ಶನಿವಾರ, ಮಾರ್ಚ್ 6, 2021
24 °C

ಕಮರುತ್ತಿದೆ ಕನಸು; ಬೇಕಿದೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮರುತ್ತಿದೆ ಕನಸು; ಬೇಕಿದೆ ನೆರವು

ಚಿಕ್ಕಮಗಳೂರು: ಕೆಲಸಕ್ಕೆ ಸೇರಬೇಕು; ಸಾರ್ವಜನಿಕ ಸೇವೆ ಮಾಡಬೇಕು; ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.....ಹೀಗೆ ಕನಸು ಕಂಡಿದ್ದ ಪ್ರತಿಭಾವಂತ ಏಳನೇ ತರಗತಿ ವಿದ್ಯಾರ್ಥಿ ಅಪಘಾತದಲ್ಲಿ ಗಾಯಗೊಂಡು ಸೂಕ್ತ ಚಿಕಿತ್ಸೆ ಸಿಗದೆ, ಹಾಸಿಗೆ ಹಿಡಿದಿದ್ದಾನೆ. ಆತನ ಕನಸುಗಳು ಇದ್ದಲ್ಲೇ ಕಮರುತ್ತಿವೆ.ಬಾಲಕನ ಎರಡೂ ಕಾಲುಗಳು ಮತ್ತು ಎಡಗೈ ಸರಿಪಡಿಸಲಾಗದ ಮಟ್ಟಕ್ಕೆ ಮುರಿದಿವೆ. ಬಾಲಕನ ಚಿಕಿತ್ಸೆಗೆ ನೆರವು ನೀಡುವ `ಉದಾರ ಕೈ~ಗಳಿಗಾಗಿ ಆತನ ಬಡ ಕುಟುಂಬ ಎದುರು ನೋಡುತ್ತಿದೆ.ಬಾಲಕನ ಹೆಸರು ಸುರೇಶ. ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಕೂಲಿ ಕಾರ್ಮಿಕ ಉಮೇಶ್ ಅವರ ಎರಡನೇ ಪುತ್ರ. ವಯಸ್ಸು 13. ಮತಿಘಟ್ಟ ಸಮೀಪದ ಬಂಜೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ. ಕ್ಲಾಸ್ ಲೀಡರ್. ಮೇಸ್ಟ್ರಿಗೂ ಅಚ್ಚುಮೆಚ್ಚಿನ ಶಿಷ್ಯ.ವಿದ್ಯಾರ್ಥಿ ಬಗ್ಗೆ ಶಾಲಾ ಮೇಸ್ಟ್ರು ವ್ಯಕ್ತಪಡಿಸುತ್ತಿದ್ದ ಮೆಚ್ಚುಗೆಗೆ ಉಮೇಶ್ ದಂಪತಿ ಮನದಲ್ಲೇ ಹಿಗ್ಗುತ್ತಿದ್ದರು. ಕೂಲಿ, ನಾಲಿ ಮಾಡಿಯಾದರೂ ಓದಿಸಬೇಕು~ ಎಂಬ ಸಂಕಲ್ಪ ಅವರದಾಗಿತ್ತು.ಆದರೆ, 2011ರ ಡಿಸೆಂಬರ್ 13 ಈ ಕುಟುಂಬದ ಪಾಲಿಗೆ ಬರಸಿಡಿಲಾಯಿತು. ಅಂದು ಬಾಲಕ ಸುರೇಶ್ ಪ್ರತಿಭಾ ಕಾರಂಜಿ ಸ್ಪರ್ಧೆ ಮುಗಿಸಿಕೊಂಡು ಶಾಲೆ ಶಿಕ್ಷಕ ಧರಣೀಶ್ ಜತೆಗೆ ಬೈಕಿನಲ್ಲಿ ಕಡೂರಿನಿಂದ ಗ್ರಾಮಕ್ಕೆ ಬರುತ್ತಿದ್ದ. ಮೇಸ್ಟ್ರ ಮೊಬೈಲ್‌ಗೆ ದೂರವಾಣಿ ಕರೆ ಬಂದಾಗ, ಬೈಕ್ ರಸ್ತೆ ಬದಿ ನಿಲ್ಲಿಸಿ ಮಾತನಾಡುತ್ತಿದ್ದರು.ಹಿಂದಿನಿಂದ ಬಂದ ಲಾರಿ ಅನಾಮತ್ ಬೈಕಿಗೆ ಡಿಕ್ಕಿ ಹೊಡೆಯಿತು. ಶಿಕ್ಷಕ ಧರಣೀಶ್ ಸ್ಥಳದಲ್ಲೇ ಮೃತಪಟ್ಟರು. ವಿದ್ಯಾರ್ಥಿ ಸುರೇಶ್ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಲಾರಿ ಚಕ್ರಕ್ಕೆ ಸಿಕ್ಕಿ ಎರಡು ಕಾಲು, ಎಡಗೈ ನಜ್ಜುಗುಜಾಗಿತ್ತು. ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಾಲಕ ಮತ್ತೆ ಎದ್ದು ನಡೆದಾಡಲು ಕನಿಷ್ಠ ಒಂದು ವರ್ಷ ಬೇಕು ಎಂದಿದ್ದಾರೆ ವೈದ್ಯರು.ಒಳ್ಳೆಯ ಆಸ್ಪತ್ರೆಗೆ ತೋರಿಸುವಂತೆ ನೋಡಿದವರು ಸಲಹೆ ನೀಡುತ್ತಾರೆ. ಇದಕ್ಕೆ ಬಡತನ ಅಡ್ಡಿಯಾಗಿದೆ.

`ಒಂದು ಎಕರೆ ಹೊಲ ಮಾತ್ರ ಇದೆ. ನಮ್ಮೂರಲ್ಲಿ ಈ ವರ್ಷವೂ ಭೀಕರ ಬರ.  ಮಕ್ಕಳೇ ಆಸ್ತಿ ಅಂಥ ತಿಳಿದು ಕೂಲಿ, ನಾಲಿ ಮಾಡಿ ಓದಿಸ್ತಿದ್ವಿ.  ವಿಧಿ ಅಷ್ಟರಲ್ಲಿ `ನಮ್ಮನ್ ಆಯ್ಕಂಡ್ ತಿನ್ನೋ ಕೋಳಿ ಕಾಲು ಮುರಿದಂತೆ~ ಮಾಡಿಬಿಡ್ತು ಎಂದು ಕಣ್ಣೀರಾದರು ಉಮೇಶ್.ಮುಖ್ಯಮಂತ್ರಿ ಪರಿಹಾರ ನಿಧಿಗೆ ಮನವಿ ಸಲ್ಲಿಸಿದ್ದೀನಿ. ಜಿಲ್ಲಾಧಿಕಾರಿ ಕಚೇರಿಗೆ ನಾಲ್ಕೈದು ಬಾರಿ ಅಲೆದಿದ್ದೀನಿ. ಏನೂ ಪ್ರಯೋಜನ ಆಗಿಲ್ಲ~ ಎಂದರು.ಮಗ ಮತ್ತೆ ಎಲ್ಲ ಮಕ್ಕಳಂತೆ ಆಡಿ ನಲಿಯಬೇಕು; ಪಾಟಿಚೀಲ ಹೊತ್ತು ಶಾಲೆಗೆ ಹೋಗಬೇಕು ಎಂದು ಕನವರಿಸುತ್ತಿದೆ ಬಾಲಕನ ಕುಟುಂಬ. ನೆರವು ನೀಡುವ ದಾನಿಗಳು ಉಮೇಶ್, ಬ್ಯಾಂಕ್ ಖಾತೆ ಸಂಖ್ಯೆ ಎಸ್‌ಬಿ 01008491, ಕಾರ್ಪೋರೇಷನ್ ಬ್ಯಾಂಕ್, ಕಡೂರು. ಇಲ್ಲಿಗೆ ಹಣ ಕಳುಹಿಸಬಹುದು. ಮಾಹಿತಿಗೆ 8453963698.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.