. ಇದರಿಂದ ಸಾಕಷ್ಟು ನೀರು ಉಳಿಸಬಹುದು. ಅಲ್ಲದೆ ಕಳೆ ಹಾವಳಿಯೂ ಕಡಿಮೆಯಾಗಿ, ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಹೆಚ್ಚಿನ ಅಂತರದ ಕಾರಣ ತೊಂಡೆಯೊಡೆಯುವಿಕೆ ಹೆಚ್ಚುತ್ತದೆ. ಹೀಗಾಗಿ ಕಬ್ಬಿನ ಜಲ್ಲೆಯ ತೂಕವು ಹೆಚ್ಚಿ ಒಟ್ಟಾರೆ ಇಳುವರಿ ಏರುತ್ತದೆ. ಮುಂದೆ ಕೂಳೆ ಬೆಳೆಯಲ್ಲಿ ಕೂಡ ಹೆಚ್ಚು ಇಳುವರಿ ದೊರೆಯಲಿದೆ. ಅಲ್ಲದೆ ಕಬ್ಬಿನ ರಸದ ಗುಣಮಟ್ಟವು ಸುಧಾರಿಸಲಿದೆ.ಯಾಂತ್ರಿಕೃತ ಕಟಾವು ಸುಲಭ

ಆರು ಅಡಿ ಅಂತರದ ಬೇಸಾಯ ಪದ್ಧತಿಯಿಂದಾಗಿ ಯಾಂತ್ರಿಕೃತ ಕಟಾವು ಸುಲಭ. ಒಂದು ದಿನಕ್ಕೆ 10 ಎಕರೆ ಪ್ರದೇಶದ ಕಬ್ಬು ಕಟಾವು ಮಾಡುವ ಸಾಮರ್ಥ್ಯ ಕಟಾವು ಯಂತ್ರಕ್ಕಿದೆ. ಇದು ಒಂದು ಅಡಿ ಆಳದವರೆಗೆ ಕಬ್ಬನ್ನು ಕಟಾವು ಮಾಡುವುದರಿಂದ ಇಳುವರಿ ಹೆಚ್ಚುತ್ತದೆ. ಅಲ್ಲದೇ ಬುಡದಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ರಸದ ಗುಣಮಟ್ಟ ಸುಧಾರಿಸುತ್ತದೆ. ಒಂದೇ ಬಾರಿಗೆ  ಕಬ್ಬನ್ನು ತುಂಡುಗಳನ್ನಾಗಿ ಮಾಡಿ ಪ್ರತ್ಯೇಕಗೊಳಿಸುವ ಯಂತ್ರವು, ಇನ್ನುಳಿದ ತರಗು ಹಾಗೂ ಕಬ್ಬಿನ ತೊಂಡೆಯನ್ನು ಪುಡಿ ಮಾಡಿ ಗದ್ದೆಗೆ ಸೇರಿಸುತ್ತದೆ. ಹೀಗಾಗಿ ತರಗು ನಿರ್ವಹಣೆ ಸುಲಭವಾಗಿದೆ. ಕಟಾವು ಮಾಡಿದ ಕೂಡಲೇ ಕಾರ್ಖಾನೆಯೇ ಕಬ್ಬನ್ನು ಶೀಘ್ರವಾಗಿ ಸಾಗಿಸುವುದರಿಂದ ಸಾಗಣೆ ವೆಚ್ಚದಲ್ಲೂ ಉಳಿತಾಯವಾಗಲಿದೆ.ಒಟ್ಟಾರೆ ಆರು ಅಡಿ ಅಂತರದ ಕಬ್ಬು ಬೇಸಾಯ ಹಾಗೂ ಯಾಂತ್ರಿಕೃತ ಕಟಾವು ಪದ್ಧತಿ ಲಾಭದಾಯಕವಾಗಿದ್ದು, ಕಬ್ಬು ಕೃಷಿಯನ್ನು ಖುಷಿದಾಯಕವಾಗಿಸಿದೆ ಎನ್ನುವುದು ಅನೇಕ ರೈತರ ಅಭಿಮತ. ವಿವರಗಳಿಗೆ ಕಾರ್ಖಾನೆ ಕಬ್ಬು ಅಧಿಕಾರಿಗಳ ಸಂಪರ್ಕ ಸಂಖ್ಯೆ 99801 26916.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry