ಕಬ್ಬು ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ

7

ಕಬ್ಬು ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ

Published:
Updated:

ಶ್ರೀರಂಗಪಟ್ಟಣ: ರೈತರು ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಕಬ್ಬಿಗೆ ಬೆಲೆ ನಿಗದಿಪಡಿಸಬೇಕು ಹಾಗೂ ಕಬ್ಬು ನುರಿಸುವ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂದು ಆಗ್ರಹಿಸಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಕುವೆಂಪು ವೃತ್ತದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಸುಮಾರು ಅರ್ಧ ತಾಸು ಕಬ್ಬಿನ ಜಲ್ಲೆ ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮೈಸೂರು ಕಡೆ ತೆರಳುತ್ತಿದ್ದ ರಾಜ್ಯಪಾಲರ ವಾಹನದತ್ತ ಪ್ರತಿಭಟನಾಕಾರರು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದಾಗ ಪೊಲೀಸರು ತಡೆದರು.ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕಬ್ಬಿಗೆ ಬೆಲೆ ನಿಗದಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜನರಿಗೆ ಸಿಗುತ್ತಿಲ್ಲ. ಬೆಳೆದಿರುವ ಕಬ್ಬು ಅವಧಿ ಮೀರುತ್ತಿದ್ದು ನೆಲಕ್ಕೆ ಒರಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ಕಬ್ಬನ್ನೇ ನೆಚ್ಚಿಕೊಂಡು ಮನೆ, ಮದುವೆ ಕಾರ್ಯಗಳನ್ನು ಗೊತ್ತು ಮಾಡಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಟನ್ ಕಬ್ಬಿಗೆ ರೂ 3 ಸಾವಿರ ಬೆಲೆ ಹಾಗೂ ರೂ.2500 ಮುಂಗಡ ನಿಗದಿ ಮಾಡಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.ನಗುವನಹಳ್ಳಿ ಎನ್. ಶಿವಸ್ವಾಮಿ ಮಾತನಾಡಿ, ನಂಜನಗೂಡು ಬನ್ನಾರಿ ುಮ್ಮನ್ ಕಾರ್ಖಾನೆ ರೂ 2400, ಕೆ.ಆರ್. ಪೇಟೆ ಐಸಿಎಲ್ ರೂ 2100 ಮುಂಗಡ ಘೋಷಿಸಿವೆ. ಆದರೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದ ಕಾರಣ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎನ್.ವಿ. ಚಲುವರಾಜು, ವೆಂಕಟೇಶ್, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ, ತಾಲ್ಲೂಕು ಅಧ್ಯಕ್ಷ ಕೆ.ಬಿ. ಬಸವರಾಜು, ಬಿ.ಎಸ್. ಸಂದೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry