ಕಬ್ಬು ದರ ನಿಗದಿ ಹೋರಾಟ : ರೈತರ ನಡುವೆ ಘರ್ಷಣೆ

7

ಕಬ್ಬು ದರ ನಿಗದಿ ಹೋರಾಟ : ರೈತರ ನಡುವೆ ಘರ್ಷಣೆ

Published:
Updated:

ಬಾಗಲಕೋಟೆ: ಕಬ್ಬು ಬೆಲೆ ನಿಗದಿ ಸಂಬಂಧ ರೈತ ಸಂಘಟನೆ ನೇತೃತ್ವದಲ್ಲಿ ಮುಧೋಳದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಶನಿವಾರ ವಿಕೋಪಕ್ಕೆ ತಿರುಗಿದೆ. ಸಕ್ಕರೆ ಕಾರ್ಖಾನೆಗಳ ಪರ ಮತ್ತು ವಿರೋಧಿ ಗುಂಪುಗಳ ಮಧ್ಯೆ ಘರ್ಷಣೆ ನಡೆಯಿತು.ಈ ಘಟನೆಯಲ್ಲಿ ನಾಲ್ವರು ರೈತರು ಗಾಯಗೊಂಡಿದ್ದಾರೆ.  ಈ ಮಧ್ಯೆ ಮುಧೋಳ ನಗರ ಸೇರಿದಂತೆ 13 ಕಿ.ಮೀ. ವ್ಯಾಪ್ತಿಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವಂತೆ ಒತ್ತಾಯಿಸಿ ರೈತ ಸಂಘದ ಪ್ರತಿನಿಧಿಗಳು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 20 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ ರೈತರ ಇನ್ನೊಂದು ಗುಂಪು ಧರಣಿ ಬೇಡ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.ಈ ಭಿನ್ನಾಭಿಪ್ರಾಯಗಳಿಂದ ರೈತರಲ್ಲಿ ಎರಡು ಗುಂಪುಗಳಾಗಿವೆ. ಒಂದು ಗುಂಪು ಬೆಲೆ ನಿಗದಿಯಾಗವವರೆಗೆ ಕಾರ್ಖಾನೆ ಬಂದ್ ಮಾಡುವಂತೆ ಒತ್ತಾಯಿಸಿದರೆ, ಸಣ್ಣಪುಟ್ಟ ರೈತರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲು ಮುಂದಾಗಿದ್ದಾರೆ.ಶನಿವಾರ ಮಂಟೂರಿನ ಕೆಲ ರೈತರು ನಿರಾಣಿ ಸಕ್ಕರೆ ಕಾರ್ಖಾನೆಗೆ ಟ್ರ್ಯಾಕ್ಟರ್ ಮೂಲಕ ಕಬ್ಬು ಸಾಗಿಸುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಗುಂಪಿನ ರೈತರು ಟ್ರ್ಯಾಕ್ಟರ್ ತಡೆದಿದ್ದಾರೆ.ಈ  ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆಯಾಗಿದೆ.  ಇದೇ ವೇಳೆ ಮೂರು ಕ್ರೂಜರ್ ವಾಹನಗಳನ್ನು ತಡೆದು ಉರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ರೈತರಾದ ಗಿರಿಯಪ್ಪ ಸಣ್ಣಟ್ಟಿ, ಗಂಗಪ್ಪ ಲೋಕಾಪುರ, ಪ್ರಕಾಶ ನಾಯಕ, ಶೇಖರ ವಾಲಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಮುಧೋಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry