ಶನಿವಾರ, ಆಗಸ್ಟ್ 17, 2019
27 °C
ಹತೋಟಿ ಕ್ರಮ: ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ಸಲಹೆ

ಕಬ್ಬು ಬೆಳೆಗೆ ಗೊಣ್ಣೆಹುಳು ಬಾಧೆ: ರೈತರ ಆತಂಕ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ಕಬ್ಬು ಬೆಳೆಗೆ ಗೊಣ್ಣೆಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.ಜಿಲ್ಲಾ ವ್ಯಾಪ್ತಿ ಈ ವರ್ಷ 5,871 ಹೆಕ್ಟೇರ್ ಪ್ರದೇಶದಲ್ಲಿ 4.89 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದಿಸುವ ಗುರಿ ಹೊಂದಲಾಗಿದೆ. ಕಬಿನಿ ಬಲದಂಡೆ ನಾಲೆ ಹಾಗೂ ಕೊಳವೆಬಾವಿ ಆಶ್ರಿತ ನೀರಾವರಿ ಪ್ರದೇಶದಲ್ಲಿ ರೈತರು ಕಬ್ಬು ನಾಟಿ ಮಾಡಿದ್ದಾರೆ. ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟವೂ ಕುಸಿದಿದೆ. ಹೀಗಾಗಿ, ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ನೀರಿನ ಕೊರತೆ ಎದುರಿಸುತ್ತಿದೆ.ಇದರ ಪರಿಣಾಮ ಕಬ್ಬು ಬೆಳೆಗೆ ಗೊಣ್ಣೆಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ಇಳುವರಿ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲಿಸಿ ಬೆಳೆಯುವ ಬೆಳೆ ಹೊರತುಪಡಿಸಿ ಉಳಿದ ಬೆಳೆಗಳಿಗೆ ಈ ಹುಳುಗಳು ಹಾನಿ ಮಾಡುತ್ತವೆ. ಧಾನ್ಯದ ಬೆಳೆ, ತರಕಾರಿ, ಎಣ್ಣೆಕಾಳು, ತೋಟಗಾರಿಕೆ ಬೆಳೆ ಕೂಡ ಹುಳುಬಾಧೆಗೆ ತುತ್ತಾಗುತ್ತವೆ.ಮೊಟ್ಟೆಯಿಂದ ಹೊರಬಂದ ತಕ್ಷಣ ಮೊದಲನೇ ಹಂತದ ಮರಿಹುಳು ಕೆಲವು ವಾರದವರೆಗೆ ಕೇವಲ ಸಾವಯವ ಪದಾರ್ಥ ತಿಂದು ಜೀವಿಸುತ್ತವೆ. ಆದರೆ, ಬೆಳೆದ ಮರಿಹುಳುಗಳು ಬೇರುಗಳನ್ನು ಕತ್ತರಿಸಿ ತಿನ್ನುತ್ತವೆ. ಇವುಗಳ ಹಾನಿಯ ಪ್ರಮಾಣವು ಜೂನ್‌ನಿಂದ ಅಕ್ಟೋಬರ್‌ವರೆಗೆ ಅಧಿಕವಾಗಿದ್ದು, ಕೆಲವೊಮ್ಮೆ ಜನವರಿ ತಿಂಗಳ ವರೆಗೂ ಇರುತ್ತದೆ. ಅಧಿಕ ಹಾನಿಗೊಳಗಾದ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತ ಗೊಂಡು ಬೆಳೆ ಸಂಪೂರ್ಣವಾಗಿ ಒಣಗುತ್ತದೆ. ನೇರವಾಗಿ ಬೇರುಗಳಿಗೆ ಈ ಗೊಣ್ಣೆ ಹುಳು ಹಾನಿ ಮಾಡುವುದರಿಂದ ಬೆಳೆ  ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಕೀಟಶಾಸ್ತ್ರಜ್ಞರು.ಗೊಣ್ಣೆಹುಳು 10 ಸೆ.ಮೀ. ಆಳದಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಮೊಟ್ಟೆ ಇಡುತ್ತದೆ. ಒಂದು ದುಂಬಿಯು 20ರಿಂದ 80 ಮೊಟ್ಟೆ ಇಡುತ್ತದೆ. ಮೊಟ್ಟೆಗಳು ದುಂಡಗೆ ಬೆಳ್ಳಗಿದ್ದು, ಹೊಳೆಯುತ್ತಿರುತ್ತವೆ. 10ರಿಂದ 12 ದಿನದಲ್ಲಿ 5 ಮಿ.ಮೀ. ಉದ್ದದ ಬೆಳ್ಳಗಿರುವ ಮರಿಗಳು ಹೊರಬರುತ್ತವೆ.ನಂತರ ಬೆಳೆದು `ಸಿ' ಆಕಾರ ತಾಳುತ್ತವೆ. 3ರಿಂದ 4 ತಿಂಗಳು ಬೆಳೆದ ಮರಿಗಳು ನವೆಂಬರ್‌ನಿಂದ ಡಿಸೆಂಬರ್‌ನಲ್ಲಿ ಭೂಮಿಯಲ್ಲಿ 40ರಿಂದ 70 ಸೆ.ಮೀ. ಆಳದಲ್ಲಿ ಮಣ್ಣಿನ ಕುಡಿಕೆಯಲ್ಲಿ  ಕೋಶಾವಸ್ಥೆಗೆ ಹೋಗುತ್ತವೆ. 10ರಿಂದ 12 ದಿನದಲ್ಲಿ ದುಂಬಿಗಳಾಗಿ ಪರಿವರ್ತನೆ ಹೊಂದಿ ಮುಂದಿನ ಬೇಸಿಗೆಯಲ್ಲಿ ಮೊದಲ ಮಳೆ ಬರುವವರೆಗೆ ಭೂಮಿಯಲ್ಲಿಯೇ ಉಳಿಯುತ್ತವೆ. ದುಂಬಿಗಳು ಕಂದುಬಣ್ಣ ಹೊಂದಿದ್ದು, 18ರಿಂದ 20 ಮಿ.ಮೀ. ಉದ್ದ ಹಾಗೂ 7ರಿಂದ 9 ಮಿ.ಮೀ. ಅಗಲವಾಗಿರುತ್ತವೆ.ಹತೋಟಿ ಹೇಗೆ?

`ರೈತರು ಹುಳುಬಾಧೆ ನಿಯಂತ್ರಣಕ್ಕೆ ತಜ್ಞರ ಸಲಹೆ ಪಾಲಿಸಿದರೆ ಕಬ್ಬಿನ ಇಳುವರಿ ನಷ್ಟ ತಪ್ಪಿಸಬಹುದು. ಈಗಾಗಲೇ, ಹುಳು ಮೂರನೇ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ರೈತರು ಹುಳುಗಳನ್ನು ಕೈಯಿಂದಲೇ ಆರಿಸಿ ತೆಗೆಯಬೇಕಿದೆ. ನಂತರ, ಬೆಳೆದು ನಿಂತಿರುವ ಕಬ್ಬಿನ ಬೆಳೆಗೆ ಪ್ರತಿ ಎಕರೆಗೆ 1.5 ಲೀ. ಕ್ಲೋರೋಪೈರಿಫಾಸ್ 20 ಇಸಿ ಅನ್ನು ನೀರು ಹಾಯಿಸುವಾಗ ನೀರಿನಲ್ಲಿ ಬೆರೆಸುವುದರಿಂದ ಗೊಣ್ಣೆಹುಳುಗಳನ್ನು ಹತೋಟಿಗೆ ತರಬಹುದು' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞ ಡಾ.ಶಿವರಾಯ್ ನಾವಿ `ಪ್ರಜಾವಾಣಿ'ಗೆ ತಿಳಿಸಿದರು.ಚಾಮರಾಜನಗರ ತಾಲ್ಲೂಕಿನ ವಿವಿಧೆಡೆ ಕಬ್ಬು ಬೆಳೆಯು ಗೊಣ್ಣೆಹುಳು ಬಾಧೆಗೆ ತುತ್ತಾಗಿದೆ. ರೈತರು ಸಾಮೂಹಿಕವಾಗಿ ಹತೋಟಿ ಕ್ರಮ ಅನುಸರಿಸುವುದು ಉತ್ತಮ. ಕೃಷಿ ವಿಜ್ಞಾನ ಕೇಂದ್ರದಲ್ಲೂ ಬೆಳೆಗಾರರಿಗೆ ಸಲಹೆ, ಮಾರ್ಗದರ್ಶನ ನೀಡಲಾಗುವುದು ಎನ್ನುತ್ತಾರೆ ಅವರು. ಭೂಮಿಯಲ್ಲಿ 1 ಮತ್ತು 2ನೇ ಹಂತದಲ್ಲಿರುವ ಗೊಣ್ಣೆಹುಳು ಇರುತ್ತವೆ. ಬೆಳೆ ಕಟಾವಿನ ನಂತರ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಆಳವಾಗಿ ಒಂದೆರಡು ಬಾರಿ ಉಳುಮೆ ಮಾಡಬೇಕು. ಇದರಿಂದ ಮಣ್ಣಿನ ಕುಡಿಕೆಗಳಲ್ಲಿರುವ ದುಂಬಿಗಳು, ಕೀಟಗಳು, ಕೋಶಗಳು ಭೂಮಿಯ ಮೇಲ್ಭಾಗಕ್ಕೆ ಬಂದು ಬಿಸಿಲಿನ ತಾಪ ಮತ್ತು ಪಕ್ಷಿಗೆ ಆಹಾರವಾಗುತ್ತವೆ. ಬೆಳೆಯಿರುವ ಪ್ರದೇಶಗಳಲ್ಲಿ ಮೊದಲ ಮಳೆ ಬಿದ್ದ ಕೂಡಲೇ 10 ಮಿ.ಲೀ. ಕ್ಲೋರೊಪೈರಿಫಾಸ್ 20 ಇಸಿಯನ್ನು 1 ಲೀಟರ್ ನೀರಿನಲ್ಲಿ ಕರಗಿಸಿದ ದ್ರಾವಣವನ್ನು ಹೆಕ್ಟೇರ್‌ಗೆ 500 ಲೀಟರ್‌ನಂತೆ ಮಣ್ಣಿನ ಮೇಲೆ ಸಿಂಪಡಿಸಬೇಕು ಎಂಬುದು ಅವರ ವಿವರಣೆ.ದುಂಬಿ ಹತೋಟಿ

ಮೊದಲ ಮಳೆ ಬಂದ ತಕ್ಷಣ ದುಂಬಿಗಳನ್ನು ಪ್ರಕಾಶಮಾನವಾದ ದೀಪಗಳಿಂದ ಆಕರ್ಷಿಸಿ ಕೊಲ್ಲಬೇಕು. ದೀಪದ ಕೆಳಗೆ ಒಂದು ಪಾತ್ರೆಯನ್ನಿಟ್ಟು ಅದರಲ್ಲಿ ಸ್ವಲ್ಪ ನೀರು ಮತ್ತು ಸೀಮೆಎಣ್ಣೆ ಬೆರೆಸಿ ಇಟ್ಟರೆ ದುಂಬಿಗಳು ದೀಪಗಳಿಂದ ಆಕರ್ಷಣೆಗೊಂಡು ಪಾತ್ರೆಯಲ್ಲಿ ಬಿದ್ದು ಸಾಯುತ್ತವೆ. ಈ ವಿಧಾನವಲ್ಲದೆ ಅಲ್ಲಲ್ಲಿ ಬೆಂಕಿ ಹಾಕುವುದರಿಂದಲೂ ದುಂಬಿಗಳು ಆಕರ್ಷಿತವಾಗಿ ಬೆಂಕಿಯಲ್ಲಿ ಬಿದ್ದು ಸಾಯುತ್ತವೆ. ಇದರಿಂದ ದುಂಬಿಗಳನ್ನು ಮೊಟ್ಟೆ ಇಡುವುದಕ್ಕೆ ಮೊದಲೇ ಸಾಯಿಸಬಹುದು.ಜನವರಿ, ಮಾರ್ಚ್‌ನಲ್ಲಿ ಕಬ್ಬನ್ನು ಕೂಳೆ ಬೆಳೆಯಾಗಿ ಬೆಳೆಯುವ ಬದಲು ಸೂರ್ಯಕಾಂತಿ ಅಥವಾ ತರಕಾರಿ ಬೆಳೆಯಬೇಕು. ನೀರಿನ ಸೌಕರ್ಯ ಇರುವ ಕಡೆಯಲ್ಲಿ ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಿನಲ್ಲಿ ನೀರು ಹಾಯಿಸುವುದರಿಂದ ದುಂಬಿಗಳು ಮೊಟ್ಟೆ ಇಡದಂತೆ ತಪ್ಪಿಸಬಹುದು ಎನ್ನುತ್ತಾರೆ ಕೀಟಶಾಸ್ತ್ರಜ್ಞರು.

Post Comments (+)