ಭಾನುವಾರ, ಏಪ್ರಿಲ್ 11, 2021
30 °C

ಕಬ್ಬು: ಸರ್ಕಾರಿ ದರಕ್ಕೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿ ಟನ್ ಕಬ್ಬಿಗೆ ಸರ್ಕಾರವು ನ.12ರಂದು ನಿಗದಿ ಮಾಡುವ ದರವನ್ನು ರೈತರಿಗೆ ನೀಡಲು ಸಿದ್ಧ ಎಂದು  ಜಿಲ್ಲೆಯ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಮ್ಮತಿಸಿದ್ದಾರೆ.ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಬೆಳೆಗಾರರ, ಹೋರಾಟಗಾರರ, ಅಧಿಕಾರಿಗಳ ಹಾಗೂ ಕಾರ್ಖಾನೆ ಆಡಳಿತದ ಸಭೆಯ ಬಳಿಕ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ತಿಳಿಸಿದರು.`ಹಳೇ ಮೈಸೂರು ಭಾಗದಲ್ಲಿ ಪ್ರತಿ ಕ್ವಿಂಟಲ್ ಕಬ್ಬಿನಿಂದ 8.5 ಕೆಜಿ ಸಕ್ಕರೆ ಉತ್ಪಾದಿಸುತ್ತಾರೆ. ಈ ಭಾಗದ ಕಬ್ಬು ಉತ್ತಮ ಮಟ್ಟದ್ದಾಗಿದ್ದು, 10.9 ಕೆ.ಜಿ. ಸಕ್ಕರೆ ತೆಗೆಯುತ್ತಾರೆ. ಆದರೆ ಅಲ್ಲಿನ ಕಾರ್ಖಾನೆಗಳು ರೈತರಿಗೆ ಪ್ರತಿ ಟನ್ ಕಬ್ಬಿಗೆ 2,400 ರೂಪಾಯಿ ನೀಡುತ್ತಿದ್ದರೆ, ಇಲ್ಲಿ ಕೇವಲ 2,200 ರೂಪಾಯಿ ಮಾತ್ರ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿಯೂ ಕೂಡಲೇ ದರ ಏರಿಸಬೇಕು~ ಎಂದು ಒತ್ತಾಯಿಸಲಾಯಿತು ಎಂದರು.ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಭೂಸನೂರ ಎನ್‌ಎಚ್‌ಎಲ್, ಜೇವರ್ಗಿಯ ಹೂಗಾರ್, ಘತ್ತರಗಾ ರೇಣುಕಾ ಮತ್ತಿತರ ಸಕ್ಕರೆ ಕಾರ್ಖಾನೆ  ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಬಸವರಾಜ ಇಂಗಿನ, ಸಿದ್ರಾಮಪ್ಪ ಪಾಟೀಲ್ ದಂಗಾಪುರ, ಗೌರಮ್ಮ ಪಾಟೀಲ್, ಕರಿಸಿದ್ದಪ್ಪ ಪಾಟೀಲ್ ಹಾಗೂ ಬೆಳೆಗಾರರು ಇದ್ದರು.ವಸೂಲಿ ನಿಲ್ಲಿಸಿ: `ಸರ್ಕಾರ ದರ ಘೋಷಿಸುವ ತನಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ 2,300 ರೂಪಾಯಿ ನೀಡಬೇಕು. ಕಳೆದ ವರ್ಷದ ಬಾಕಿ 200 ರೂಪಾಯಿ (ಪ್ರತಿ ಟನ್) ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಕಬ್ಬು ಕಟಾವು ಮಾಡಿ ಕೊಂಡೊಯ್ಯುವ ತಂಡದವರು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಹಿಡಿಯಬೇಕು. ಅವರು ಕಿರುಕುಳ ಮುಂದುವರಿಸಿದರೆ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು  ತಿಳಿಸಲಾಯಿತು. ರೈತರಿಗೆ ಸಹಕಾರ ನೀಡುವ ಭರವಸೆಯನ್ನು ಕಾರ್ಖಾನೆ ಮಾಲೀಕರು ವ್ಯಕ್ತಪಡಿಸಿದ್ದಾರೆ~ ಎಂದು ಅರುಣ್‌ಕುಮಾರ್ ಪಾಟೀಲ್ ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.