ಕಬ್ಬು ಬೆಳೆಗಾರರ ಬಾಕಿ ಬಿಡುಗಡೆಗೆ ಆಗ್ರಹ

7

ಕಬ್ಬು ಬೆಳೆಗಾರರ ಬಾಕಿ ಬಿಡುಗಡೆಗೆ ಆಗ್ರಹ

Published:
Updated:

ಮುಧೋಳ: ರೈತರು ಗೌರವದಿಂದ ಜೀವನ ಸಾಗಿಸಲು ಸಾಧ್ಯವಾಗುವಂತೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಮುಖಂಡರು ಮನವಿ ಮಾಡಿದರು.ಪಟ್ಟಣದಲ್ಲಿ ಜಾಗರಿ ಪಾರ್ಕ್ ಉದ್ಘಾಟನೆಗೆ ಆಗಮಿಸಿದ್ದ  ಕೃಷಿ ಸಚಿವ ಕೃಷ್ಣ ಬೈರೇಗೌಡರಿಗೆ ಪ್ರವಾಸಿ ಮಂದಿರ ದಲ್ಲಿ ಮನವಿ ಸಲ್ಲಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿದರು. ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಪುರೈಸಿ ಎಂಟು ತಿಂಗಳು ಗತಿಸಿದರೂ ಮೊದಲ ಕಂತಿನ ಹಣ ಪಾವತಿಸಿಲ್ಲ. ರೈತರ ಕೈಯಲ್ಲಿ ಹಣ ಇಲ್ಲದೆ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಎಲ್ಲಡೆ ಸಾಲಗಾರ ನಾಗಿದ್ದಾರೆ. ಹಿಂದಿನ ಬಾಕಿ ತೀರಿಸದ ಹೊರತು ಗೊಬ್ಬರ ಅಂಗಡಿಗಳು ಮತ್ತೆ ಸಾಲ ನೀಡುತ್ತಿಲ್ಲ. ರೈತನಿಗೆ ಆತ್ಮ ಹತ್ಯೆ ಒಂದೇ ದಾರಿ ಎನ್ನುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.  ತಾಲ್ಲೂಕಿನ ನಿರಾಣಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು 2012-13 ಸಾಲಿನ ಮೊದಲ ಕಂತು ರೂ 84.85ಕೋಟಿ ರೈತರಿಗೆ ಪಾವತಿ ಸದೆ ಸತಾಯಿಸುತ್ತಿದೆ.  2011-12 ಸಾಲಿನ ಎರಡನೇ ಕಂತಿನ ಹಣ ರೂ 150 ರಂತೆ ರೂ 5.5 ಕೋಟಿ ಬಾಕಿ ಉಳಿಸಿಕೊಂಡಿದೆ. 2011-12 ಸಾಲಿನ ಎರಡನೇ ಕಂತಿನ ಹಣವನ್ನು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ರೂ 38.35 ಕೋಟಿ, ಜೆಮ್ ಸಕ್ಕರೆ ಕಾರ್ಖಾನೆ ರೂ 4.5 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ, ಶಾಸಕ ಗೋವಿಂದ ಕಾರಜೋಳ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎಲ್ಲ ಸಕ್ಕರೆ ಕಾಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ಜುಲೈ 23 ರ ವಳಗಾಗಿ ಎಲ್ಲ ಹಣ ಪಾವತಿಸುವದಾಗಿ ಒಪ್ಪಿಕೊಂಡಿದ್ದ ಕಾರ್ಖಾನೆಗಳು ಒಪ್ಪಕೊಂಡಂತೆ ನಡೆಯಲಿಲ್ಲ ಎಂದು ರೈತ ಮುಖಂಡರು ದೂರಿದರು.ಎಸ್‌ಎಪಿ (ರಾಜ್ಯ ಸಲಹಾ ಸಮಿತಿ) ಕಾನೂನಿಗೆ ರಾಜ್ಯಪಾಲರು ಅಂಕಿತ ಹಾಕಿದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇನ್ನೂ ಕಾನೂನು ಜಾರಿಯಾಗಿಲ್ಲ. 2013-14 ಸಾಲಿನ ಕಬ್ಬು ನುರಿಸುವ ಹಂಗಾಮು ಅಕ್ಟೋಬರ್‌ನಲ್ಲಿ ಆರಂಭವಾಗುತ್ತದೆ. ಅದಕ್ಕಾಗಿ ಪೂರ್ಣ ಪ್ರಾಮಾಣದ ಸಮಿತಿ ರಚಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ರೈತರ ಸಮಸ್ಯೆಗಳನ್ನು  ಆಲಿಸಿದ ಕೃಷ್ಣ ಬೈರೇಗೌಡರು ಹಾಗೂ  ಸಚಿವ ಎಸ್.ಆರ್. ಪಾಟೀಲರು ಅವರು, ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ರೈತರ ಸಮಸ್ಯೆಗಳ ನಿವಾರಣೆಗೆ ಪ್ರಯ ತ್ನಿಸಲಾಗುವುದು ಎಂದು ಹೇಳಿದರು.ಶಾಸಕ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಜಿ.ಎಸ್. ನ್ಯಾಮಗೌಡ, ಅರುಣ ಶಾಹಾಪುರ, ಮಹಾಂತೇಶ ಕೌಜಲಗಿ, ಶ್ರೀನಿವಾಸ ಮಾನೆ,  ಮಾಜಿ ಸಚಿವ ಆರ್.ಬಿ. ತಿಮ್ಮಾಪುರ,  ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ,  ಸುಭಾಷ ಶಿರಬೂರ, ನಾಗೇಶ ಸೋರಗಾಂವಿ, ಮುತ್ತಪ್ಪ ಕೋಮಾರ, ಬಂಡು ಘಾಟಗೆ, ರುದ್ರಪ್ಪ ಅಡವಿ, ಈರಪ್ಪ ಹಂಚಿನಾಳ,  ಸುರೇಶ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry