ಸೋಮವಾರ, ಜೂನ್ 14, 2021
23 °C

ಕಬ್ಬು ಬೆಳೆಗಾರರ ಸತ್ಯಾಗ್ರಹ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ರಾಜ್ಯ ಸಲಹಾ ಕಾಯ್ದೆ ಜಾರಿಗೆ ಒತ್ತಾಯಿಸಿ ಇದೇ 21ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ಫ್ರೀಡ್‌ಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ  ಹಮ್ಮಿ ಕೊಳ್ಳಲಾಗಿದೆ ಎಂದು ಕಬ್ಬು  ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ  ಕುರುಬೂರ ಶಾಂತಕುಮಾರ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಬೆನ್ನು ಹತ್ತಿ ಅವರಿಗೆ ಅಧಿಕಾರ ಕೊಡಿಸಲು ಶ್ರಮ ಪಡುತ್ತಿರುವ ರಾಜ್ಯದ ಮಠಾಧೀಶರು ರೈತರ ನೆರವಿಗೆ ಬರಬೇಕು. ಎಲ್ಲ ಮಠಗಳ ಭಕ್ತರಲ್ಲಿ ರೈತರೇ ಮುಕ್ಕಾಲು ಭಾಗ ಇದ್ದಾರೆ. ತಮ್ಮ ಮಠಗಳ ಭಕ್ತರಾದ ರೈತರು ಚೆನ್ನಾಗಿರಬೇಕೆಂಬುದು ಮಠಾಧೀಶರ ಇಚ್ಛೆಯಾಗಿದ್ದರೆ ಮಾ. 21ರಂದು ಕಬ್ಬು ಬೆಳೆಯುವ ರೈತರು ನಡೆಸುವ  ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಬೇಕು ಎಂದರು.ರಾಜ್ಯದಲ್ಲಿರುವ 58 ಸಕ್ಕರೆ ಕಾರ್ಖಾನೆಗಳ ಪೈಕಿ 40ಕ್ಕೂ ಹೆಚ್ಚು ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 1,500 ಕೋಟಿ ರೂಪಾಯಿ ಕೊಡಬೇಕಾಗಿದೆ. ನಾಲ್ಕು ತಿಂಗಳು ಕಳೆದರೂ ಇನ್ನೂ ಹಣ ಕೊಟ್ಟಿಲ್ಲ. ಬಹುತೇಕ ಕಾರ್ಖಾನೆಗಳ ಮಾಲೀಕರು ವಿವಿಧ ಪಕ್ಷಗಳ ಸಚಿವರು, ಸಂಸದರು, ಶಾಸಕರಾಗಿರುವುದರಿಂದ  ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂದರು.ಸೂಕ್ತ ಬೆಲೆ ಹಾಗೂ ಸಕಾಲಕ್ಕೆ ಹಣ ನಿಡಿದ ಕಾರ್ಖಾನೆಗಳ ವ್ಯವಸ್ಥಾಪಕ  ನಿರ್ದೇಶಕರ ಮೇಲೆ ಕಾನೂನು ಕ್ರಮ ಕೈಕೊಳ್ಳಲು  ಆಯಾ ಜಿಲ್ಲಾಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಕೊಂಡು ರೈತರಿಗೆ ಕಾರ್ಖಾನೆಗಳಿಂದ ಹಣ ಕೊಡಿಸಬೇಕೆಂದು ಒತ್ತಾಯಿಸಿದರು.ಕಬ್ಬು ಬೆಳೆದ ರೈತರಿಗೆ ನ್ಯಾಯಯುತ ಬೆಲೆ ನೀಡಲು ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅದಕ್ಕಾಗಿ ಎಸ್‌ಎಪಿ ಕಾಯ್ದೆ ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಸತ್ಯಾಗ್ರಹದಲ್ಲಿ 5 ಸಾವಿರ ರೈತರು ಭಾಗವಹಿಸಲಿದ್ದಾರೆ.

 

ಕಬ್ಬು ಬೆಳೆಯುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ, ಹರಿಯಾಣದಲ್ಲಿ  ಸಕ್ಕರೆ ಇಳುವರಿ ಪ್ರಮಾಣ ಶೇ.8.5 ರಷ್ಟಿದ್ದು,ಅಲ್ಲಿ ಎಸ್‌ಎಪಿ ಕಾಯ್ದೆಯಂತೆ ಪ್ರತಿ ಟನ್ ಗೆ 2 ಸಾವಿರ ರೂಪಾಯಿ ಕೊಡಲಾಗುತ್ತದೆ. ಆ ವ್ಯವಸ್ಥೆ  ನಮ್ಮ ರಾಜ್ಯದಲ್ಲಿಯೂ ಜಾರಿಗೆ ಬಂದರೆ  ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಬೆಲೆ ಸಿಗುತ್ತದೆ ಎಂದು ಹೇಳಿದರು.ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಸರ್ಕಾರವೇ ಎಪಿಎಂಸಿಗಳ ಮೂಲಕ ಸಕ್ಕರೆ ಕಾರ್ಖಾನೆಗಳ ಬಳಿ ತೂಕದ ಯಂತ್ರಗಳನ್ನು ಸ್ಥಾಪಿಸಬೇಕು. ಭತ್ತ, ಅರಿಷಿಣ, ಹತ್ತಿ,ರೇಷ್ಮೆ, ಈರುಳ್ಳಿ ಬೆಳೆಗಳು ಕುಸಿದು ಬೆಳೆಗಾರರು ಕಷ್ಟದಲ್ಲಿದ್ದಾರೆ. ಸರ್ಕಾರ ಬೆಳೆಗಳ ಉತ್ಪಾದನಾ ವೆಚ್ಚ ಪರಿಗಣಿಸಿ ನ್ಯಾಯ ಯುತ ಬೆಂಬಲ ಬೆಲೆ ನಿಗದಿ ಮಾಡಿ  ಅವುಗಳ ಖರೀದಿ ಕೇಂದ್ರಗಳನ್ನು ಸ್ಥಾಪಿಸ ಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಯಡಿ ಯೂರಪ್ಪ  ತುಮಕೂರು, ರಾಮ ಪ್ರಸಾದ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.