ಕರಕುಶಲ, ಜವಳಿ ಉದ್ಯಮಕ್ಕೆ ಬಡ್ಡಿ ಸಬ್ಸಿಡಿ

7
ರಫ್ತು ಉತ್ತೇಜನ ಕ್ರಮ: ಸಚಿವ ಶರ್ಮಾ

ಕರಕುಶಲ, ಜವಳಿ ಉದ್ಯಮಕ್ಕೆ ಬಡ್ಡಿ ಸಬ್ಸಿಡಿ

Published:
Updated:

ನವದೆಹಲಿ (ಪಿಟಿಐ): ರಫ್ತು ಚಟುವಟಿಕೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಮಾನವ ಶಕ್ತಿಯನ್ನು ಹೆಚ್ಚು ಅವಲಂಬಿಸಿರುವಂತಹ ಕರಕುಶಲ ಕಲೆ, ಜವಳಿ, ಸಿದ್ಧ ಉಡುಪು ತಯಾರಿಕೆ ಉದ್ಯಮಗಳಿಗೂ ಬಡ್ಡಿ ಸಬ್ಸಿಡಿ ನೆರವು ವಿಸ್ತರಿಸಿದೆ.ರಫ್ತು ಉತ್ತೇಜನಕ್ಕಾಗಿಯೇ ಜೂನ್ 5ರಂದು ಘೋಷಿಸಿದ ಬಡ್ಡಿ ಸಬ್ಸಿಡಿ ನೆರವಿನ ಯೋಜನೆ 2014ರ ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ. ಕರಕುಶಲ ಕಲೆ, ಜವಳಿ, ಸಿದ್ಧ ಉಡುಪು ತಯಾರಿಕೆ ಉದ್ಯಮಗಳೂ ಬಡ್ಡಿ ಸಬ್ಸಿಡಿ ನೆರವು ಪಡೆದುಕೊಳ್ಳಲಿವೆ. ಎಂಜಿನಿಯರಿಂಗ್ ಉದ್ಯಮದ ಸರಕು ಮತ್ತು ಅದರ ಉಪ ವಿಭಾಗಗಳಿಗೂ 2013ರ ಜ. 1ರಿಂದ ಶೇ 2ರಷ್ಟು ಬಡ್ಡಿ ಸಬ್ಸಿಡಿ ನೆರವು ದೊರೆಯಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ ಶರ್ಮಾ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಏಪ್ರಿಲ್-ನವೆಂಬರ್ ನಡುವೆ ದೇಶದ ರಫ್ತು ಪ್ರಮಾಣ ಶೇ 5.95ರಷ್ಟು  ಕುಸಿದು 18900 ಕೋಟಿ ಡಾಲರ್ (ರೂ. 10.39 ಲಕ್ಷ ಕೋಟಿ) ಮಟ್ಟಕ್ಕೆ ಇಳಿದಿದೆ. ಇನ್ನೊಂದೆಡೆ ಆಮದು ಪ್ರಮಾಣವೂ ಹೆಚ್ಚುತ್ತಿದೆ ಎಂದರು.ಇದರ ಪರಿಣಾಮದಿಂದಾಗಿ ಆಮದು-ರಫ್ತು ನಡುವಿನ ಅಂತರವೂ(ವಹಿವಾಟು ಕೊರತೆ) 12950 ಕೋಟಿ ಡಾಲರ್(ರೂ.   7.12 ಲಕ್ಷ ಕೋಟಿ)ಗೆ ಹೆಚ್ಚಿದೆ. ಹಾಗಾಗಿ ರಫ್ತು ಚಟುವಟಿಕೆ ಪ್ರೋತ್ಸಾಹಿಸುವ ಸಲುವಾಗಿ ಬಡ್ಡಿ ಸಬ್ಸಿಡಿ ನೆರವು ಯೋಜನೆ ಆರಂಭಿಸಲಾಗಿದೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಯೂರೋ ವಲಯದಲ್ಲಿನ ಸಾಲದ ಬಿಕ್ಕಟ್ಟು ಮತ್ತು ಜಾಗತಿಕ ಮಟ್ಟದ ಮಂದಗತಿ ಪ್ರಗತಿಯಿಂದಾಗಿ ಅಲ್ಲಿ ಭಾರತದ ಸರಕುಗಳಿಗೆ ಬೇಡಿಕೆ ತಗ್ಗಿದೆ. ಇದರಿಂದ ರಫ್ತು ಚಟುವಟಿಕೆಗೆ ಪೆಟ್ಟು ಬಿದ್ದಿದೆ ಎಂದು ಶರ್ಮಾ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry