ಕಮಲಾಪುರದ ಕೆಂಪು ‘ಬಾಳೆ’ ಬೆಳಗಿತು

7

ಕಮಲಾಪುರದ ಕೆಂಪು ‘ಬಾಳೆ’ ಬೆಳಗಿತು

Published:
Updated:
ಕಮಲಾಪುರದ ಕೆಂಪು ‘ಬಾಳೆ’ ಬೆಳಗಿತು

ಮಲಾಪುರ: ‘ಇಪ್ಪತ್ತು ವರ್ಷಗಳ ಹಿಂದೆ ತೊಗರಿ, ಕಬ್ಬು ಬೆಳೆದು ಲಾಭ­ವಿಲ್ಲದೇ ಸಾಕಷ್ಟು ಸಾಲ ಮಾಡಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಗೆಳೆಯರ ಮಾರ್ಗದರ್ಶನ ಪಡೆದು ಕಮಲಾಪುರದ ಕೆಂಪುಬಾಳೆ ಸಸಿಗಳನ್ನು ತಂದು ನಾಟಿ ಮಾಡಿದೆ. ಅಂದಿನಿಂದ ಪ್ರತಿ ವರ್ಷ ಹತ್ತಾರು ಸಾವಿರ ರೂಪಾಯಿ ಲಾಭದಿಂದ ಖುಷಿಯಾಗಿ ಜೀವನ ಸಾಗಿಸುತ್ತಿದ್ದೇನೆ’– ಹಳೆಯ ನೋವುಗಳನ್ನು ಮರೆತು ಹೇಳಿದರು ಸಮೀಪದ ರಾಜನಾಳ ಗ್ರಾಮದ ರೇವಣಸಿದ್ದಪ್ಪ ಬಿರಾದಾರ.ಕಮಲಾಪುರದ ಕೆಂಪು ಬಾಳೆಹಣ್ಣು ರುಚಿಗೆ ಹೆಸರು. ತಿನ್ನುವವರ ಬಾಯಿ ಸಿಹಿ ಮಾಡುವ ಇದು, ಬೆಳೆದ ರೈತನ ಕುಟುಂಬಕ್ಕೂ ಸಿಹಿಯನ್ನೇ ಉಣಿಸಿದೆ.ಬಿರಾದಾರ ಕಮಲಾಪುರದಿಂದ ಕೆಂಪು ಬಾಳೆಯ ಸಸಿಗಳನ್ನು ತಂದು ನೆಟ್ಟರು. ಬಾಳೆಹಣ್ಣು ಮಾರಾಟದ ಜೊತೆಗೆ ಅವುಗಳ ಬೀಜವನ್ನೂ ಮಾರಾಟ ಮಾಡಿ ಆದಾಯ ಪಡೆದಿದ್ದಾರೆ.ಸಣ್ಣ ರೈತ, ದೊಡ್ಡ ಆದಾಯ: ಅವರ ಬಳಿ ನಾಲ್ಕೂವರೆ ಎಕರೆ ಹೊಲವಿದೆ. ಅದರಲ್ಲಿ ಎರಡು ಬಾವಿಗಳಿದ್ದು,  ಹಲವು ಬಗೆಯ ತೋಟಗಾರಿಕೆ ಬೆಳೆ­ಗಳನ್ನು ಬೆಳೆಯುತ್ತಿದ್ದಾರೆ. 25 ಹಸು­ಗಳನ್ನು ಸಾಕಿದ್ದು, ಅವುಗಳಿಂದ ಬರುವ ಆದಾಯದಲ್ಲಿ ಕುಟುಂಬದ ಹತ್ತು ಜನರ ಜೀವನ ನಡೆಯುತ್ತಿದೆ.ಹೊಲದಲ್ಲಿ ಕೆಂಪು ಬಾಳೆ, ಹಸು­ಗಳಿಗೆ ಮೇವು, ಕಬ್ಬು ಬೆಳೆಯುತ್ತಿದ್ದಾರೆ. ಅವುಗಳ ನಡುವೆ ವಿವಿಧ ತರಕಾರಿ­ಗಳನ್ನು ಬೆಳೆಯುತ್ತಾರೆ. ಅಲ್ಲದೇ ಹೊಲದ ಬದುವಿನಲ್ಲಿ ಹುಣಸೆ, ನಿಂಬೆ, ಜಾಫಾಳ, ಮಾವು ಮತ್ತು ಸಾಗುವಾನಿ ಸಸಿಗಳನ್ನು ಬೆಳೆಸುತ್ತಿದ್ದಾರೆ.

ಪ್ರಮುಖ ಲಾಭದಾಯಕ ಬೆಳೆಗಳ ಮಧ್ಯದಲ್ಲಿ ಮೆಣಸಿನಕಾಯಿ, ಕೊತ್ತಂಬರಿ, ಟೊಮೆಟೊ, ಬೆಂಡೆಕಾಯಿ, ಚವಳಿ, ಬದನೆ, ಅರಸಿಣ ಹಾಕಿದ್ದಾರೆ.‘ಆರಂಭದಲ್ಲಿ ಕಮಲಾಪುರ ಕೆಂಪು ಬಾಳೆಹಣ್ಣಿಗೆ ಒಳ್ಳೆಯ ಬೆಲೆ ಸಿಗುತ್ತಿರ­ಲಿಲ್ಲ. ಈಗ ಇತರ ಬಾಳೆಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಲಾಭ ಪಡೆಯಬಹುದು. ಆದ್ದರಿಂದ ಎಲ್ಲ ಬೆಳೆಯನ್ನು ಬಿಟ್ಟು ಕೆಂಪು ಬಾಳೆಯನ್ನೇ ಬೆಳೆಯುತ್ತಿದ್ದೇನೆ. ಅದಕ್ಕೆ ಈಗ ಖರ್ಚು ಮಾಡಿರುವುದು ಕಡಿಮೆ. ಸಣ್ಣ ಪುಟ್ಟ ಖರ್ಚು ಸೇರಿ ₨ 1 ಲಕ್ಷ ಆಗಿರಬಹುದು’ ಎಂದು ರೇವಣಸಿದ್ದಪ್ಪ ಹೇಳುತ್ತಾರೆ.ಹೈನುಗಾರಿಕೆ: ಅವರ ಬಳಿ ಕೆಲವು ವರ್ಷಗಳ ಹಿಂದೆ ಹತ್ತು ಹಸುಗಳಿದ್ದವು. ಅವುಗಳಿಂದ ಪ್ರತಿದಿನ ಹಾಲು ಕರೆದು 3 ಕಿಲೋ ಮೀಟರ್‌ ನಡೆದುಕೊಂಡು ಹೋಗಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಲಾಭ ಹೆಚ್ಚುತ್ತಾ ಹೋಯಿತು, ಹಾಗೆಯೇ ಹಸುಗಳ ಸಂಖ್ಯೆಯೂ.

ಈಗ ಅವುಗಳ ಸಂಖ್ಯೆ 25 ತಲುಪಿದೆ. ಹಾಲು ಉತ್ಪಾದನೆ ಹೆಚ್ಚಾಗಿದೆ.ಹಾಲು ತೆಗೆದುಕೊಂಡು ಹೋಗಲು ಮಗ ಶರಣುವಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿದ ರೇವಣಸಿದ್ದಪ್ಪ ಬೈಕ್ ಖರೀದಿಸಿದ್ದಾರೆ.

(ಮೊ: 9741339363)

ಎರಡು ಎಕರೆ ಹೊಲ­ದಲ್ಲಿ ಕೆಂಪು ಬಾಳೆ ಬೆಳೆದಿ­ದ್ದೇನೆ. ಒಂದು ಎಕರೆಯಲ್ಲಿ 700 ಗಿಡಗಳಿದ್ದು, ಪ್ರತಿ ಗಿಡದಿಂದ ₨ 500–600 ಲಾಭವಾಗುತ್ತದೆ. ಎರಡು ಎಕರೆಗೆ ₨ 6 ರಿಂದ 7 ಲಕ್ಷ ಲಾಭವಾಗುತ್ತದೆ. ಒಂದು ಎಕರೆಯಲ್ಲಿ ಕಬ್ಬು, ಇನ್ನೊಂದು ಎಕರೆಯಲ್ಲಿ ಹಸುಗಳಿಗೆ ಹುಲ್ಲು ಬೆಳೆಸಿದ್ದೇನೆ.

–ರೇವಣಸಿದ್ದಪ್ಪ ಪೊಲೀಸ್ ಬಿರಾದಾರ, ರೈತ.ನಾವು ಹತ್ತು ವರ್ಷಗಳಿಂದ ನೋಡುತ್ತಿದ್ದೇವೆ. ರೇವಣ­ಸಿದ್ದಪ್ಪ ಸಣ್ಣ ರೈತನಾಗಿದ್ದರೂ ರಾಜನಾಳ ಸುತ್ತಲಿನ ಹತ್ತಾರು ಹಳ್ಳಿಯ ರೈತರಿಗೆ ಮಾದರಿಯಾಗಿದ್ದಾರೆ.

–ಭೀಮಾಶಂಕರ ಶಿವರಾಯ ಬಿರಾದಾರ, ರಾಜನಾಳ.

ಕೃಷಿಯಲ್ಲಿ ಸಾಧನೆ ಮಾಡಲು ನೂರಾರು ಎಕರೆ ಹೊಲ ಬೇಕಾಗಿಲ್ಲ. ರೇವಣ­ಸಿದ್ದಪ್ಪ 20 ವರ್ಷಗಳಿಂದ 4 ಎಕರೆ­ಯಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ದೊಡ್ಡ ಮತ್ತು ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.

–ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ, ಗುಲ್ಬರ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry