ಶನಿವಾರ, ನವೆಂಬರ್ 23, 2019
18 °C

`ಕಮಲಶಿಲೆ' ಉತ್ಸವದ ಕಳೆ

Published:
Updated:

ಕಮಲಶಿಲೆಯಲ್ಲಿ ಲಿಂಗರೂಪಿಣಿಯಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಈಗ ರಥೋತ್ಸವದ ಕಳೆ. ಆರು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದ ಆಚರಣೆಯಲ್ಲಿ 27ರ ಬ್ರಹ್ಮ ರಥೋತ್ಸವ ಹಾಗೂ 30ರ ಮನ್ಮಹಾರಥೋತ್ಸವ ಕೇಂದ್ರಬಿಂದು.ಮಲೆನಾಡಿನ ಮೂಲೆಯಲ್ಲಿ ತೆಂಗು ಕಂಗುಗಳ ಮಧ್ಯೆ ಕಂಗೊಳಿಸುವ ಪುಣ್ಯಕ್ಷೇತ್ರ ಈ ದೇಗುಲ. ಕ್ಷೇತ್ರದಲ್ಲಿ ದೇವಿಯ ಎಡಭಾಗದಲ್ಲಿ ವೀರಭದ್ರ ಹೊಸಮ್ಮ ದೇವರು, ಬಲಭಾಗದಲ್ಲಿ ಮುಡಂತಾಯ, ಸುಬ್ರಹ್ಮಣ್ಯ ದೇವರು. ಹಿಂಭಾಗದಲ್ಲಿ ಈಶ್ವರ, ವಿಷ್ಣು, ಆಂಜನೇಯ, ನವಗ್ರಹ ಮತ್ತು ಗಣಪತಿ ದೇವರ ಸಾನಿಧ್ಯಗಳಿವೆ. ನಿತ್ಯವೂ ವಿಶೇಷ ಅನ್ನದಾನ ಸೇವೆ ಈ ದೇಗುಲದ ವಿಶೇಷತೆ.ಹಿನ್ನೆಲೆ: ಈ ದೇವಾಲಯಕ್ಕೆ ಒಂದು ವಿಶಿಷ್ಠ ಹಿನ್ನೆಲೆ ಇದೆ. ಶಿವ-ಪಾರ್ವತಿಗೆ ನೃತ್ಯದ ಸವಿಯನ್ನು ಉಣಬಡಿಸುತ್ತಿದ್ದಳು ಪಿಂಗಾಲೆ ಎಂಬ ಸುಂದರ ಕಲಾವಿದೆ. ಒಮ್ಮೆ ಆಕೆ ನೃತ್ಯಕ್ಕೆ ಒಪ್ಪದಿದ್ದಾಗ ಸಿಟ್ಟಾದ ಪಾರ್ವತಿ `ನೀನು ಅಂಕುಡೊಂಕಿನ, ಗೂನು ಬೆನ್ನಿನ ಕುಬ್ಜೆಯಾಗಿ ಭೂಲೋಕದಲ್ಲಿ ಜನಿಸು' ಎಂದು ಶಾಪ ನೀಡುತ್ತಾಳೆ.ತಪ್ಪಿನ ಅರಿವಾಗಿ ಪಿಂಗಾಲೆ ಶಾಪ ವಿಮೋಚನೆ ಬೇಡಿದಾಗ ಪಾರ್ವತಿ `ಭೂಲೋಕದಲ್ಲಿ ಖರರಟ್ಟಾಸುರ ರಕ್ಕಸ ಸಂಹಾರಕ್ಕಾಗಿ ಶ್ರಾವಣ ಮಾಸದ ನವಮಿಯಂದು `ಕಮಲಶಿಲಾ' ರೂಪದಲ್ಲಿ ಲಿಂಗೆಯಾಗಿ ಜನಿಸುತ್ತೇನೆ. ಶಾಪಗ್ರಸ್ತಳಾದ ನೀನು ಭೂಲೋಕದಲ್ಲಿ ಸುಪಾರ್ಶ್ವ ಗುಹೆಯಿಂದ ಹೊರಡುವ ನಾಗತೀರ್ಥ ಸಮೀಪ ಆಶ್ರಮ ರಚಿಸಿಕೊಂಡು ನನ್ನ ತಪಸ್ಸು ಮಾಡು. ನಿನ್ನ ಶಾಪ ವಿಮೋಚನೆ ಆಗುತ್ತದೆ' ಎಂದು ಅಭಯ ನೀಡುತ್ತಾಳೆ. ವರ್ಷಗಳ ನಂತರ ಪಿಂಗಾಲೆಯ ತಪಸ್ಸಿಗೆ ಮೆಚ್ಚಿದ ಪಾರ್ವತಿ ಶಾಪ ವಿಮೋಚನೆ ಮಾಡುತ್ತಾಳೆ. ಅಲ್ಲಿಯೇ ನದಿಯಾಗಿ ಹರಿಯುವಂತೆ ಆಕೆಗೆ ವರದಾನ ಕೂಡ ಪ್ರಾಪ್ತವಾಗುತ್ತದೆ. ಇದುವೇ `ಕುಬ್ಜಾ ನದಿ'.ಈ ನದಿಯಲ್ಲಿ ಸ್ನಾನ ಮಾಡಿ ದೇವಿಯನ್ನು ಆರಾಧಿಸಿದರೆ ಅವರ ಕೋರಿಕೆ ಈಡೇರುತ್ತದೆ ಎಂಬ ನಂಬಿಕೆ. ಪಾರ್ವತಿಯ ವರದಂತೆ ಪ್ರತಿ ವರ್ಷವೂ ನೀರು ಕಮಲಶಿಲೆ ದೇಗುಲವನ್ನು ತೋಯಿಸುವುದು ವಿಶೇಷತೆ. ಸಂಪರ್ಕಕ್ಕೆ 95915 60809.

 

ಪ್ರತಿಕ್ರಿಯಿಸಿ (+)