ಶನಿವಾರ, ಮೇ 21, 2022
20 °C

ಕಬ್ಬು ರೈತರ ನಿರ್ಲಕ್ಷ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ತಾಲ್ಲೂಕಿನ ಗಂಗಾಪೂರ ಗ್ರಾಮದ ಬಳಿ ಕಾರ್ಯಾರಂಭ ಮಾಡಿರುವ ಖಾಸಗಿ ಸಕ್ಕರೆ ಕಾರ್ಖಾನೆ ಬೇರೆ ಭಾಗಗಳಿಂದ ಕಬ್ಬನ್ನು ತರಿಸಿ ಕೊಳ್ಳುವ ಮೂಲಕ ತಾಲ್ಲೂಕಿನ ರೈತರು ಬೆಳೆದಿರುವ ಕಬ್ಬನ್ನು ಸಂಪೂರ್ಣವಾಗಿ ಕಡೆಗಣಿಸ ತೊಡಗಿದೆ ಎಂದು ತಾಲ್ಲೂಕಿನ ರೈತರು ದೂರಿದ್ದಾರೆ.ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ಹಲವಾರು ರೈತರು ತಮ್ಮ ಅಳಲನ್ನು ತೋಡಿಕೊಂಡರು.ಕಬ್ಬು ನಾಟಿಮಾಡಿದ ಹತ್ತು ತಿಂಗಳೊಳಗೆ ರೈತರ ಜಮಿನಿನಲ್ಲಿರುವ ಕಬ್ಬನ್ನು ತಾವೆ ಕಟಾವು ಮಾಡಿಸಿ ಕೊಳ್ಳುವುದಾಗಿ ತಿಳಿಸಿದ್ದ ಸಕ್ಕರೆ ಕರ್ಖಾನೆಯ ಆಡಳಿತ ಮಂಡಳಿ ಯವರು ಕಬ್ಬು ನಾಟಿಮಾಡಿ ಹದಿನೈದು ತಿಂಗಳು ಗತಿಸಿದರೂ ಕಬ್ಬನ್ನು ಕಟಾವು ಮಾಡುತ್ತಿಲ್ಲ. ಇದರಿಂದ ಹೆಚ್ಚುವರಿಯಾಗಿ ಹಲವಾರು ತಿಂಗಳುಗಳ ಕಾಲ ಜಮೀನಿ ನಲ್ಲಿ ಕಬ್ಬನ್ನು ನಿರ್ವಹಣೆ ಮಾಡುವುದು ರೈತರಿಗೆ ತೊಂದರೆ ಯಾಗಿದ್ದು ತಕ್ಷಣ ಕಾರ್ಖಾನೆಯವರು ಸ್ಥಳೀಯ ರೈತರ ಕಬ್ಬನ್ನು ಕಟಾವು ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಮೊದಲು ರೈತರ ಮನೆಗಳಿಗೆ ಅಲೆದು ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿಯಾಳಿನ ಖರ್ಚು ಮೊದಲಾದವುಗಳನ್ನು ತಾವೇ ನೀಡಿದ್ದರು. ತಾಲ್ಲೂಕಿನ ರೈತರು ಬೆಳೆದ ಕಬ್ಬು ಈಗ ಕಟಾವಿಗೆ ಬಂದಿದ್ದು ವಿನಾಕಾರಣ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ರೈತರಿಗೆ ವಿವಿಧ ರೀತಿಯ ತೊಂದರೆಗಳನ್ನು ನೀಡುತ್ತಿದ್ದು ಎಲ್ಲ ರೀತಿಯಿಂದಲೂ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು. ಕಬ್ಬು ಕಟಾವು ಮಾಡಲು ರೈತರ ಜಮೀನುಗಳಿಗೆ ಬರುವ ಕಾರ್ಖಾನೆಯ ಕೂಲಿಯಾಳುಗಳು ಒಂದು ಎಕರೆ ಕಬ್ಬು ಕಡಿಯಲು ರೈತರಿಂದ ಖುಷಿಯ ರೂಪದಲ್ಲಿ ಸಾವಿರಾರು ರೂಪಾಯಿ ಗಳನ್ನು ವಸೂಲು ಮಾಡುತ್ತಿದ್ದಾರೆ. ಖುಷಿಯ ರೂಪದಲ್ಲಿ ಹಣ ನೀಡದ ರೈತರ ಜಮೀನಿನಲ್ಲಿಯ ಕಬ್ಬು ಕಟಾವು ಮಾಡದೆ ವಿನಾಕಾರಣ ಅಂಥವರಿಗೆ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಕಾರ್ಖಾನೆಯವರು ಕುಮ್ಮಕ್ಕು ನೀಡು ತ್ತಿದ್ದಾರೆ ಎಂದು ಆರೋಪಿಸಿದರು.ಸಕ್ಕರೆ ಕಾರ್ಖಾನೆಯಲ್ಲಿ ರೈತರ ಒಂದು ಟನ್ ಕಬ್ಬಿನಿಂದ ಸಕ್ಕರೆ, ಲಿಕ್ಕರ್, ರಟ್ಟು ಮೊದಲಾದ ವಿವಿಧ ಮೂಲಗಳಿಂದ ಒಟ್ಟು 8500 ರೂಪಾಯಿ ಲಾಭ ದೊರೆಯುತ್ತದೆ. ಅದರಲ್ಲಿ ಅರ್ಧ ಹಣವನ್ನು ರೈತರಿಗೆ ನೀಡಿದರೆ ತಪ್ಪೆನು ಎಂದು ರೈತರು ಪ್ರಶ್ನಿಸಿದರು. ತಾಲ್ಲೂಕಿನ ರೈತರಿಗೆ ಉಪಯೋಗವಾಗದಿರುವ ಕಾರ್ಖಾನೆ ತಾಲ್ಲೂಕಿನಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಮೇಲಾಗುತ್ತಿರುವ ಶೋಷಣೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ತಾಲ್ಲೂಕಿನ ರೈತರು ಉಗ್ರ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಇಟಗಿ, ರೈತ ಮುಖಂಡ ರಾದ ಚಂದ್ರಕಾಂತ ಉಳ್ಳಾಗಡ್ಡಿ, ಯಲ್ಲಪ್ಪ ರಾಮೇನಹಳ್ಳಿ, ಗವಿಸಿದ್ದಪ್ಪ ಬಿಸನಳ್ಳಿ, ಚನಬಸಪ್ಪ ಬೂದಿಹಾಳ, ನಿಂಗರಡ್ಡೆಪ್ಪ ಲದ್ದಿ, ಹನುಮಂತಪ್ಪ ಕುರಿ, ಚಂದ್ರಕಾಂತ ಚಿಕ್ಕಣ್ಣವರ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.