ಶುಕ್ರವಾರ, ಏಪ್ರಿಲ್ 23, 2021
31 °C

ಕಮರುತ್ತಿದೆ ಕುಡಿ ಕೊನರಲು ಬಿಡಿ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

 ದಿನಸಿ ಅಂಗಡಿಯಿಂದ ತಂದ ಸಾಮಾನನ್ನು ಡಬ್ಬಿಗೆ ಸುರುವಿ ಪೇಪರ್ ತುಂಡನ್ನು ಮುದ್ದೆ ಮಾಡಿ ಕಸದ ಬುಟ್ಟಿಗೆ ಎಸೆಯುವ ಮುನ್ನ ಹಾಗೇ ಒಮ್ಮೆ ಕಣ್ಣಾಡಿಸಿದೆ. ಅದರಲ್ಲಿ ಒಂದು ಪುಟ್ಟ ಮಗು, ತಾಯಿಯ ಜತೆ ಕುಳಿತು ಆಗಸ ದಿಟ್ಟಿಸುತ್ತಿದ್ದ ಚಿತ್ರವಿತ್ತು.

 

ಅದನ್ನು ನೋಡಿದಾಗ, ಅಯ್ಯೋ ದೇವರೇ! ಸೋಮಾಲಿಯಾದ ಮಕ್ಕಳಿಗೇ ಏಕೆ ಈ ಶಿಕ್ಷೆ? ಈ ಮಕ್ಕಳ ಮೇಲೆ ದೇವರಿಗೆ ಯಾಕಪ್ಪಾ ಇಷ್ಟೊಂದು ನಿಷ್ಕರುಣೆ ಎನಿಸಿತು. ನಿಸ್ತೇಜವಾದ ಕಣ್ಣುಗಳು, ಬೆನ್ನಿಗಂಟಿದ ಹೊಟ್ಟೆ, ಅಸ್ಥಿಪಂಜರದಂತಿದ್ದ ದೇಹ, ಮುರುಟಿಕೊಂಡ ಕೈಕಾಲುಗಳು.ಚಿತ್ರದ ಅಡಿಬರಹದತ್ತ ಕಣ್ಣಾಡಿಸಿದ ಕೂಡಲೇ ಸಣ್ಣಗೆ ಮೈ ನಡುಕ...! ಅದು ಸೋಮಾಲಿಯಾ ಮಗುವಲ್ಲ, ನಮ್ಮ ಕರ್ನಾಟಕದ್ದೇ! ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಪುಟ್ಟ ಕಂದಮ್ಮ. ಇಪ್ಪತ್ತೊಂದಕ್ಕೇ ಮೂರು ಮಕ್ಕಳ ತಾಯಿಯಾದ ಮಹಿಳೆಯ ಕೊನೆಯ ಮಗುವದು.ಸುದ್ದಿಯ ಜಾಡು ಹಿಡಿದು ಜಾಲಾಡುತ್ತಾ ಹೋದರೆ ಎಂಥವರ ಮನಸ್ಸನ್ನೂ ಕರಗಿಸುವ ಮತ್ತೊಂದು ಆಘಾತ. ಕರ್ನಾಟಕದಲ್ಲೇ ಇಂತಹ ಮಕ್ಕಳ ಸಂಖ್ಯೆ ಬರೋಬ್ಬರಿ 68 ಸಾವಿರ! ಇದು ಅಪೌಷ್ಟಿಕತೆಯಿಂದ ಬಳಲುತ್ತಿರುವ ನಮ್ಮ ಮಕ್ಕಳ ಹೃದಯ ವಿದ್ರಾವಕ ಚಿತ್ರಣ. 

ಯಾಕಾಗಿ ಅಪೌಷ್ಟಿಕತೆ?

ಮಕ್ಕಳಲ್ಲಿ ಸಾಮಾನ್ಯವಾಗಿ ಶಕ್ತಿ ಮತ್ತು ಸಸಾರಜನಕದ ಕೊರತೆಯಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಹೊಟ್ಟೆಯಲ್ಲಿ ಹುಳು, ಭೇದಿ, ದಡಾರ, ಉಸಿರಾಟದ ತೊಂದರೆಗಳಿಂದ ಇದು ತೀವ್ರವಾಗುತ್ತದೆ. ಕಾಯಿಲೆ ಉಲ್ಬಣವಾದಾಗ ಮೈಸವೆತದ (ಮರಾಸ್ಮಸ್) ಕಾಯಿಲೆಗೆ ಮಕ್ಕಳು ತುತ್ತಾಗುತ್ತಾರೆ.

ಇದರಿಂದ ಚರ್ಮ ಸುಕ್ಕುಗಟ್ಟುತ್ತದೆ, ಮೈಸವೆದು ಅಸ್ಥಿಪಂಜರದಂತಾಗುತ್ತದೆ. ಹಸಿವು, ಕೋಪದಿಂದ ಕಿರಿಕಿರಿ ಮಾಡುವ ಸ್ವಭಾವ, ಮಾನಸಿಕ ದೌರ್ಬಲ್ಯ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಧಾನ್ಯಗಳು, ಸಸಾರಜನಕ ಹೆಚ್ಚಾಗಿ ಇರುವ ಬೇಳೆ ಕಾಳುಗಳನ್ನು ಕೊಡುವ ಮೂಲಕ ಸ್ವಲ್ಪ ಮಟ್ಟಿನ ಪರಿಹಾರ ಕಾಣಬಹುದು.

-ಡಾ. ಬಿ.ವೈ.ಸುದರ್ಶನ್, ಬಿಬಿಎಂಪಿಯ ಅಪೌಷ್ಟಿಕತೆ ನಿವಾರಣಾ ಕಾರ್ಯಕ್ರಮದ ಯೋಜನಾಧಿಕಾರಿ ಮತ್ತು ಮಕ್ಕಳ ತಜ್ಞ

ರಾಜ್ಯ ಆರೋಗ್ಯ ಇಲಾಖೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಸಮಿತಿಯೊಂದನ್ನು ರಚಿಸಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಇತ್ತೀಚೆಗೆ ಅಪೌಷ್ಟಿಕ ಮಕ್ಕಳ ಪತ್ತೆಗಾಗಿ ಒಂದು ಆಂದೋಲನ ನಡೆಸಲಾಯಿತು.

 

ಇದರಿಂದ ಹೊರಬಿದ್ದ ಫಲಿತಾಂಶ ಇಂತಹ ಮಕ್ಕಳ ಸಂಖ್ಯೆಯನ್ನು, ಸಮಸ್ಯೆಯನ್ನು ಬಯಲು ಮಾಡಿದೆ. ಬೆಂಗಳೂರು ನಗರ ಒಂದರಲ್ಲೇ 2,106 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದು, ಇವರಿಗೆ ಶೀಘ್ರವೇ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ ಎಂಬ ವಿಷಯವೂ ಈ ಆಂದೋಲನದಿಂದ ಬೆಳಕಿಗೆ ಬಂದಿದೆ.ಈ ಮಕ್ಕಳಿಗೆ ಆದ್ಯತೆಯ ಮೇರೆಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಇತ್ತೀಚೆಗಷ್ಟೇ ಆದೇಶಿಸಿದೆ. ಮಕ್ಕಳು ತೀರಾ ಬಳಲಿರುವುದರಿಂದ ಎಲ್ಲರಿಗೂ ಸಾಮೂಹಿಕವಾಗಿ ಚಿಕಿತ್ಸೆ ನೀಡುವ ಬದಲು ವೈಯಕ್ತಿಕವಾಗಿಯೇ ಔಷಧೋಪಚಾರ ಮಾಡಬೇಕು ಎಂದು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರು ಆದೇಶ ಹೊರಡಿಸಿರುವುದು ಸಮಸ್ಯೆಯ ತೀವ್ರತೆಯನ್ನು ಸೂಚಿಸುತ್ತಿದೆ.ಹಾಗೆ ನೋಡಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯದಲ್ಲಿರುವ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುವ ಹೊಣೆ ಹೊತ್ತಿದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಸ್ಥಳೀಯವಾಗಿ ಬೇಯಿಸಿದ ಆಹಾರವನ್ನೇ ಕೊಡಬೇಕು ಎಂದು ಸುಪ್ರೀಂಕೋರ್ಟ್ 10 ವರ್ಷಗಳ ಹಿಂದೆಯೇ ಆದೇಶ ನೀಡಿತ್ತು.

 

ಒಂದು ವರ್ಷದ ಹಿಂದೆ ರಾಜ್ಯದ `ಸಾಮಾಜಿಕ ಪರಿವರ್ತನಾ ಆಂದೋಲನ~ವು ರಾಜ್ಯದ ಅಪೌಷ್ಟಿಕ ಮಕ್ಕಳ ಅಗಾಧ ಸಂಖ್ಯೆಯನ್ನು ಬಯಲುಗೊಳಿಸಿದಾಗ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಅಭಿವೃದ್ಧಿಯತ್ತ ಸಾಗುತ್ತಿರುವ ಕರ್ನಾಟಕದಲ್ಲಿ ಆಗ 75 ಸಾವಿರಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದರು ಎಂಬ ಸುದ್ದಿ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿತ್ತು.ಹಲವು ಕ್ರಮ

 
ಸಮತೋಲಿತ ಆಹಾರ ಇರಲಿ

ಮಗು ಆರೋಗ್ಯಪೂರ್ಣವಾಗಿ ಇರಬೇಕಾದರೆ ಸಮತೋಲಿತ ಆಹಾರ ಅಗತ್ಯ. ಬೆಳೆಯುವ ಮಗುವಿಗೆ ಇದನ್ನು ಸಮರ್ಪಕವಾಗಿ ಕೊಡಬೇಕು.ಅಗತ್ಯಕ್ಕಿಂತ ಕಡಿಮೆ ಆಹಾರ ಸೇವಿಸುವುದು, ಪೌಷ್ಟಿಕ ಅಭದ್ರತೆ, ವಿವಿಧ ರೋಗಗಳು ದೇಹದಲ್ಲಿ ಮನೆ ಮಾಡಿ ಕೊಂಡಿರುವುದು, ಸ್ವಚ್ಛತೆಯ ಕೊರತೆ, ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಅರಿವು ಇಲ್ಲದಿರುವುದು, ಗರ್ಭವತಿಯಾದಾಗ ಪೌಷ್ಟಿಕ ಆಹಾರ ಸೇವಿಸದಿರುವುದು, ಅವಧಿಪೂರ್ವ ಮಗು ಜನಿಸುವುದು ಎಲ್ಲವೂ ಅಪೌಷ್ಟಿಕತೆಗೆ ಕಾರಣವಾಗುತ್ತವೆ.ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಮಗುವಿಗೆ ಕೊಡಬೇಕು, ಸ್ವಚ್ಛತೆಗೆ ಗಮನ ಹರಿಸಬೇಕು, ಮಗು ಜನಿಸಿದ ಕೂಡಲೇ ತಾಯಿಯ ಹಾಲಿನಲ್ಲಿ ಅತ್ಯಂತ ಹೆಚ್ಚು ಪೌಷ್ಟಿಕಾಂಶ ಇರುತ್ತದೆ. ಇದು ಮಗುವಿಗೆ ಸಿಗಲೇ ಬೇಕು.ನಂತರ ಒಂದು ವರ್ಷ ದವರೆಗಾದರೂ ತಾಯಿ ಹಾಲೇ ಮಗುವಿಗೆ ಶ್ರೇಷ್ಠ. ಮಗು ಬೆಳೆಯುತ್ತಾ ಹೋದಂತೆ ಹೆಚ್ಚು ಪೋಷಕಾಂಶಗಳ ಅಗತ್ಯವಿರುತ್ತದೆ. ಒಂದರಿಂದ ಮೂರು ವರ್ಷ ವಯಸ್ಸಿನ ಶಾಲಾ ಪೂರ್ವ ಮಕ್ಕಳಿಗೆ ಪ್ರೊಟೀನ್, ವಿಟಮಿನ್‌ಗಳ ಅಗತ್ಯ ಹೆಚ್ಚಾಗಿರುತ್ತದೆ.ಇಂತಹ ಸಮಯದಲ್ಲಿ ಮಗುವಿಗೆ ಉತ್ತಮ ಆಹಾರವನ್ನೇ ಕೊಡಬೇಕು. ತರಕಾರಿ, ಧಾನ್ಯ, ಹಣ್ಣು, ಸೊಪ್ಪು, ಮೊಳಕೆ ಕಾಳು, ನಾರಿನ ಅಂಶ ಇರುವ ಪದಾರ್ಥಗಳನ್ನು ತಿನ್ನಿಸಬೇಕು.ಅಪೌಷ್ಟಿಕತೆಗೆ ರಕ್ತಹೀನತೆ ಪ್ರಮುಖ ಕಾರಣ. ಇದಕ್ಕಾಗಿ ಹೆಣ್ಣು ಮಕ್ಕಳಿಗೆ, ಗರ್ಭಿಣಿಯರಿಗೆ ಐಎಫ್‌ಎ (ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲ) ಇರುವ ಮಾತ್ರೆ ನೀಡಬೇಕು. 18 ವರ್ಷ ಮೀರಿದ ಮೇಲೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು.ಎರಡು ಮಕ್ಕಳ ಮಧ್ಯೆ ಕನಿಷ್ಠ ಮೂರು ವರ್ಷಗಳ ಅಂತರವಿರಬೇಕು. ಹಾಗಿದ್ದಲ್ಲಿ ಮಾತ್ರ ಮಗು ಸದೃಢವಾಗಿ ಬೆಳೆಯಲು ಸಾಧ್ಯ.

          -ಡಾ. ಅನ್ನಪೂರ್ಣ ಭಟ್,    ಪೌಷ್ಟಿಕಾಂಶ ತಜ್ಞೆ

`ಅಪೌಷ್ಟಿಕತೆ ಒಂದು ಸಾಮಾಜಿಕ ಅಭಿಶಾಪ. ಮಕ್ಕಳು ಆರೋಗ್ಯವಂತರಾಗಿ ಬೆಳೆದು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದವರು. ಇಂಥ ಸಂದರ್ಭದಲ್ಲಿ ಅಪೌಷ್ಟಿಕತೆಯಿಂದ ಬಳಲುವುದು ನಿಜಕ್ಕೂ ಶೋಚನೀಯ~ ಎನ್ನುತ್ತಾರೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಪಿ.ಹೇಮಲತಾ.`ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬಡತನ ರೇಖೆಗಿಂತ ಕೆಳಗಿರುವ ಒಂದು ವರ್ಷದೊಳಗಿನ ಅಪೌಷ್ಟಿಕ ಮಕ್ಕಳಿಗೆ `ಬಾಲ ಸಂಜೀವಿನಿ~ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ಗುರುತಿಸಿದ ಆಸ್ಪತ್ರೆಗಳಲ್ಲಿ 50 ಸಾವಿರ ರೂಪಾಯಿವರೆಗೆ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.ಒಂದರಿಂದ ಆರು ವರ್ಷದೊಳಗಿನ ಮಕ್ಕಳು 35 ಸಾವಿರ ರೂಪಾಯಿವರೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಅಪೌಷ್ಟಿಕತೆಯಿಂದ ಬಳಲುವ ಎಲ್ಲ ಮಕ್ಕಳಿಗೆ ವೈದ್ಯಕೀಯ ವೆಚ್ಚ ಮತ್ತು ಪೌಷ್ಟಿಕ ಆಹಾರಕ್ಕಾಗಿ ಇಲಾಖೆ ಮಾಸಿಕ 750 ರೂಪಾಯಿ ಭತ್ಯೆ ನೀಡುತ್ತಿದೆ. ಅಂಗನವಾಡಿ ಮೂಲಕ ವಾರಕ್ಕೆ ನಾಲ್ಕು ದಿನ ಮೊಟ್ಟೆ, ಎರಡು ದಿನ ಹಾಲು ವಿತರಿಸಲಾಗುತ್ತಿದೆ.

 

ಈ ಎಲ್ಲವೂ ಏಪ್ರಿಲ್ ತಿಂಗಳಿನಿಂದಲೇ ಜಾರಿಯಾಗಿದೆ. ಇದಕ್ಕಾಗಿ ಸರ್ಕಾರ 10 ಕೋಟಿ ರೂಪಾಯಿ ತೆಗೆದಿರಿಸಿದೆ~ ಎಂದು ಅವರು ವಿವರ ನೀಡುತ್ತಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನೇಕ ವರ್ಷಗಳ ಹಿಂದೆಯೇ ಅಂಗನವಾಡಿ ಮಕ್ಕಳಿಗೆ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಂಡಿತ್ತು. ರಾಜ್ಯದಲ್ಲಿ 63,375 ಅಂಗನವಾಡಿ ಕೇಂದ್ರಗಳಿದ್ದು, ಇವುಗಳ ಮೂಲಕ ಗರ್ಭಿಣಿಯರು, ಮಕ್ಕಳು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಸಬೇಕು ಎಂಬುದು ಸರ್ಕಾರದ ಲೆಕ್ಕಾಚಾರ. ಹೀಗೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿದ ಲೆಕ್ಕ ತೋರುತ್ತಿವೆಯಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಮಾತ್ರ ನಿಜ. ಅಪೌಷ್ಟಿಕತೆ ಜಾಗತಿಕ ಸಮಸ್ಯೆಯಾಗಿದ್ದರೂ ನಮ್ಮ ದೇಶದ ಹಲವು ರಾಜ್ಯಗಳನ್ನು ಅದು ಪೆಡಂಭೂತವಾಗಿ ಕಾಡುತ್ತಿದೆ. ಅದರಲ್ಲಿ ಕರ್ನಾಟಕವೂ ಒಂದು. `ಆರೋಗ್ಯವಂತ ಮಗು ದೇಶದ ಆಸ್ತಿ~ ಎಂಬ ಮಾತು ಈಗ ಅರ್ಥ ಕಳೆದುಕೊಂಡಿದೆ.`ಅಪೌಷ್ಟಿಕತೆ ರಾಷ್ಟ್ರದ ಅವಮಾನ~ ಎಂಬ ಮಾತನ್ನು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ವರ್ಷಾರಂಭದಲ್ಲಿ ಒಪ್ಪಿಕೊಂಡಿದ್ದಾರೆ. ದೇಶದ ಯಾವ ಮಗುವೂ ಅಪೌಷ್ಟಿಕತೆಯಿಂದ ನರಳಬಾರದು ಎಂಬುದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕನಸು.ಇದಕ್ಕಾಗಿಯೇ ಯುಪಿಎ ಸರ್ಕಾರ ಲೋಕಸಭೆಯಲ್ಲಿ `ಆಹಾರ ಭದ್ರತಾ ಮಸೂದೆ~ ಯನ್ನು ಕೆಲ ವರ್ಷಗಳ ಹಿಂದೆಯೇ ಮಂಡಿಸಿತ್ತು. ಆದರೆ ಇವೆಲ್ಲವೂ ಕಡತಗಳಲ್ಲೇ ಉಳಿದಿದ್ದು, ಮಕ್ಕಳು ಮಾತ್ರ ಹಸಿವೆಯಲ್ಲೇ ನರಳುತ್ತಿವೆ.ಅಪೌಷ್ಟಿಕತೆಗೆ ಬಡತನ ಒಂದೇ ಕಾರಣವಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕಾರಣಗಳೂ ಇವೆ. ಅಜ್ಞಾನ, ಬಾಲ್ಯವಿವಾಹ, ಎಳೆಯ ಮಕ್ಕಳಿಗೆ ಕೊಡಬೇಕಾದ ಆಹಾರದ ಅರಿವಿನ ಕೊರತೆ ಇತ್ಯಾದಿ. ಕರ್ನಾಟಕ ಸೇರಿದಂತೆ ಗ್ರಾಮೀಣ ಭಾರತದಲ್ಲಿ ಬಾಲ್ಯವಿವಾಹ ಇನ್ನೂ ಅಸ್ತಿತ್ವದಲ್ಲಿದೆ.

 

ಹೆಣ್ಣು ಪ್ರಾಪ್ತ ವಯಸ್ಸಿಗೆ ಮುನ್ನವೇ ಮದುವೆಯಾಗುವುದು, ತಾಯ್ತನದ ಜವಾಬ್ದಾರಿ ಹೊರುವುದು, ಪೌಷ್ಟಿಕ ಆಹಾರ ತೆಗೆದುಕೊಳ್ಳದೇ ಇರುವುದು ಕೂಡ ಅಪೌಷ್ಟಿಕತೆಗೆ ಕಾರಣ ಎನ್ನುವುದು ಕಟುವಾಸ್ತವ. ಇದರ ಜೊತೆಗೆ ಜೀವನಶೈಲಿ, ಆಹಾರ ಪದ್ಧತಿ, ಮನೋಭಾವ, ನಂಬಿಕೆ, ಆಚರಣೆ, ವಲಸೆ ಹೋಗುವ ಪದ್ಧತಿ ಎಲ್ಲವೂ ಸೇರಿಕೊಂಡು ಇದೊಂದು ಜ್ವಲಂತ ಸಮಸ್ಯೆಯಾಗಿ ಮಾರ್ಪಟ್ಟಿದೆ.ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಎಳೆಯ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಯಚೂರು, ಯಾದಗಿರಿ, ಗುಲ್ಬರ್ಗ, ಬೀದರ್, ಬೆಳಗಾವಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಪ್ರತಿ ಐದಾರು ವರ್ಷಗಳಿಗೊಮ್ಮೆ ಇಲ್ಲೆಲ್ಲಾ ಬರ ಬರುತ್ತದೆ. ಉದ್ಯೋಗಕ್ಕಾಗಿ ಜನ ಗುಳೆ ಹೋಗುತ್ತಾರೆ.ಹೋಗಲು ಸಾಧ್ಯವಾಗದವರು ಅಲ್ಲೇ ನರಳಿ ಉದ್ಯೋಗವೂ ಸಿಗದೆ, ಊಟ ಬಟ್ಟೆಗೆ ಇನ್ನಿಲ್ಲದಂತೆ ಪರದಾಡುತ್ತಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಒಂದು ಹೊತ್ತು ಊಟ ಕೂಡ ಸಿಗದೇ ಇರುವಾಗ ಇನ್ನು ಪೌಷ್ಟಿಕ ಆಹಾರದ ಮಾತು ಎಲ್ಲಿಂದ ಬರಬೇಕು?

ಹಸಿವಿನ ಸೂಚ್ಯಂಕ

ಬಾಂಗ್ಲಾ ದೇಶ ಬಿಟ್ಟರೆ ದಕ್ಷಿಣ ಏಷ್ಯಾದಲ್ಲೇ ಅಪೌಷ್ಟಿಕತೆಯಲ್ಲಿ ದಯನೀಯ ಪರಿಸ್ಥಿತಿ ಇರುವುದು ದಕ್ಷಿಣ ಭಾರತದಲ್ಲಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಮಕ್ಕಳ ಬೆಳವಣಿಗೆಯನ್ನು ಗ್ರೇಡ್ ಮೂಲಕ ಗುರುತಿಸಲಾಗುತ್ತದೆ. ಅದರ ಪ್ರಕಾರ ಹೆಚ್ಚು, ಸಾಧಾರಣ, ಕಡಿಮೆ, ಅತಿ ಕಡಿಮೆ ತೂಕವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸುತ್ತದೆ.ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಕಡು ಬಡವರಿರುವ ದೇಶಗಳ ಪೈಕಿ ಭಾರತ 66ನೇ ಸ್ಥಾನದಲ್ಲಿದೆ. ದೇಶದ ಹಸಿವಿನ ಸೂಚ್ಯಂಕದ ಪ್ರಕಾರ ತೀವ್ರ ಹಸಿವಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ. ದೇಶದ ಶೇ 65ರಷ್ಟು ಮಕ್ಕಳ ಸಾವಿಗೆ ಆಹಾರದ ಕೊರತೆಯೇ ಕಾರಣ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆ (ಎನ್‌ಎಸ್‌ಎಸ್‌ಒ) ಹೇಳುತ್ತದೆ. ಅದರಲ್ಲೂ ಅಪೌಷ್ಟಿಕತೆಗೆ ಒಳಗಾಗುವವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಅಧಿಕ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.