ಶುಕ್ರವಾರ, ಜನವರಿ 24, 2020
16 °C
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಶಯ

ಕಬ್ಬು ಪೂರೈಕೆಗೆ ಮುಕ್ತ ಅವಕಾಶ ಸಿಗಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ರಾಜ್ಯದ ಯಾವುದೇ ಸಕ್ಕರೆ ಕಾರ್ಖಾನೆಗೆ ಬೇಕಾದರೂ ಕಬ್ಬು ಪೂರೈಕೆ ಮಾಡುವ ವ್ಯವಸ್ಥೆ ಬರಲಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮನವಿ ಮಾಡಿದರು.ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹರಿಹರ ತಾಲ್ಲೂಕು ನಂದಿಗಾವಿ ಗ್ರಾಮದ ಕಬ್ಬು ಬೆಳೆಗಾರ ಹಾಲನಗೌಡ ಅವರ ಆರೋಗ್ಯವನ್ನು ಬುಧವಾರ ವಿಚಾರಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.ರೈತರ ಮೇಲೆ ನಿರ್ಬಂಧ ಹೇರಬಾರದು. ಇಂತಹದ್ದೇ ಕಾರ್ಖಾನೆಗೆ  ಕಬ್ಬು ಪೂರೈಕೆ ಮಾಡಿ ಎಂದು ಹೇಳುವುದು ಸೂಕ್ತವಲ್ಲ. ಕಬ್ಬು ಸಲಹಾ ಮಂಡಳಿಯಲ್ಲಿ ನಾನು ಸದಸ್ಯನಾಗಿದ್ದು, ಸರ್ಕಾರ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಮುಕ್ತ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ಸದ್ಯದಲ್ಲಿಯೇ ಅದು ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.ಕಬ್ಬು ದರ ನಿಗದಿ ವಿಚಾರದಲ್ಲಿ ರಾಜಕಾರಣ ನಡೆಯಬಾರದು. ಸರ್ಕಾರ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಕ್ಕರೆ ಧಾರಣೆಯ ಮೇಲೆ ಕಬ್ಬು ದರ ನಿಗದಿ ಆಗಬಾರದು. ಉತ್ಪಾದನಾ ವೆಚ್ಚದ ಆಧಾರ ಮೇಲೆ ಕಬ್ಬಿನ ದರ ನಿಗದಿ ಮಾಡಬೇಕು. ಕಬ್ಬು ಕಟಾವು ಸಂದರ್ಭದಲ್ಲಿ ವಿದೇಶದಿಂದ ಸಕ್ಕರೆ ಆಮದು ಮಾಡಿಕೊಂಡಿದ್ದೇ ಸಕ್ಕರೆ ಧಾರಣೆ ಕುಸಿಯಲು ಕಾರಣ ಎಂದು ಆರೋಪಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯ ಮೇರೆಗೆ ಬುಧವಾರ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿದ್ದ ರೈತರ ಬೃಹತ್‌ ಸಮ್ಮೇಳನ ಮುಂದೂಡಲಾಗಿದೆ. ಡಿ.6ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರದ ಬಳಿಗೆ ತೆರಳಲಿದೆ. ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಭರವಸೆ ನೀಡಿದ್ದಾರೆ. ಕೇಂದ್ರ ನೀಡುವ ಎಲ್ಲ ಸೌಲಭ್ಯವನ್ನು ಬೆಳೆಗಾರರಿಗೆ ತಲುಪಿಸುವ ಭರವಸೆ ಕೂಡ ಸಿಕ್ಕಿದೆ. ಡಿ.9ರಂದು ಮುಖ್ಯಮಂತ್ರಿ ಸಭೆ ಕೂಡ ಕರೆದಿದ್ದಾರೆ ಎಂದು ಮಾಹಿತಿ ನೀಡಿದರು.ಹಾಲನಗೌಡ ಅವರದ್ದು ಚಿಕ್ಕ ವಯಸ್ಸು. ಕಬ್ಬು ನಾಟಿ ಮಾಡಿ 13 ತಿಂಗಳು ಕಳೆದಿವೆ. ಈಗ ನೀರು ಕೂಡ ಬಂದ್‌ ಆಗಿದೆ. ಹೀಗಾಗಿ, ಮಾನಸಿಕ ಒತ್ತಡದಿಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಬಾರದು. ನ್ಯಾಯಕ್ಕಾಗಿ ಹೋರಾಟ ನಡೆಸಲಿ. ಯಾವುದೇ ಕಾರಣಕ್ಕೂ ರೈತರು ಕಾರ್ಖಾನೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಶೇಖರನಾಯ್ಕ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಹನುಮೇಶ್‌ ಮಲ್ಲಶೆಟ್ಟಿಹಳ್ಳಿ, ಐಗೂರು ಜಯಪ್ಪ ಹಾಜರಿದ್ದರು.ಯಾರೇ ಕಬ್ಬು ತಂದರೂ ಖರೀದಿಗೆ ಸೂಚನೆ

ಯಾರೇ ಕಬ್ಬು ತಂದರೂ ಕಬ್ಬು ಖರೀದಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಕ್ಕರೆ ಕಾರ್ಖಾನೆ ಹಾಗೂ ರೈತ ಮುಖಂಡರ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.ಜಿಲ್ಲೆಯ ಎರಡು ಕಾರ್ಖಾನೆಗಳು ವಾರ್ಷಿಕ 5 ಲಕ್ಷ ಟನ್‌ ಕಬ್ಬು  ಅರೆಯುತ್ತಿವೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದಕ್ಕೂ ಮೊದಲು ₨ 2,300 ನೀಡುತ್ತಿದ್ದವು. ಸರ್ಕಾರ ಘೋಷಣೆ ಮಾಡಿದ ಬಳಿಕ ₨ 2,650 ನೀಡುತ್ತಿವೆ ಎಂದು ಮಾಹಿತಿ ನೀಡಿದರು.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಹಾಲನಗೌಡ ಅವರ ಕಬ್ಬು ಕಟಾವು ಜ.25ಕ್ಕೆ ಇತ್ತು. ಈ ಘಟನೆಯ ಬಳಿಕ ಅವರ ಕಬ್ಬು ಕಟಾವು ಮಾಡಲು ನಿರ್ಧರಿಸಲಾಗಿತ್ತು. ಆದರೆ, ರಾತ್ರೋರಾತ್ರಿ ಗದ್ದೆಗೆ ನೀರು ಹರಿಸಿರುವ ಕಾರಣ ಕಟಾವು ಕಾರ್ಯ ಮುಂದೂಡಲಾಗಿದೆ ಎಂದು ಹೇಳಿದರು.ಸಕ್ಕರೆ ಕಾರ್ಖಾನೆಗಳಿಗೆ ಹಿರಿತನದ ಆಧಾರ ಮೇಲೆ ಕಬ್ಬು ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅದಕ್ಕೂ ಮೊದಲು ಸಕ್ಕರೆ ಕಾರ್ಖಾನೆಯ ಮಾಲೀಕರ ಸಭೆ ನಡೆಯಿತು.

ಪ್ರತಿಕ್ರಿಯಿಸಿ (+)