ಕಬ್ಬು ಬೆಲೆ ನಿಗದಿಗೆ ಸಭೆ ವಿಫಲ

7

ಕಬ್ಬು ಬೆಲೆ ನಿಗದಿಗೆ ಸಭೆ ವಿಫಲ

Published:
Updated:

ಮಂಡ್ಯ: ಪ್ರತಿ ಟನ್ ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ಸೋಮವಾರ ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಅಂಬರೀಷ್ ಅವರ ನೇತೃತ್ವದಲ್ಲಿ ನಡೆದ ಸಭೆ ಒಮ್ಮತಕ್ಕೆ ಬರಲು ವಿಫಲವಾಯಿತು.ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ 2,400 ರೂಪಾಯಿ ನೀಡಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದರೆ, ಅಷ್ಟು ಹಣ ನೀಡಲು ಸಾಧ್ಯವಿಲ್ಲ. ಪ್ರತಿ ಟನ್‌ಗೆ 2,100 ರೂಪಾಯಿ ನೀಡಲಾಗುವುದು  ಎಂದು ಸಕ್ಕರೆ ಕಾರ್ಖಾನೆಗಳವರು ಪಟ್ಟು ಹಿದಿಡ ಪರಿಣಾಮ ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ.ರೈತರ ಹಿತವನ್ನು ಕಾಪಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಮುಂಗಡವಾಗಿ 2,400 ರೂಪಾಯಿ ನೀಡಿ. ನಂತರ ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಬೆಲೆ ನಿಗದಿ ಮಾಡಲಾಗುವುದು ಎಂದು ಸಚಿವರು ಹೇಳಿದರಾದರೂ, ಇದಕ್ಕೆ ಕಾರ್ಖಾನೆಯವರು ಸಮ್ಮತಿ ಸೂಚಿಸಲಿಲ್ಲ.ಶಾಸಕರಾದ ನರೇಂದ್ರಸ್ವಾಮಿ, ಎನ್. ಚಲುವರಾಯ ಸ್ವಾಮಿ, ಪುಟ್ಟಣ್ಣಯ್ಯ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಡಿ.ಸಿ. ತಮ್ಮಣ್ಣ, ಬಿ.ರಾಮಕೃಷ್ಣ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಸಿಇಒ ಪಿ.ಸಿ. ಜಯಣ್ಣ ಇತರರು ಉಪಸ್ಥಿತರಿದ್ದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಂಬರೀಷ್, ಕಬ್ಬು ದರ ನಿಗದಿ ಕುರಿತು ಚರ್ಚೆ ನಡೆಸಲಾಗಿದೆ. ರೈತರು ಹಾಗೂ ಕಾರ್ಖಾನೆಯವರ ಕಡೆಯ ಅಹವಾಲನ್ನು ಆಲಿಸಿದ್ದೇನೆ. ಸಕ್ಕರೆ ಸಚಿವರೊಂದಿಗೆ ಸಭೆ ನಡೆಸಿ ದರವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.ರೈತ ಮುಖಂಡರು ಪ್ರತಿ ಟನ್‌ಗೆ ಕಬ್ಬಿಗೆ 2,400 ರೂಪಾಯಿ ಮುಂಗಡ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳವರು ಒಪ್ಪಿಕೊಳ್ಳಲಿಲ್ಲ ಎಂದು ತಿಳಿಸಿದರು.ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2,400 ರೂಪಾಯಿ ನೀಡಲಾಗಿದೆ. ಈ ಬಾರಿಯೂ ಅಷ್ಟು ಹಣವನ್ನು ಮುಂಗಡವಾಗಿ ನೀಡಬೇಕು. ಸರ್ಕಾರ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ ಎಂದರು.ಕಳೆದ ವರ್ಷದ ಪ್ರತಿ ಟನ್ ಕಬ್ಬಿಗೆ  2,400 ರೂಪಾಯಿ ನೀಡಲಾಗಿತ್ತು. ಈ ಬಾರಿಯೂ ಅಷ್ಟು ಹಣವನ್ನು ಮುಂಗಡವಾಗಿ ನೀಡಿ. ನಂತರ ಬೆಲೆಯನ್ನು ಸರ್ಕಾರ ಮಟ್ಟದಲ್ಲಿ ಬೆಲೆಯನ್ನು ನಿರ್ಧರಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆಗಳವರಿಗೆ ಸೂಚಿಸಿದ್ದೇನೆ ಎಂದರು.ಸಚಿವ, ಶಾಸಕರ ವಾಗ್ವಾದ

ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಹಾಗೂ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ನಡುವೆ ಮಾತಿನ ವಿನಿಮಯವಾಯಿತು.ಷೋಕಿ ಮಾಡುತ್ತೇನಂತೆ, ಜನರ ಬಳಿಗೆ ಹೋಗುವುದಿಲ್ಲ ಎಂದು ಕೆಲವರು ಟೀಕಿಸುತ್ತಾರೆ. ಟೀಕಿಸುವಾಗ ಪದಗಳ ಬಳಕೆಯನ್ನು ನೋಡಿ ಮಾಡಬೇಕು ಎಂದು ಸಚಿವ ಅಂಬರೀಷ್ ಹೇಳಿದರು. ಇದಕ್ಕುತ್ತರಿಸಿದ ಶಾಸಕ ಪುಟ್ಟಣ್ಣಯ್ಯ, ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ.ಜವಾಬ್ದಾರಿ ಬರಲಿ ಎಂದು ಹಾಗೆ ಹೇಳಿದ್ದೇನೆ. ತಪ್ಪು ಮಾಡಿದರೆ ಟೀಕಿಸುವುದನ್ನು ಮುಂದುವರೆಸುತ್ತೇನೆ. ಟೀಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಖಡಕ್ಕಾಗಿಯೇ ಹೇಳಿದರು. ಸಭೆಯಲ್ಲಿದ್ದವರು, ಇಬ್ಬರನ್ನು ಸಮಾಧಾನಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry