ಕಬ್ಬು ಬೆಳೆಗಾರರ ಹಿತ ಕಡೆಗಣನೆ: ಆರೋಪ
ಚನ್ನರಾಯಪಟ್ಟಣ: ರೈತರ ಜೀವನಾಡಿ ಎನ್ನಿಸಿಕೊಂಡ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ ನಂತರ ಕಾರ್ಮಿಕರ, ಕಬ್ಬು ಬೆಳೆಗಾರರ ಹಿತ ಕಾಪಾಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಸೋಮವಾರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಿ.ಎನ್, ಚಂದ್ರೇಗೌಡ, ಎಂ.ಎ. ಗೋಪಾಲಸ್ವಾಮಿ, ಕಬ್ಬಳಿ ರಂಗೇಗೌಡ, ಎ.ಬಿ. ನಂಜುಂಡೇಗೌಡ, ಎಂ. ಶಂಕರ್, ಮಾತನಾಡಿ, ‘ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ, ಊರೂರು ಅಲೆದು ರೈತರಿಂದ ಷೇರು ಸಂಗ್ರಹಿಸಿ ಕಾರ್ಖಾನೆ ಸ್ಥಾಪಿಸಿದರು. ಕಾರ್ಖಾನೆಯ ಆಡಳಿತ ಕಾಂಗ್ರೆಸ್ ಬೆಂಬಲಿಗರ ಕೈಯಲ್ಲಿದ್ದಾಗ 5 ಕೋಟಿ ರೂ.ಲಾಭದಲ್ಲಿತ್ತು. ನಂತರ ಜೆಡಿಎಸ್ ಅಧಿಕಾರವಧಿಯಲ್ಲಿ ಕಾರ್ಖಾನೆ ನಷ್ಟ ಅನುಭವಿಸಬೇಕಾಯಿತು. ಕಾರ್ಖಾನೆ ಪುನಶ್ಚೇತನ ಮಾಡುವುದನ್ನು ಕೈ ಬಿಟ್ಟ ಜೆಡಿಎಸ್ ನಾಯಕರು ಅದನ್ನು ಚಾಮುಂಡೇಶ್ವರಿ ಷುಗರ್ಸ್ಗೆ 30 ವರ್ಷಗಳ ಗುತ್ತಿಗೆ ನೀಡುವ ಮೂಲಕ ಷೇರುದಾರರಿಗೆ ಅನ್ಯಾಯ ಮಾಡಿದರು’ ಎಂದು ಅಪಾದಿಸಿದರು.
‘ಕಳೆದ ಬಾರಿ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಗೆದ್ದಿದ್ದರಿಂದ ಈ ಎಲ್ಲಾ ಅವಾಂತರ ನಡೆದು ಹೋಯಿತು. ಕಾರ್ಖಾನೆಯ ಆಸ್ತಿಯನ್ನು ಅಡವು ಇಟ್ಟು 126 ಕೋಟಿ ರೂ. ಸಾಲ ಪಡೆಯಲು ನಿರ್ದೇಶಕರ ಮಂಡಳಿ ಈಚೆಗೆ ಒಪ್ಪಿಗೆ ನೀಡಿರುವುದು ದುರದೃಷ್ಟಕರ’ ಎಂದರು.
‘ಕಾರ್ಖಾನೆಯನ್ನು ದುಃಸ್ಥಿತಿಗೆ ತಂದ ಜೆಡಿಎಸ್ ನಾಯಕರಿಗೆ ಮತಯಾಚಿಸುವ ನೈತಿಕ ಹಕ್ಕು ಇದೆಯೆ?’ ಎಂದು ಪ್ರಶ್ನಿಸಿದ ಅವರು, ‘ಮಾ. 25 ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾರ್ಖಾನೆಯ ಹಿತದೃಷ್ಟಿಯಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ವೆಂಕಟರಾಮಯ್ಯ, ಶಿವಸ್ವಾಮಿ, ಸಿ.ಸಿ. ರವೀಶ್, ಶೀಲಾವತಿ, ಶಂಕರೇಗೌಡ, ಎಚ್.ಎನ್. ರವಿ ಹಾಗೂ ರಂಗಸ್ವಾಮಿ ಅವರನ್ನು ಗೆಲ್ಲಿಸಬೇಕು’ ಎಂದರು.
ಬಾಗೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ಒಡ್ಡಿದ ಆಮಿಷಕ್ಕೆ ಮಣಿದು ದಿಢೀರ್ ಆಗಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣರಾದ ಪಕ್ಷದ ಮುಖಂಡರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಹೇಳಿದರು. ತಾ.ಪಂ. ಸದಸ್ಯರಾದ ಎಸ್.ಕೆ. ರಾಘವೇಂದ್ರ, ಭೈರಯ್ಯ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.