`ಕಬ್ಬು ಬೇರೆಡೆ ಸಾಗಾಟಕ್ಕೆ ಅವಕಾಶ ನೀಡಿ'

7
ಜಿಲ್ಲೆಯ ಕಬ್ಬು ಬೆಳೆಗಾರರಿಂದ ಜಿಲ್ಲಾಧಿಕಾರಿಗೆ ಮನವಿ

`ಕಬ್ಬು ಬೇರೆಡೆ ಸಾಗಾಟಕ್ಕೆ ಅವಕಾಶ ನೀಡಿ'

Published:
Updated:

 


ಹಾವೇರಿ: ತಕ್ಷಣವೇ ಕಬ್ಬು ಕಟಾವಿಗೆ ಕಾರ್ಖಾನೆಯಿಂದ ಪರವಾನಿಗೆ ಕೊಡಿಸಬೇಕು ಇಲ್ಲವೇ ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅನ್ನದಾತ ರೈತ ಹೋರಾಟ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


 


ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ ಜಿಲ್ಲೆಯ ಕಬ್ಬು ಬೆಳೆಗಾರರು, ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ತಾನು ಕಬ್ಬು ನುರಿಸಲು ಮುಂದಾಗುತ್ತಿಲ್ಲ. ನಮಗೂ ಬೇರೆ ಕಡೆಗೆ ಕಬ್ಬು ಸಾಗಿಸುವುದಕ್ಕೂ ಬಿಡುತ್ತಿಲ್ಲ ಎಂದು ಆರೋಪಿಸಿದರು.

 


ಈಗಾಗಲೇ ಹೊಲದಲ್ಲಿ 12ರಿಂದ 15 ತಿಂಗಳ ಕಬ್ಬು ಇದ್ದು, ಅದನ್ನು ಇನ್ನಷ್ಟು ದಿನ ಹೀಗೆ ಬಿಟ್ಟರೆ, ಅಲ್ಲಿಯೇ ಒಣಗಿ ಹೋಗಲಿದೆ. ವರ್ಷಪೂರ್ತಿ ನೀರು, ಗೊಬ್ಬರ ಕೊಟ್ಟು ಬೆಳೆಸಿದ ಕಬ್ಬನ್ನು ಹೊಲದಲ್ಲಿಯೇ ಬೆಂಕಿ ಹಚ್ಚಿ ಸುಟ್ಟು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ತಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಎದುರು ಬಿಚ್ಚಿಟ್ಟರು.

 


ರೈತರ ಸಮಸ್ಯೆಯನ್ನು ಅರಿಯದೇ ತಾವು (ಜಿಲ್ಲಾಧಿಕಾರಿಗಳು) ಕೂಡಾ ಅಗತ್ಯ ವಸ್ತುವಿನ ಕಾಯ್ದೆಯಡಿ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸಬಾರದೆಂದು ಆದೇಶ ಹೊರಡಿಸಿದ್ದೀರಿ. ಅದೇ ಕಾರಣಕ್ಕಾಗಿ ಬೇರೆ ಕಡೆಗಳಲ್ಲಿ ಕಬ್ಬು ಸಾಗಿಸುವ ಲಾರಿಗಳನ್ನು ಕಸ್ಟಮ್ಸ ಅಧಿಕಾರಿಗಳು ಹಾಗೂ ಕಾರ್ಖಾನೆ ಸಿಬ್ಬಂದಿ ತಡೆದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ ಅವರು, ಕಾರ್ಖಾನೆಯವರೇ ಕಬ್ಬು ಕಟಾವಿಗೆ ಬಂದ ಕಾರ್ಮಿಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.

 


ಸಂಗೂರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳ ಹಾಗೂ ಕಟಾವು ಮಾಡಿದ ಕಬ್ಬು ಸಾಗಿಸಲು ಲಾರಿಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡುತ್ತಿಲ್ಲ. ರೈತರು ಈಗಾಗಲೇ ಬರಗಾಲದಿಂದ ತತ್ತರಿಸಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಕಟಾವಿಗೆ ಬಂದ ಕಬ್ಬನ್ನು ತೆಗೆದುಕೊಳ್ಳದೇ  ರೈತರು ಮತ್ತಷ್ಟು ಹಾನಿ ಅನುಭವಿಸಬೇಕಾಗಿದೆ ಎಂದು ಅನ್ನದಾತ ರೈತ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಗಿಡ್ಡೆ ಹೇಳಿದರು.

 


ಅದು ಅಲ್ಲದೇ ಬೇರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡಿದ ಒಂದು ವಾರದಲ್ಲಿ ಕಬ್ಬಿನ ಹಣ ಪಾವತಿ ಮಾಡುತ್ತಿದ್ದಾರೆ. ಸಂಗೂರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು 10 ದಿನಕ್ಕೊಮ್ಮೆ ಹಣ ಪಾವತಿ ಮಾಡುವುದಾಗಿ ತಿಳಿಸಿದೆ. ಆದರೆ, ತಿಂಗಳಾದರೂ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ನಮ್ಮ ಕಬ್ಬು ಕಟಾವಿಗೆ ಗ್ಯಾಂಗ್ ಕಳುಹಿಸಬೇಕು. ಅದನ್ನು ಸಾಗಿಸಲು ಲಾರಿ ಕಳುಹಿಸಬೇಕು. ಅವರೇ ಹೇಳಿದಂತೆ ಕಬ್ಬು ಸಾಗಿಸಿದ 10 ದಿನಗಳೊಳಗಾಗಿ ಕಬ್ಬಿನ ರಕಂ ಪಾವತಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದರೆ, ಸಂಗೂರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ಯಾವೊಬ್ಬ ರೈತರ ಆಕ್ಷೇಪವಿಲ್ಲ. ಅದು ಸಾಧ್ಯವಿಲ್ಲ ಎನ್ನುವುದಾದರೆ, ನಾವು ಬೇರೆ ಯಾವುದೇ ಕಾರ್ಖಾನೆಗೆ ಕಬ್ಬು ಸಾಗಿಸಿದರೂ ಅದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ವಿರೋಧಿಸಬಾರದು ಎಂದು ಅವರು ಒತ್ತಾಯಿಸಿದರು.

 


ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಶೋಷಣೆ ತಪ್ಪಿಸಬೇಕು. ಇಲ್ಲವಾದರೆ, ಇದೇ 24 ರಂದು ಹಾವೇರಿ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ ಸವಣೂರ ಎಚ್ಚರಿಸಿದ್ದಾರೆ.

 


ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ಕಾರ್ಖಾನೆ ಆಡಳಿತ ಮಂಡಳಿಯವರ ಜತೆ ಮಾತನಾಡಿದ್ದೇನೆ. ಕಬ್ಬು ಕಟಾವು ಹಾಗೂ ಸಾಗಾಟಕ್ಕೆ ವ್ಯವಸ್ಥೆ ಮಾಡುವ ಭರವಸೆ       ನೀಡಿದ್ದಾರೆ. ನೀವು (ರೈತರು) ಒಂದು ಬಾರಿ ಆಡಳಿತ ಮಂಡಳಿ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅವರು ನಿಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ, ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

 


ಎಪಿಎಂಸಿ ಸದಸ್ಯ ರಾಜಣ್ಣ ಕುಲಕರ್ಣಿ, ಬಿಜೆಪಿ ಮುಖಂಡರಾದ ಬಸವರಾಜ ಪೇಲನವರ, ಸಿದ್ಧರಾಜು ಕಲಕೋಟಿ, ಕೊರಡೂರಿನ ರೈತರಾದ ಚನ್ನಬಸಪ್ಪ ಕಲಕೋಟಿ, ಶಂಕ್ರಪ್ಪ ಕಲಕೋಟಿ, ಜಗದೀಶ ಕಲಕೋಟಿ, ಮೃತ್ಯುಂಜಯ ಕಿತ್ತೂರಮಠ, ಸಮಿತಿ ಸದಸ್ಯರಾದ ರಾಮರ್ಣಣ ದೊಡ್ಡಮನಿ, ನಾಗಣ್ಣ ಗುಳ್ಳಣ್ಣನವರ, ಚಂದ್ರು ಗುಳ್ಳಣ್ಣನವರ, ಶಂಕ್ರಣ್ಣ ಮೂಡಣ್ಣನವರ, ಮೆಹಬೂಬಸಾಬ ಗಂಜಿಗಟ್ಟಿ, ಮಹಾಂತೇಶ ಭಾವಿಕಟ್ಟಿ, ಈಶ್ವರ ಸವಣೂರ ಅಲ್ಲದೇ ಬಂಕಾಪುರ, ಕೊರಡೂರು, ಹಾವೇರಿಯ ರೈತರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry