ಕಬ್ಬು ಪೂರೈಕೆ ಸ್ಥಗಿತ: ಭರವಸೆ

7

ಕಬ್ಬು ಪೂರೈಕೆ ಸ್ಥಗಿತ: ಭರವಸೆ

Published:
Updated:

ಅಫಜಲಪುರ: ಎರಡು ಮೂರು ತಿಂಗಳುಗಳಿಂದ ರೇಣುಕಾ ಶುಗರ್ ಕಾರ್ಖಾನೆಗೆ ಪಕ್ಕದ ಮಹಾರಾಷ್ಟ್ರ ಮತ್ತು ವಿಜಾಪುರ ಜಿಲ್ಲೆಯಿಂದ ಕಬ್ಬು ಪೂರೈಕೆಯಾಗುತ್ತಿತ್ತು. ತಾಲ್ಲೂಕು ಆಡಳಿತ ಸೋಮವಾರದಿಂದ ಅದನ್ನು ಸ್ಥಗಿತಗೊಳಿಸಿ ತಾಲ್ಲೂಕಿನ ಕಬ್ಬು ನುರಿಸಲು ಕಾರ್ಖಾನೆಗೆ ತಾಕೀತು ಮಾಡುವುದಾಗಿ ಭರವಸೆ ನೀಡಿದೆ.ಕಬ್ಬು ಬೆಳೆಗಾರರಾದ ಫಿರೋಜ ಜಾಹಗೀರದಾರ, ಚಂದ್ರಶೇಖರ ನಿಂಬಾಳ, ಪಾಶಾ ಮಣೂರ, ಚಂದ್ರಾಮ ಬಳಗುಂಡಿ, ಚಿದಾನಂದ ಹಿರೇಮಠ, ಚನ್ನಬಸಯ್ಯ ಹಿರೇಮಠ, ಮಹಾದೇವ ಕಲಕೇರಿ ಮುಂತಾದವರು ಸೋಮವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ನೀವು ಹೊರ ರಾಜ್ಯದ ಕಬ್ಬನ್ನು ಸ್ಥಗಿತ ಮಾಡುವವರೆಗೆ ನಾವು ಕಚೇರಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳುತ್ತಲೆ ಅದರಲ್ಲೊಬ್ಬ ರೈತ ವಿಷ ತೆಗೆದುಕೊಳ್ಳಲು ಪ್ರಯತ್ನಪಟ್ಟರು ಎಂದು ಹೇಳಲಾಗುತ್ತಿದೆ.ರೈತರು ಬೆಳೆದಿರುವ ಪೂರ್ತಿ ಕಬ್ಬು ಕಟಾವು ಮಾಡಬೇಕು. ಕಟಾವು ಮಾಡಲು ಹೆಚ್ಚಿನ ಟೋಳಿಗಳನ್ನು ನೇಮಿಸಬೇಕು. ರೈತರಿಂದ ಕಬ್ಬು ಕಟಾವು ಮಾಡುವವರು ಮತ್ತು ವಾಹನ ಚಾಲಕರು ಹಣ ಹೀರುತ್ತಿದ್ದಾರೆ. ಅದು ನಿಲ್ಲಬೇಕು. ಈ ಎಲ್ಲ ಬೇಡಿಕೆಗಳು ಇಂದಿನಿಂದಲೆ ಜಾರಿಯಾಗಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೆ ಕಾರಣವಾಗುತ್ತದೆಂದು ಅವರು ತಿಳಿಸಿದರು.ತಹಸೀಲ್ದಾರ್ ಇಸ್ಮಾಯಿಲ ಶಿರಹಟ್ಟಿ ಹಾಗೂ ಸಿಪಿಐ ರಮೇಶ ಮೇಟಿ ಪ್ರತಿಭಟನೆಗೆ ಮಣಿದು ಸೋಮವಾರದಿಂದ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವುದನ್ನು ನಿಷೇಧ ಮಾಡುತ್ತೇವೆ. ತಾಲ್ಲೂಕಿನ ಗಡಿಯೊಳಗಿರುವ ಕಬ್ಬನ್ನು ಕಟಾವು ಮಾಡಲು ಕಾರ್ಖಾನೆಯವರಿಗೆ ತಾಕೀತು ಮಾಡುತ್ತೇವೆ ಎಂದು ಸ್ಥಳದಲ್ಲಿಯೆ ರೈತರಿಗೆ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry