ಕಬ್ಬು ಬೆಲೆ ನಿಗದಿ: ವಾದ–ಪ್ರತಿವಾದ

7

ಕಬ್ಬು ಬೆಲೆ ನಿಗದಿ: ವಾದ–ಪ್ರತಿವಾದ

Published:
Updated:
ಕಬ್ಬು ಬೆಲೆ ನಿಗದಿ: ವಾದ–ಪ್ರತಿವಾದ

ಟನ್‌ ಕಬ್ಬಿನ ಬೆಲೆ ನಿಗದಿಗಾಗಿ ಮತ್ತೆ ಕೂಗು ಕೇಳಿಬರಲಾರಂಭಿಸಿದೆ. ಪ್ರತಿ ವರ್ಷ ಕಬ್ಬು ಅರೆಯುವಿಕೆ ಪ್ರಕ್ರಿಯೆಯ ಆರಂಭದ ದಿನಗಳಲ್ಲಿ ಬೆಲೆ ನಿಗದಿಗಾಗಿ ರೈತರು ಹೋರಾಟ ಆರಂಭಿಸುವುದು ಸಾಮಾನ್ಯವಾಗಿದೆ. ಕೆಲವು ಬಾರಿ ‘ಮುಂಗಡ ಹಣ’ ಎಂದು ಆರಂಭದಲ್ಲಿ ಘೋಷಿಸಿದ್ದೇ ಅಂತಿಮ ಬೆಲೆಯಾಗಿಯೂ ನಿರ್ಧಾರವಾಗಿದ್ದೂ ಇದೆ.ಕಬ್ಬು ಅರೆಯುವ ಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಮೊದಲು ಆರಂಭಿಸುತ್ತವೆ. ಹಾಗಾಗಿ ಆ ವರ್ಷದ ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ಈ ಜಿಲ್ಲೆ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿನ ‘ಮೈಷುಗರ್ ಸಕ್ಕರೆ ಕಾರ್ಖಾನೆ’ಯ ಬೆಲೆಯನ್ನೇ ಉಳಿದೆಡೆಯ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಕಬ್ಬಿನ ಬೆಲೆ ನಿಗದಿಗೆ ಮಾನದಂಡವನ್ನಾಗಿಸಿಕೊಳ್ಳುತ್ತವೆ.ಈ ವರ್ಷ ಮುಂಗಡವಾಗಿ ‘ಮೈಷುಗರ್‌’ ಹಾಗೂ ‘ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ’ಗಳಿಗೆ ಪ್ರತಿ ಟನ್‌ ಕಬ್ಬಿಗೆ ₨2400 ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ಉಳಿದ ಕಾರ್ಖಾನೆಗಳೂ ಇದನ್ನೇ ಅನುಸರಿಸುತ್ತಿವೆ. ರಾಜ್ಯದ ವಿವಿಧೆಡೆಯ ಉಳಿದ ಕಾರ್ಖಾನೆಗಳೂ ಇದೇ ಬೆಲೆಯನ್ನು ಅನುಸರಿಸಿದರೂ ಆಶ್ಚರ್ಯವಿಲ್ಲ.‘ಮೈಷುಗರ್‌ ಸಕ್ಕರೆ ಕಾರ್ಖಾನೆ’ಯು ಉಳಿದ ಕಾರ್ಖಾನೆಗಳ ಬೆಲೆ ನಿಗದಿ ಮಾನದಂಡವಾಗಬಾರದು ಎನ್ನುವುದು ರೈತ ಮುಖಂಡರ, ಕಬ್ಬು ಬೆಳೆಗಾರರ ಆಗ್ರಹ.ಮೈಷುಗರ್‌ ಸಕ್ಕರೆ ಕಾರ್ಖಾನೆ ಸರ್ಕಾರದ ಮಾಲೀಕತ್ವದ ಕಾರ್ಖಾನೆ. ಜತೆಗೆ ಸದ್ಯ ನಷ್ಟದಲ್ಲಿಯೂ ಇದೆ. ಈ ಕಾರ್ಖಾನೆಯಲ್ಲಿ ಕಬ್ಬಿನ ತ್ಯಾಜ್ಯವನ್ನು ಉರಿಸಿ ವಿದ್ಯುತ್‌ ಉತ್ಪಾದಿಸುವ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ‘ರಿಕವರಿ’­ಯೂ(ಸಕ್ಕರೆ ಇಳುವರಿ) ಕಡಿಮೆ. ಹಾಗಾಗಿ, ಮಂಡ್ಯ ಜಿಲ್ಲೆಯ, ಮೈಷುಗರ್‌ ಕಾರ್ಖಾನೆಯ ದರವನ್ನೇ ಇತರೆಡೆಗೂ ಬೆಲೆ ನಿಗದಿಗೆ ಮಾನದಂಡವಾಗಿಸಬಾರದು ಎಂಬುದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌್ ಅವರ ಒತ್ತಾಯವಾಗಿದೆ.ಕೇಂದ್ರ ಸರ್ಕಾರ 9.5 ರಿಕವರಿ ಇರುವ ಪ್ರತಿ ಟನ್‌ ಕಬ್ಬಿಗೆ ₨2,100 ದರ ಎಂದು ಘೋಷಿಸಿದೆ. ರಾಜ್ಯದಲ್ಲಿ ಬೆಲೆ ನಿಗದಿಗಾಗಿ ಕಬ್ಬು ಖರೀದಿ ಹಾಗೂ ಸರಬರಾಜು ನಿಯಂತ್ರಣ ಮಂಡಳಿ ರಚಿಸಲಾಗಿದೆ. ಆದರೆ, ಈ ಮಂಡಳಿ ಇನ್ನೂ ಈ ವರ್ಷದ ಕಬ್ಬಿನ ಬೆಲೆ ಘೋಷಿಸಿಲ್ಲ.ಒಂದು ಎಕ್ಕರೆ ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ? ಒಂದು ಟನ್‌್ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳಿಗೆ ಎಷ್ಟು ಆದಾಯ ಬರುತ್ತದೆ? ಈ ಲೆಕ್ಕಾಚಾರದ ಮೇಲೆ ಬೆಲೆ ನಿಗದಿಯಾಗಿದೆಯೇ? ಈ ವಿಚಾರವಾಗಿಯೂ ಚರ್ಚೆಯಾಗಬೇಕಿದೆ ಎಂಬುದು ಕಬ್ಬು ಬೆಳೆಗಾರರ ವಾದ.

ಒಂದು ಎಕರೆ ಕಬ್ಬು ಬೆಳೆಯಲು ಎಷ್ಟು ವೆಚ್ಚವಾಗುತ್ತದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ;ಭೂಮಿ ಹದಗೊಳಿಸಲು ₨2,600, ತೆವರಿ ತೆಗೆಯಲು ₨1200 ಹಾಗೂ 20 ಟ್ರ್ಯಾಕ್ಟರ್‌ ಕೊಟ್ಟಿಗೆ ಗೊಬ್ಬರ ಖರೀದಿಗೆ, ಸಾಗಣೆಗೆ ಮತ್ತು ಗದ್ದೆಯಲ್ಲಿ ಹರಡಲು ₨13,200, ಕಬ್ಬು ಬಿತ್ತನೆಗೆ ₨7,500 ವೆಚ್ಚವಾಗುತ್ತದೆ.ರಸಗೊಬ್ಬರ, ಕಳೆ ನಾಶಕ ಹಾಗೂ ಸಿಂಪಡಣೆಗಾಗಿ ₨22,300, ಹಲವು ಹಂತಗಳಲ್ಲಿ ಉಳುಮೆ ಸೇರಿದಂತೆ ಮಧ್ಯಂತರ ಬೇಸಾಯ ಮಾಡಲು ₨9100 ಹಾಗೂ 14 ತಿಂಗಳ ಅವಧಿಯಲ್ಲಿ ನೀರು ಹಾಯಿಸಲು ₨4,200. ಇದೆಲ್ಲವೂ ಸೇರಿದಂತೆ ಒಂದು ಎಕರೆ ಕಬ್ಬು ಬೆಳೆಯಲೇ ಒಟ್ಟು ₨64,900 ಖರ್ಚಾ­ಗುತ್ತದೆ ಎನ್ನುತ್ತಾರೆ ಕಬ್ಬು ಬೆಳೆಗಾರ ಹಾಡ್ಯ ರಮೇಶ್‌..

.

ಅಲ್ಲದೇ ಪ್ರತಿ ಟನ್‌ ಕಬ್ಬು ಕಡಿಯಲು ಕೃಷಿ ಕಾರ್ಮಿಕರ ಕೂಲಿಯೇ ₨350ರಷ್ಟಿದೆ. ಗದ್ದೆಯಿಂದ ರಸ್ತೆ ಬದಿವರೆಗೂ ಹೊತ್ತು ತಂದು ಎತ್ತಿನ ಗಾಡಿಗೆ ಅಥವಾ ಟ್ರ್ಯಾಕ್ಟರ್‌ಗೆ ಭರ್ತಿ ಮಾಡಲು ₨150 ಹೆಚ್ಚುವರಿ ಕೂಲಿ ಕೊಡಬೇಕು. ಅಷ್ಟೇ ಅಲ್ಲದೆ, ಪ್ರತಿ ಟನ್‌ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ₨150ರಿಂದ 200ರವರೆಗೂ ವೆಚ್ಚಾಗುತ್ತದೆ.ಒಂದು ಎಕರೆಯಲ್ಲಿ 40 ಟನ್‌ ಕಬ್ಬು ಇಳುವರಿ ಬರುತ್ತದೆ ಎಂದಿಟ್ಟುಕೊಂಡರೆ, ಪ್ರತಿಟನ್‌ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸುವ ಹಂತದವರೆಗೂ ಒಟ್ಟಾರೆಯಾಗಿ ₨2400 ಖರ್ಚು ಬರುತ್ತದೆ ಎಂದು ಕಬ್ಬು ಬೆಳೆಯ ಕಷ್ಟಗಳನ್ನು, ವೆಚ್ಚವನ್ನು ಕುರಿತು ವಿವರ ನೀಡುತ್ತಾರೆ ಹಾಡ್ಯ ರಮೇಶ್‌.

.

ಗುಜರಾತಿನ ‘ಗಾನದೇವಿ ಸಕ್ಕರೆ ಕಾರ್ಖಾನೆ’ಯು ಶೇ 11ರಷ್ಟು ‘ರಿಕವರಿ’ ತರುವ ಪ್ರತಿಟನ್‌ ಕಬ್ಬಿಗೆ ₨3,430 ನೀಡುತ್ತಿದೆ. ಜತೆಗೆ ಈ ಕಾರ್ಖಾನೆ ₨116 ಕೋಟಿ ಲಾಭವನ್ನೂ ತೋರಿಸಿದೆ. ಬಾಗಲಕೋಟೆ ಜಿಲ್ಲೆಯ ‘ನಂದಿ ಸಕ್ಕರೆ ಕಾರ್ಖಾನೆ’ 2012ರಲ್ಲಿ ಟನ್‌ ಕಬ್ಬಿಗೆ ₨2,650 ಬೆಲೆ ಹಾಗೂ ಕಟಾವು ಮತ್ತು ಸಾಗಣೆ ವೆಚ್ಚವಾಗಿ ಪ್ರತ್ಯೇಕವಾಗಿ ₨500 ನೀಡಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್‌....

.

ಪ್ರತಿ ಟನ್‌ ಕಬ್ಬಿಗೆ ಶೇ 9ರಷ್ಟು ರಿಕವರಿ ಬರುವ ಮಂಡ್ಯ ಕಬ್ಬಿಗೂ ಶೇ 11ರಿಂದ ಶೇ 12ರಷ್ಟು ‘ರಿಕವರಿ’ ಬರುವ ಬೆಳಗಾವಿ ಮುಂತಾದೆಡೆಯಲ್ಲಿನ ಕಬ್ಬಿಗೂ ಅದೇ ಬೆಲೆ ನೀಡಲಾಗುತ್ತಿದೆ. ಜತೆಗೆ ವಿದ್ಯುತ್‌ ಉಪ ಉತ್ಪನ್ನವಿಲ್ಲದ ‘ಮೈಷುಗರ್‌ ಕಾರ್ಖಾನೆ’ಯ ದರವನ್ನೇ ಉಳಿದೆಡೆಯವರೂ ಆಧರಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಶಾಂತಕುಮಾರ್‌.‘ಪ್ರತಿ ಟನ್‌ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳಿಗೆ ಬರುವ ಆದಾಯದಲ್ಲಿ ಶೇ 75ರಷ್ಟು ರೈತರಿಗೆ, ಶೇ 25ರಷ್ಟು ಕಾರ್ಖಾನೆಗಳಿಗೆ ಹಂಚಿಕೆಯಾಗಬೇಕು’ ಎಂಬುದು ರಂಗರಾಜನ್‌ ಸಮಿತಿ ವರದಿಯಲ್ಲಿದೆ. ಆದರೆ, ಕಾರ್ಖಾನೆಗಳು ನೀಡುವ ಸುಳ್ಳು ಲೆಕ್ಕಗಳಿಂದಾಗಿ ರೈತರ ಕಬ್ಬಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ ಎಂದು ಅವರು ಆರೋಪಿಸುತ್ತಾರೆ.ಕಾರ್ಖಾನೆ ಆದಾಯ; ವಾದ–ಪ್ರತಿವಾದ

ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಟನ್‌ ಕಬ್ಬಿಗೆ ‘ರಿಕವರಿ’ ಶೇ 9ರ ಆಸುಪಾಸು (ಅಂದರೆ 90ಕೆಜಿ ಸಕ್ಕರೆ ಇಳುವರಿ) ಇದ್ದರೆ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ‘ರಿಕವರಿ’ ಶೇ 11ರಿಂದ 12ರವರೆಗೂ ಇದೆ.

2012ರಲ್ಲಿ ಕ್ವಿಂಟಲ್‌ ಸಕ್ಕರೆ ಕಾರ್ಖಾನೆಗಳಿಂದ ಸರಾಸರಿ ₨3,100 ಲೆಕ್ಕದಲ್ಲಿ ಮಾರಾಟವಾಗಿದೆ. ಅಲ್ಲದೇ ಉಪ ಉತ್ಪನ್ನ ರೂಪದಲ್ಲಿ 40 ಕೆಜಿ ಮೊಲ್ಯಾಸಿಸ್‌ ದೊರೆಯುತ್ತದೆ. ಇದರಿಂದ 12 ಲೀಟರ್‌ ಸ್ಪಿರಿಟ್‌ (ಮದ್ಯಸಾರ)  ತೆಗೆಯಬಹುದಾಗಿದೆ. ಪ್ರತಿ ಕೆ.ಜಿ ಸ್ಪಿರಿಟ್‌ ₨30ರಂತೆ ಮಾರಾಟವಾದರೆ ಒಟ್ಟು ₨360 ಲಭಿಸುತ್ತದೆ.300ರಿಂದ 350 ಕೆ.ಜಿ.ಯಷ್ಟು ಬಗ್ಯಾಸ್‌ (ಕಬ್ಬಿನ ಹೊಟ್ಟಿನಂತಹ ತ್ಯಾಜ್ಯ) ದೊರೆಯುತ್ತದೆ. ಇದನ್ನು ಉರಿಸಿ ಅದರಿಂದ ಬರುವ ಶಾಖದಿಂದ ಟರ್ಬೈನ್‌ ಚಾಲನೆಗೊಳಿಸಿ 140 ಯುನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸಬಹುದಾಗಿದೆ.ಪ್ರತಿ ಯೂನಿಟ್‌ ವಿದ್ಯುತ್‌ ₨6ರಂತೆ ಮಾರಾಟವಾದರೂ ಪ್ರತಿ ಟನ್‌ ಕಬ್ಬಿನಿಂದ ಹೊರಬರುವ ಬಗ್ಯಾಸ್‌ನಿಂದ ಒಟ್ಟು ₨840 ಲಭಿಸುತ್ತದೆ. ಪ್ರತಿ ಟನ್‌ ಕಬ್ಬಿನ ಮಡ್ಡಿಯಿಂದ ₨75 ಲಭಿಸುತ್ತದೆ ಎಂದು ಅನುಭವಿ ಕಬ್ಬು ಬೆಳೆಗಾರರು ಪ್ರತಿಪಾದಿಸುತ್ತಾರೆ.‘ರಿಕವರಿ’ ಆಧಾರದ ಮೇಲೆಯೇ ಸಕ್ಕರೆ ಉತ್ಪಾದನೆ ಆಗುವುದರಿಂದ ಆ ವಿಚಾರವನ್ನು ಕಾರ್ಖಾನೆಯವರೂ ಒಪ್ಪಿಕೊಳ್ಳುತ್ತಾರೆ. ವಿದ್ಯುತ್‌ ಉತ್ಪಾದನೆ  ವಿಚಾರಕ್ಕೆ ಬಂದರೆ, ಪ್ರತಿ ಟನ್‌ ಕಬ್ಬಿನಿಂದ ಕೇವಲ 30ರಿಂದ 32 ಯುನಿಟ್‌್ ಉತ್ಪಾದನೆಯಷ್ಟೇ ಸಾಧ್ಯ. ಅದೂ ಯುನಿಟ್‌ಗೆ ₨4.15 ಲೆಕ್ಕದಲ್ಲಿಯೇ ಮಾರಾಟವಾಗುತ್ತದೆ. ಮೊಲ್ಯಾಸಿಸ್‌ ಕೇವಲ 40 ಕೆ.ಜಿ ಬರುತ್ತದೆ. ಸಕ್ಕರೆ ಉತ್ಪಾದನೆ ನಂತರ ಹೊರಬರುವ ಮಡ್ಡಿಯನ್ನು ಟನ್‌ಗೆ ಕೇವಲ ₨35ರಂತೆ ನೀಡಲಾಗುತ್ತದೆ ಎಂಬುದು ಕಾರ್ಖಾನೆಯವರ ವಾದ.ಪ್ರತಿ ಟನ್‌ ಕಬ್ಬಿನಿಂದ 300 ಕೆ.ಜಿ.ಯಷ್ಟು ಬಗ್ಯಾಸ್‌ ಬರುವುದು ನಿಜ. ಅದಷ್ಟನ್ನೂ ಸಂಪೂರ್ಣವಾಗಿ ವಿದ್ಯುತ್‌ ಉತ್ಪಾದನೆಗೇ ಬಳಸಿದರೆ, 140 ಯುನಿಟ್‌ ವಿದ್ಯುತ್‌ ತಯಾರಿಸಲು ಸಾಧ್ಯ. ಆದರೆ, 200 ಕೆ.ಜಿ.ಯಷ್ಟು ಬಗ್ಯಾಸನ್ನು ಸಕ್ಕರೆ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಆ ವಿಚಾರವನ್ನು ಮಾತ್ರ ಕಾರ್ಖಾನೆಯವರು ಹೇಳುತ್ತಿಲ್ಲ ಎಂದು ಕಬ್ಬು ಬೆಳೆಗಾರರು ಬೇರೆಯದೇ ಲೆಕ್ಕ ಮುಂದಿಡುತ್ತಾರೆ.ಬಹುಪಾಲು ಸಕ್ಕರೆ ಸಿಹಿತಿಂಡಿಗೆ

ಪ್ರತಿ ವರ್ಷದ ಸಕ್ಕರೆ ಉತ್ಪಾದನೆಯಲ್ಲಿ ಶೇ 12ರಿಂದ 15ರಷ್ಟು ಮಾತ್ರ ಸಾಮಾನ್ಯ ಬಳಕೆದಾ­ರರಿಗೆ ಹೋಗುತ್ತಿದೆ. ಉಳಿದ ಬಹುಪಾಲು ಸಕ್ಕರೆ ಸಿಹಿತಿಂಡಿ, ಹೋಟೆಲ್‌, ತಂಪು ಪಾನೀಯ, ಬಿಸ್ಕತ್‌ ತಯಾರಿಕೆಗೆ ಹೋಗುತ್ತದೆ. ಅದನ್ನು ಗಮನದಲ್ಲಿ­ಟ್ಟುಕೊಂಡಾಗ ಸಕ್ಕರೆ ಮಾರುಕಟ್ಟೆಯನ್ನು ಮುಕ್ತಗೊಳಿಸಬೇಕು. ಆಗಲೇ ಸಕ್ಕರೆ ಕಾರ್ಖಾನೆಗಳು ಸದೃಢಗೊಳ್ಳಲು ಹಾಗೂ ರೈತರಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯ ಎನ್ನುತ್ತಾರೆ ಕೋರಮಂಡಲ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಬಾಬುರಾಜ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry