ಗುರುವಾರ , ಮೇ 19, 2022
24 °C

ಕಮಲ ಅರಳಿಸಿದ ಕರಾವಳಿಯ ಮತದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾದ ಡಿ.ಎಚ್.ಶಂಕರಮೂರ್ತಿ ಮತ್ತು ಗಣೇಶ್ ಕಾರ್ಣಿಕ್ ಜಯ ಗಳಿಸಿದ್ದು, ಪ್ರಜ್ಞಾವಂತ ಮತದಾರರು ಇನ್ನೂ ಪಕ್ಷದ ಮೇಲಿನ ವಿಶ್ವಾಸ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ.ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಎದುರಾದ ಸೋಲಿನ ಬಳಿಕ ಬಿಜೆಪಿಗೆ ಈ ಭಾಗದಲ್ಲಿ ಮುಖ ಉಳಿಸಿಕೊಳ್ಳುವುದಕ್ಕೆ ದೊರೆತ ಅವಕಾಶ ಇದಾಗಿತ್ತು. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕರಾವಳಿ ಭಾಗದ ಮತದಾರರಿಗೆ ಪರಿಚಿತರಲ್ಲದೆ ಹೋದುದು ಹಾಗೂ ಕಾರ್ಣಿಕ್, ಶಂಕರಮೂರ್ತಿ ಅವರು ಮತದಾರರನ್ನು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನದಿಂದ ಬಿಜೆಪಿ ಅಭ್ಯರ್ಥಿಗಳಿಗೆ ನಿರೀಕ್ಷಿತ ಜಯ ಲಭಿಸಿತು.ಈ ಗೆಲುವಿನಿಂದಾಗಿ ಸಹಜವಾಗಿಯೇ ಬಿಜೆಪಿ ವಲಯದಲ್ಲಿ ಉತ್ಸಾಹ ಮೂಡಿದ್ದು, ಇಲ್ಲಿನ ಪಕ್ಷದ ಕಚೇರಿ ಮುಂಭಾಗ ಬುಧವಾರ ಸಂಜೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.`ಹಲವಾರು ರೀತಿಯ ಋಣಾತ್ಮಕ ಪ್ರಚಾರದ ಹೊರತಾಗಿಯೂ ಪಕ್ಷದ ಅಭ್ಯರ್ಥಿಳು ಗೆಲುವು ಸಾಧಿಸಿದ್ದಾರೆ. ಪ್ರಜ್ಞಾವಂತ ಮತದಾರರು ಬಿಜೆಪಿ ಕೈಗೊಂಡ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ~ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಬಳಿಕ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದರು.ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳು ಇವರು. ಶಂಕರಮೂರ್ತಿ ಅವರು ಪಕ್ಷದ ಹಿರಿಯ ನಾಯಕರು. ಕಾರ್ಣಿಕ್ ಅವರ ಮೇಲೂ ಶಿಕ್ಷಕರು ಕಳೆದ ಬಾರಿ ಬಹಳ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿರಲಿಲ್ಲ. ಹೀಗಾಗಿಯೇ ಅವರಿಗೆ ನಿರಾಯಾಸದ ಗೆಲುವು ಈ ಬಾರಿ ದೊರೆಯಲಿಲ್ಲ. ಇದು ಅವರಿಗೆ ಖಂಡಿತ ಎಚ್ಚರಿಕೆಯ ಗಂಟೆಯಂತೆ ಕಾಣಿಸುತ್ತಿದೆ ಎಂದು ಪಕ್ಷದ ನಾಯಕರೊಬ್ಬರು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಮಾನಾಥ ರೈ ಅವರು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಈ ಎರಡೂ ಕ್ಷೇತ್ರಗಳು ಈ ಮೊದಲಿನಿಂದಲೂ ಬಿಜೆಪಿ ಕೈಯಲ್ಲೇ ಇತ್ತು. ಈ ಬಾರಿ ಕಾಂಗ್ರೆಸ್ ಉತ್ತಮ ಹೋರಾಟ ನೀಡಿದೆ. ಪಕ್ಷದ ಮಟ್ಟಿಗೆ ಇದುವೇ ದೊಡ್ಡ ಸಾಧನೆ. ಶಿಕ್ಷಕರ ಕ್ಷೇತ್ರದಲ್ಲಿ ಮಂಗಳೂರಿನ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುತ್ತಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು. ಈ ಫಲಿತಾಂಶಕ್ಕೂ, ಮುಂಬರುವ ಚುನಾವಣೆಗೂ ಯಾವುದೇ ರೀತಿಯಲ್ಲಿ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.`ಈ ಬಾರಿ ಬಿಜೆಪಿಗೆ ಇತರ ಪಕ್ಷಗಳು ಪ್ರಬಲ ಸ್ಪರ್ಧೆ ಒಡ್ಡಿವೆ. ಇತರ ಪಕ್ಷಗಳ ಮತಗಳು ವಿಭಜನೆಗೊಳ್ಳುತ್ತಿರುವುದರಿಂದಲೇ ಬಿಜೆಪಿ ಇಲ್ಲಿ ಜಯ ಗಳಿಸುವುದು ಸಾಧ್ಯವಾಗಿದೆ~ ಎಂದು ಜೆಡಿಎಸ್ ನಾಯಕ ಸುಶಿಲ್ ನರ‌್ಹೋನ್ಹಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.