ಶುಕ್ರವಾರ, ನವೆಂಬರ್ 22, 2019
27 °C

`ಕಮ್ಯುನಿಟಿ' ಸ್ಟೋರಿ

Published:
Updated:

ನಟಿ ಶ್ರೀದೇವಿ `ಇಂಗ್ಲಿಷ್ ವಿಂಗ್ಲಿಷ್' ಹಿಂದಿ ಚಿತ್ರದಲ್ಲಿ ಅಭಿನಯಿಸಿದ ನಂತರ ಆಗೀಗ ಅವರ ಸಂದರ್ಶನಗಳು ಪ್ರಕಟವಾಗುತ್ತಿವೆ. ಆ ಚಿತ್ರದ ನಂತರ ಮತ್ತೆ ಅವರು ಬಣ್ಣಹಚ್ಚುವ ಸಂದರ್ಭ ಸೃಷ್ಟಿಯಾಗಿಲ್ಲ. ಆದರೆ ಅವರ ಮನೆಗೆ ಹೋದವರಿಗೆ ಸಿಗುತ್ತಿರುವ ಆತಿಥ್ಯದ ಕುರಿತು ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಇತ್ತೀಚೆಗೆ ನಿಯತಕಾಲಿಕವೊಂದರ ಇಪ್ಪತ್ತು ಮಂದಿಯ ತಂಡ ಅವರ ಮನೆಗೆ ಹೋಯಿತು. ಸಣ್ಣ ಸಮಾರಂಭವೊಂದಕ್ಕೆ ಆಮಂತ್ರಣ ನೀಡಿತು. ಅದಕ್ಕೆ ಪ್ರತಿ ಎಂಬಂತೆ ಅವರದ್ದೊಂದು ಸಂದರ್ಶನವನ್ನೂ ನಡೆಸಿತು. ಮಾಧ್ಯಮಮಿತ್ರರಲ್ಲಿ ಒಬ್ಬರು ಕುಡಿಯಲು ನೀರು ಕೇಳಿದರು. ಮನೆಯ ಕೆಲಸದವನತ್ತ ಶ್ರೀದೇವಿ ಇಶಾರೆ ಮಾಡಿದ್ದೇ ನೀರು ಬಂತು. ಅವರು ಕುಡಿದಿಟ್ಟ ನೀರಿನ ಲೋಟವನ್ನು ಕೆಲಸದವನು ಹೊರಗೆ ತೆಗೆದುಕೊಂಡು ಹೋದ.ಆಮೇಲೆ `ಕಾಫಿ, ಟೀ... ಏನು ತೆಗೆದುಕೊಳ್ಳುತ್ತೀರಿ' ಎಂದು ಶ್ರೀದೇವಿ ಕೇಳಲಾಗಿ, ಬೇಸಗೆಯಾದ್ದರಿಂದ ಜ್ಯೂಸ್ ಕುಡಿಯುವುದೇ ಲೇಸೆಂದು ಎಲ್ಲರೂ ತೀರ್ಮಾನಿಸಿದರು. ಜ್ಯೂಸ್ ಬರುವ ನಡುವೆಯೇ ಶ್ರೀದೇವಿ ತಮಗೆ ಫಿಲ್ಟರ್ ಕಾಫಿ ಎಷ್ಟು ಇಷ್ಟ ಎಂಬುದನ್ನು ಬಣ್ಣಿಸತೊಡಗಿದರು- ಒಮ್ಮೆ ತಮಿಳುನಾಡಿನಲ್ಲಿ ಶೂಟಿಂಗ್. ಅಲ್ಲಿ ಮನೆಗಳು ಹೆಚ್ಚಾಗಿ ಇರಲಿಲ್ಲವಂತೆ. ಇದ್ದುದು ತಾಂಡಾಗಳು. ಚಹಾ ಅಂದರೆ ಶ್ರೀದೇವಿಗೆ ಅಷ್ಟಕ್ಕಷ್ಟೆ. ಎರಡು ಮೂರು ದಿನಗಳು ಕಳೆದವು. ಇನ್ನು ಶ್ರೀದೇವಿಗೆ ತಡೆಯಲು ಆಗಲಿಲ್ಲ.

ಒಂದು ತಾಂಡಾ ಕಡೆಗೆ ಹೋದರು. ತಮ್ಮ ಕಾಫಿ ಕುಡಿಯುವ ಬಯಕೆ ತೋಡಿಕೊಂಡರು. ದೊಡ್ಡ ನಟಿ ಹಾಗೆ ಕಾಫಿ ಕೇಳಿದರೆ ಇಲ್ಲ ಎಂದವರುಂಟೆ? ಹೇಗೋ ಕಾಫಿಪುಡಿ ಹೊಂದಿಸಿ, ಎಲ್ಲಿಂದಲೋ ಫಿಲ್ಟರ್ ತಂದು ಕಾಫಿ ಸೋಸಿ, ಬೆರೆಸಿದರು. ಇನ್ನೇನು ಲೋಟಕ್ಕೆ ಬಗ್ಗಿಸಬೇಕು ಅಷ್ಟರಲ್ಲಿ ಸಹಾಯಕ ನಿರ್ದೇಶಕ ಅಲ್ಲಿಗೆ ಧಾವಿಸಿದ. ಅವರ ಜಾತಿಯ ಪ್ರಸ್ತಾಪ ಮಾಡಿದ. ಕಾಫಿ ಕುಡಿಯುವ ಬಯಕೆ ಹತ್ತಿಕ್ಕಿಕೊಳ್ಳಲಾಗದ ಶ್ರೀದೇವಿ ಕಾಫಿಯನ್ನು ತಮ್ಮ ಲೋಟಕ್ಕೆ ತಾವೇ ಬಗ್ಗಿಸಿಕೊಂಡು ಬಂದರಂತೆ. `ಅವರು ಕುಡಿದ ಲೋಟ ಇದಲ್ಲ. ಜಾತಿ ಏನೂ ಮಾಡುವುದಿಲ್ಲ' ಎಂದು ಶ್ರೀದೇವಿ ಕಾಫಿ ಹೀರುತ್ತಾ ಸುಖಿಸಿದರು.ಶ್ರೀದೇವಿ ಈ ಅನುಭವ ಹೇಳಿಕೊಳ್ಳುವಷ್ಟರಲ್ಲಿ ಜ್ಯೂಸ್ ಬಂದಿತು. ಎಲ್ಲರೂ ಕುಡಿದಿಟ್ಟ ಲೋಟಗಳನ್ನು ಕೆಲಸದವನು ಯಥಾಪ್ರಕಾರ ಹೊರಕ್ಕೆ ಎತ್ತಿಕೊಂಡು ಹೋದ. ಸಂದರ್ಶನ ಮುಗಿದ ಮೇಲೆ ಎಲ್ಲರೂ ಹೊರಟರು. ಅವರಲ್ಲಿ ಒಬ್ಬರಿಗೆ ಲೋಟಗಳನ್ನು ಹೊರಗೆ ಎತ್ತಿಕೊಂಡು ಹೋದದ್ದು ಯಾಕೆ ಎಂಬ ಕುತೂಹಲ. ಅವರು ಕೆಲಸದವನನ್ನು ಕೇಳಿಯೇಬಿಟ್ಟರು. `ಮನೆಗೆ ಯಾವ್ಯಾವುದೋ ಜಾತಿಯವರು ಬಂದು ಹೋಗುವುದರಿಂದ ಲೋಟಗಳನ್ನು ಹೊರಗೇ ತೊಳೆಯುವಂತೆ ಆದೇಶಿಸಿದ್ದಾರೆ' ಎಂದು ಕೆಲಸದವನು ತುಸು ಮುಜುಗರದಿಂದಲೇ ಹೇಳಿದ. ಆ ಮಾಧ್ಯಮದವರಿಗೆ ಶ್ರೀದೇವಿ ಹೇಳಿದ ಕಾಫಿ ಕಥೆ ನಿಜವೇ ಎಂಬ ಅನುಮಾನ ಉಂಟಾಯಿತು.

***

ದೀಪಿಕಾ ಪಡುಕೋಣೆ ವೃತ್ತಿಪರತೆಗೆ ಹೆಸರಾದವರು. ಆದರೆ ಇತ್ತೀಚೆಗೆ ಒಂದು ಸುದ್ದಿಗೋಷ್ಠಿಗೆ ಅವರು ಬಹಳ ತಡವಾಗಿ ಬಂದರು. ಬರೋಬ್ಬರಿ ಎರಡು ಗಂಟೆ ತಡವಾಗಿ ಬಂದ ಅವರು ನಗು ತುಳುಕಿಸಿದರು. ಕಾದು ಕುಳಿತಿದ್ದ ಮಾಧ್ಯಮದವರು ನಗಲಿಲ್ಲ. ಎರಡು ಗಂಟೆ ತಡವಾಗಿ ಬರಲು ಕಾರಣವೇನು ಎಂದು ಒಬ್ಬರು ಪ್ರಶ್ನಿಸಿದರು. ತಮಗೆ ನಿರ್ಮಾಪಕರು ಯಾವ ವೇಳೆಗೆ ಬರಲು ಹೇಳಿದ್ದರೋ ಅದೇ ಸಮಯಕ್ಕೆ ಬಂದಿರುವುದಾಗಿ ನುಡಿದು, ದೀಪಿಕಾ ಗಡಿಯಾರ ನೋಡಿಕೊಂಡರು. ಆಮೇಲೆ ನಿರ್ಮಾಪಕರು ಸುದ್ದಿಮಿತ್ರರಲ್ಲಿ ಕ್ಷಮೆ ಕೇಳಿದರು.

ಅವರು ದೀಪಿಕಾಗೆ ಹೇಳಿದ್ದ ಸಮಯವೇ ಒಂದು, ಸುದ್ದಿ ಮಿತ್ರರನ್ನು ಬರಹೇಳಿದ ಸಮಯ ಇನ್ನೊಂದು. ಆ ಕಾರ್ಯಕ್ರಮಕ್ಕೆ ಬರುವ ಮೊದಲು ದೀಪಿಕಾ ಎಲ್ಲಿಗೆ ಹೋಗಿದ್ದರೆಂಬ ಇನ್ನೊಂದು ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ದೀಪಿಕಾ ಹೆಮ್ಮೆಯಿಂದಲೇ ಉತ್ತರಿಸಲು ಆರಂಭಿಸಿದರು: `ಮೂಲ ಸೌಕರ್ಯ ವಂಚಿತ ಮಕ್ಕಳಿಗೆ ದೇಣಿಗೆ ಸಂಗ್ರಹಿಸಲು ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಆ ಮಕ್ಕಳು ತಾವೇ ಮಾಡಿದ ಸಿಹಿಯನ್ನು ಬಾಯಿಗಿಟ್ಟರು.

ಜಾತಿ ಧರ್ಮದ ಹಂಗಿಲ್ಲದ ಆ ಮಕ್ಕಳಿಗೆ ಎಷ್ಟೆಲ್ಲಾ ತೊಂದರೆಗಳಿವೆ. ಆದರೂ ಎಲ್ಲ ಮರೆತು ನನ್ನ ಬಾಯಿ ಸಿಹಿ ಮಾಡಿದರು. ನನ್ನ ಕರುಳು ಚುರ‌್ರೆಂದಿತು'. ದೀಪಿಕಾ ಹೀಗೆ ಮಾತನಾಡುತ್ತಿದ್ದಾಗಲೇ ಅಲ್ಲಿಗೆ ಬಂದ ಅತಿಥಿಯೊಬ್ಬರು `ನಾನೂ ನಿಮ್ಮ ಕಮ್ಯುನಿಟಿಯವನೇ' ಎನ್ನುತ್ತಾ ಮಾತಿಗೆ ಆಹ್ವಾನಿಸಿದರು. ದೀಪಿಕಾ, `ದಯವಿಟ್ಟು ಕಮ್ಯುನಿಟಿ ವಿಷಯ ಚರ್ಚಿಸಬೇಡಿ' ಎನ್ನುವ ಮೂಲಕ ಅವರ ಉತ್ಸಾಹದ ಬಲೂನಿಗೆ ಸೂಜಿ ತಾಗಿಸಿದರು.

ಕೆದಕುತ್ತಾ ಹೋದರೆ ಬಾಲಿವುಡ್‌ನಲ್ಲಿ ಇಂಥ ದಂಡಿ ದಂಡಿ `ಕಮ್ಯುನಿಟಿ ಸ್ಟೋರಿ'ಗಳು ಸಿಕ್ಕಾವು!

ಪ್ರತಿಕ್ರಿಯಿಸಿ (+)