ಕಮ್ರನ್, ಇಶಾಂತ್ ಈಗ ಗೆಳೆಯರು

7

ಕಮ್ರನ್, ಇಶಾಂತ್ ಈಗ ಗೆಳೆಯರು

Published:
Updated:

ಕರಾಚಿ (ಪಿಟಿಐ): ಬೆಂಗಳೂರಿನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದ ವೇಳೆ ಮಾತಿನ ಚಕಮಕಿ ನಡೆಸಿದ್ದ ಇಶಾಂತ್ ಶರ್ಮ ಮತ್ತು ಕಮ್ರನ್ ಅಕ್ಮಲ್, ತಮ್ಮ ನಡುವಿನ `ವೈರತ್ವ' ಮರೆತು ಒಳ್ಳೆಯ ಗೆಳೆಯರಾಗಿ ಬದಲಾಗಿದ್ದಾರೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದ ವೇಳೆ ಇವರಿಬ್ಬರು ಮಾತಿನ ಚಕಮಕಿ ನಡೆಸಿ ನೀತಿ ಸಂಹಿತೆ ಮುರಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ ಇಶಾಂತ್‌ಗೆ ಪಂದ್ಯ ಶುಲ್ಕದ ಶೇ 15 ರಂದು ಹಾಗೂ ಕಮ್ರನ್‌ಗೆ ಶೇ 5 ರಷ್ಟು ದಂಡ ವಿಧಿಸಿತ್ತು.ಪಂದ್ಯದ ಬಳಿಕ ಇಶಾಂತ್ ಪಾಕಿಸ್ತಾನ ತಂಡದ ಡ್ರೆಸಿಂಗ್ ಕೊಠಡಿಗೆ ತೆರಳಿ ಕಮ್ರನ್ ಜೊತೆಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿದರು `ದಿ ಎಕ್ಸ್‌ಪ್ರೆಸ್' ಪತ್ರಿಕೆ ವರದಿಮಾಡಿದೆ. `ಪಾಕ್ ಆಟಗಾರರ ಡ್ರೆಸಿಂಗ್ ಕೊಠಡಿಗೆ ತೆರಳಿದ ಇಶಾಂತ್ “ಸಹೋದರ ನಿನಗೆ ಏನಾಯಿತು” ಎಂದು ಕಮ್ರನ್ ಅವರಲ್ಲಿ ಕೇಳಿದರು' ಎಂದು ವರದಿ ತಿಳಿಸಿದೆ. ಮಾತ್ರವಲ್ಲ, `ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ' ಎಂದು ಕಮ್ರನ್ ಅವರಲ್ಲಿ ಹೇಳಿದ್ದಾರೆ.`ಆ ಬಳಿಕ ಕೆಲವು ಹಿರಿಯ ಆಟಗಾರರು ಸೇರಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದರು' ಎಂದು ಪತ್ರಿಕೆ ತಿಳಿಸಿದೆ. `ಭಾರತ ಮತ್ತು ಪಾಕಿಸ್ತಾನ ತಂಡದ ಆಟಗಾರರು ವಿಶೇಷ ವಿಮಾನದಲ್ಲಿ ಅಹಮದಾಬಾದ್‌ಗೆ ಪ್ರಯಾಣಿಸಿದರು. ಈ ವೇಳೆ ಇಶಾಂತ್ ಮತ್ತು ಕಮ್ರನ್ ನಗುನಗುತ್ತಾ ಮಾತನಾಡುತ್ತಿದ್ದರು' ಎಂದು ವರದಿ ನುಡಿದಿದೆ.`ಪಂದ್ಯದ ಬಳಿಕ ಅಂಗಳದ ಹೊರಗೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಹ್ಲಿ ಹಾಗೂ ಇತರ ಕೆಲವು ಆಟಗಾರರು ಪಾಕಿಸ್ತಾನಿ ಆಟಗಾರರ ಜೊತೆ ತಮಾಷೆಯಲ್ಲಿ ತೊಡಗಿದ್ದು ಕಂಡುಬಂತು. ಉಭಯ ತಂಡಗಳ ಕೆಲವು ಆಟಗಾರರು ರಾತ್ರಿ ಜೊತೆಯಾಗಿ ಊಟ ಮಾಡಿದರು' ಎಂದು ವರದಿ ಹೇಳಿದೆ.`ಅಂಗಳದಲ್ಲಿ ನಡೆದ ಈ ಘಟನೆ ಭಾರತ ಮತ್ತು ಪಾಕಿಸ್ತಾನ ತಂಡದ ಆಟಗಾರರ ನಡುವಿನ ಉತ್ತಮ ಸಂಬಂಧಕ್ಕೆ ಯಾವುದೇ ಧಕ್ಕೆ ಉಂಟುಮಾಡಿಲ್ಲ' ಎಂದು ಪಾಕ್ ತಂಡದ ಮ್ಯಾನೇಜರ್ ನವೀದ್ ಅಕ್ರಮ್ ಚೀಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry