ಬುಧವಾರ, ಮೇ 12, 2021
18 °C

ಕರಗದ ಮೇಣ

ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ಕರಗದ ಮೇಣ

ವಿಶ್ವದ ಖ್ಯಾತನಾಮರ ಮೇಣದ ಪ್ರತಿಮೆಗಳನ್ನು ನಿರ್ಮಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸುವುದನ್ನು ನೋಡಿದ್ದೇವೆ. ಲಂಡನ್‌ನ `ಟುಸ್ಸಾಡ್ಸ್' ವಸ್ತು ಸಂಗ್ರಹಾಲಯದಲ್ಲಿ ಮೇಣದ ಪ್ರತಿಮೆಗಳಾಗುವುದು ಬಾಲಿವುಡ್ ಮಂದಿಗೆ ಪ್ರತಿಷ್ಠೆಯ ವಿಷಯವಾಗಿದೆ. ಬಾಲಿವುಡ್‌ನ ಅಮಿತಾಭ್ ಬಚ್ಚನ್, ಶಾರುಕ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೆಯೇ ಮನಮೋಹನ್ ಸಿಂಗ್ ಸೇರಿದಂತೆ ಕೆಲ ರಾಜಕಾರಣಿಗಳು, ಸಚಿನ್ ತೆಂಡುಲ್ಕರ್‌ನಂತಹ ಕ್ರಿಕೆಟ್ ಸಾಧಕರು ಅಲ್ಲಿ ಮೇಣದಲ್ಲಿ ಅವತರಿಸಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ.ಮೈಸೂರಿನಲ್ಲಿ ಇಂಥದ್ದೊಂದು ವ್ಯಾಕ್ಸ್ (ಮೇಣ) ವಸ್ತು ಸಂಗ್ರಹಾಲಯ ತಲೆಯೆತ್ತಿದೆ. ಆದರೆ ಇಲ್ಲಿ ಅನಾಮಿಕ ಸಂಗೀತ ಕಲಾವಿದರನ್ನು ಪ್ರದರ್ಶಿಸಲಾಗುತ್ತಿದೆ. `ಮೆಲೊಡಿ ವರ್ಲ್ಡ್' ಇದರ ಹೆಸರು. ಕರ್ನಾಟಕದ ಮೊದಲ `ವ್ಯಾಕ್ಸ್ ವಸ್ತು ಸಂಗ್ರಹಾಲಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ  ನೂರು ಸಹಜ ಗಾತ್ರದ ಮೇಣದ ಪ್ರತಿಮೆ ಮತ್ತು 300 ಸಂಗೀತ ವಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿದೆ.ವಸ್ತು ಸಂಗ್ರಹಾಲಯದ ನಿರ್ಮಾಪಕ, ಕಲಾವಿದ ಬೆಂಗಳೂರಿನ ಶ್ರೀಜಿ ಭಾಸ್ಕರನ್. ಇವರು ಐಟಿ ಉದ್ಯೋಗಿ. ಇಂತಹದ್ದೇ ಸಂಗ್ರಹಾಲಯವನ್ನು ಕೊಡೈಕೆನಾಲ್ ಮತ್ತು ಊಟಿಯಲ್ಲಿಯೂ ನಿರ್ಮಿಸಿದ್ದಾರೆ. ಈ ಕಲಾಕೃತಿಗಳಿಗೆ ಸುಮಾರು 15 ಲಕ್ಷ ಹಣ ವಿನಿಯೋಗಿಸಲಾಗಿದೆ. ಸಹಜ ಗಾತ್ರದ ಮೂರ್ತಿಗಳಿಗೆ 2 ರಿಂದ 4 ತಿಂಗಳು ತೆಗೆದುಕೊಳ್ಳಲಾಗಿದೆ. ಒಂದೊಂದು ಮೂರ್ತಿಯನ್ನೂ 50 ಕಿಲೋ ಮೇಣದಿಂದ ತಯಾರಿಸಲಾಗಿದೆ.ನೈಜ ಪರಿಕರ

ಈ ಸಂಗ್ರಹಾಲಯದಲ್ಲಿ ಜಗತ್ತಿನ ನಾನಾ ಭಾಗದ ಸಂಗೀತ ವೈವಿಧ್ಯವನ್ನು ನೈಜ ಪರಿಕರಗಳ ಸಮೇತ ಪ್ರದರ್ಶಿಸಲಾಗಿದೆ. ಕಲಾವಿದರನ್ನು ಮಾತ್ರ ಮೇಣದಿಂದ ನಿರ್ಮಿಸಲಾಗಿದೆ. `ಮೆಲೊಡಿ ವರ್ಲ್ಡ್' ಎಂಬ ಹೆಸರಿಗೆ ತಕ್ಕಂತೆ ಇಲ್ಲಿ ಸಂಗೀತದ ಜಗತ್ತನ್ನೇ ನಿರ್ಮಿಸಲಾಗಿದೆ.ಒಂದೊಂದು ಬಗೆಯ ಸಂಗೀತಕ್ಕೂ ಅದರದೇ ಆದ ವಾತಾವರಣ ನಿರ್ಮಿಸಲಾಗಿರುವುದು ಇಲ್ಲಿನ ಹೆಚ್ಚುಗಾರಿಕೆ. ಒಂದು ಪ್ರತಿಕೃತಿ ನಿರ್ಮಿಸುವುದಕ್ಕೂ ಒಂದು ಗುಂಪು ಕಲಾಕೃತಿ ನಿರ್ಮಿಸುವುದಕ್ಕೂ ವ್ಯತ್ಯಾಸವಿದೆ. ಅದೂ ಬೇರೆ ಬೇರೆ ಭಾವಭಂಗಿಯಲ್ಲಿರುವ ಕಲಾಕೃತಿ ನಿರ್ಮಿಸುವುದು ಸಣ್ಣ ಮಾತಲ್ಲ. `ಮೆಲೊಡಿ ವರ್ಲ್ಡ್'ಗೆ ಹೋದಾಗ ಯಾರಾದರೂ ನಿಬ್ಬೆರಗಾಗಲೇಬೇಕು.ಅದು ಮೇಣದ ಪ್ರತಿಕೃತಿ ಎಂದಷ್ಟೇ ಅಲ್ಲ. ಅಲ್ಲೊಂದು ಸನ್ನಿವೇಶವನ್ನು ನಿರ್ಮಾಣ ಮಾಡಲಾಗಿದೆ. ಸಂಗೀತ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಅನೇಕ ದೇಶಗಳ ವಾದ್ಯ ಸಂಗೀತ ಪರಿಕರಗಳನ್ನು ಪ್ರದರ್ಶಿಸಲಾಗಿದೆ. ಎಲ್ಲ ವಾದ್ಯಗಳನ್ನು ನುಡಿಸುವ ಸನ್ನಿವೇಶವನ್ನೂ ಸೃಷ್ಟಿಸಲಾಗಿದ್ದು, ಸಂಗೀತ ಕಛೇರಿ ನಡೆಸುತ್ತಿದ್ದಾರೆ ಎಂಬಂತಿದೆ. ನೂರಾರು ಕಲಾವಿದರ ಪ್ರತಿಕೃತಿಗಳನ್ನು ವಿವಿಧ ಭಂಗಿಯಲ್ಲಿ ರಚಿಸಲಾಗಿದೆ.ವಿವಿಧ ದೇಶಗಳ ಆದಿವಾಸಿಗಳ ವಾದ್ಯಗಳು, ಪಾಪ್ ಮತ್ತು ರಾಕ್ ಸಂಗೀತ ಪರಿಕರಗಳು, ಅದನ್ನು ನುಡಿಸುವ ಜನರೂ, ಆ ಸನ್ನಿವೇಶ ಎಲ್ಲವೂ ಕಛೇರಿಯ ಅನುಭವ ನೀಡುತ್ತದೆ. ಅವರ ವೇಷಭೂಷಣ ಯಥಾವತ್ ರಚಿಸಲಾಗಿದೆ. ಭಾರತದ ಶಾಸ್ತ್ರೀಯ ಸಂಗೀತಗಾರರು, ವೀಣಾ ವಾದಕರು, ತಬಲಾವಾದಕರು, ಘಟಂ, ಮೃದಂಗ, ಸ್ಯಾಕ್ಸೋಫೋನ್, ಚರ್ಮವಾದ್ಯಗಳು, ಪುಂಗಿ ಊದುವವ, ಆದಿವಾಸಿ, ಪಾಪ್ ಗಾಯಕರು, ಪಂಜಾಬಿನ ಜಾನಪದ ನೃತ್ಯ `ಭಾಂಗ್ರ' ತಂಡ, ಜಾಜ್ವ್, ಕಲಾವಿದರ ಕೈಯಲ್ಲಿ ಜೀವ ಪಡೆದಿದೆ.ಜಯಚಾಮರಾಜೇಂದ್ರ ಒಡೆಯರ್ ಸಿಂಹಾಸನದಲ್ಲಿ ಆಸೀನರಾಗಿರುವ ಮತ್ತು ಮಹಾತ್ಮಾ ಗಾಂಧಿ ಧ್ಯಾನಸ್ತರಾದಂತೆ ಕೂತಿರುವ ಕಲಾಕೃತಿ ಆಕರ್ಷಕವಾಗಿದೆ. ಎಲ್ಲ ಕಲಾಕೃತಿಗಳಲ್ಲಿರುವ ಸಂಗೀತ ಪರಿಕರಗಳು ನಿಜವಾದ ಪರಿಕರವಾದ್ದರಿಂದ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿದೆ.ವಸ್ತು ಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆ ಕಲಾವಿದರ ಶ್ರಮ ಎದ್ದು ಕಾಣುತ್ತದೆ. ನಿಜಕ್ಕೂ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯವನ್ನೂ ಮೀರಿಸುವಂತಿದೆ ಮೆಲೊಡಿ ವರ್ಲ್ಡ್. ಮೈಸೂರಿಗೆ ಹೋಗುವ ಪ್ರವಾಸಿಗರಿಗೆ ಈಗ ನೆಚ್ಚಿನ ತಾಣ.ಪ್ರತಿ ಕೋಣೆಯಲ್ಲಿ ಒಂದೊಂದು ದೃಶ್ಯವನ್ನು ನಿರ್ಮಿಸಲಾಗಿದೆ. ಆಯಾ ದೇಶದ ಸಂಗೀತ ಕಲಾವಿದರ ಉಡುಪು, ವೇಷಭೂಷಣ ಮತ್ತು ಸುತ್ತಲಿನ ಪರಸರವನ್ನು ಯಥಾವತ್ ಚಿತ್ರಿಸಲಾಗಿದೆ. ಸಂಗೀತಕ್ಕೆ ತಕ್ಕಂತೆ ವೇದಿಕೆ ನಿರ್ಮಿಸಲಾಗಿದೆ.ಉದಾಹರಣೆಗೆ ಬುಡಕಟ್ಟುಗಳ ವಾದ್ಯದ ಸಂದರ್ಭಕ್ಕೆ ಗುಡಿಸಲು ನಿರ್ಮಿಸಲಾಗಿದೆ. ಪಾಪ್ ಸಂಗೀತಕ್ಕೆ ಜಗಮಗಿಸುವ ವೇದಿಕೆ, ಸೂಟು ಬೂಟು ತೊಟ್ಟ ಕಲಾವಿದರು, ಅವರ ಕೇಶ ವಿನ್ಯಾಸ ಎಲ್ಲವೂ ನೈಜತೆಯನ್ನು ನಮ್ಮ ಮುಂದಿಡುತ್ತದೆ. ಈ ದೃಶ್ಯಗಳನ್ನು ನೋಡಿದರೆ ಇದು ನಿಜವಾದ ಕಛೇರಿಯೇನೋ ಅನ್ನಿಸುತ್ತದೆ.ಪ್ರೋತ್ಸಾಹದ ಕೊರತೆ

ನಮ್ಮ ಜಾಯಮಾನವೇ ಹಾಗೆ. ದೂರದಲ್ಲೆಲ್ಲೋ ಕೋಗಿಲೆ ಕೂಗಿದರೆ ಕಿವಿ ನಿಮಿರುತ್ತದೆ. ಮನೆಯಲ್ಲಿರುವ ಗುಬ್ಬಚ್ಚಿಯ ಧ್ವನಿ ಕೇಳಿಸುವುದೇ ಇಲ್ಲ.ಎಲ್ಲೋ ವಿದೇಶದಲ್ಲಿ ಕಲಾವಿದರ ಸಾಧನೆಗಳನ್ನು ಕೇಳಿ ಬೆರಗಾಗುತ್ತೇವೆ. ಆದರೆ ನಮ್ಮ ನಡುವೆಯೇ ಇಂತಹ ನೂರಾರು ಸಾಧಕರಿದ್ದಾರೆ. ಅವರನ್ನು ಗಮನಿಸುವುದೇ ಇಲ್ಲ. ಇದಕ್ಕೆ ಅನೇಕ ನಿದರ್ಶನಗಳಿವೆ. ವ್ಯಾಕ್ಸ್ ಸಂಗ್ರಹಾಲಯ ಆರಂಭವಾಗಿ ಎರಡು ವರ್ಷವಾದರೂ ಪ್ರವಾಸೋದ್ಯಮ ಇಲಾಖೆ ಮಾನ್ಯತೆ ನೀಡಿಲ್ಲ. ನೈಸರ್ಗಿಕ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯೀಕರಣಗೊಳಿಸುವಲ್ಲಿ ಇಲಾಖೆಗೆ ಇರುವ ಆಸಕ್ತಿ ಇಂತಹ ಪ್ರಯತ್ನಗಳಿಗೆ ಪ್ರೋತ್ಸಾಹಿಸುವಲ್ಲಿ ಇಲ್ಲ.ಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಫಲಕಗಳು ಆ ಕತೆ ಹೇಳುತ್ತವೆ. `ಈ ಸಂಗ್ರಹಾಲಯಕ್ಕೆ ಸರ್ಕಾರದ ಧನ ಸಹಾಯ ಇಲ್ಲ. ದೇಶ ವಿದೇಶದ ಸಂಗೀತ ಪರಿಕರಗಳನ್ನು ಸ್ವಂತ ಖರ್ಚಿನಿಂದ ಸಂಗ್ರಹಿಸಲಾಗಿದೆ' ಎಂಬ ಸಾಲುಗಳು ಕಾಣಸಿಗುತ್ತವೆ. ಇಷ್ಟೇ ಅಲ್ಲ `ಗೋವಾ ಪ್ರವಾಸೋದ್ಯಮ ಇಲಾಖೆ ಮಾನ್ಯತೆ ನೀಡಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈವರೆಗೂ ಮಾನ್ಯತೆ ನೀಡಿಲ್ಲ. ಮಾನ್ಯತೆಗೆ ಪ್ರಯತ್ನಿಸಲಾಗುತ್ತಿದೆ' ಎಂದು ಫಲಕದಲ್ಲಿ ಬರೆಯಲಾಗಿದೆ.ಇದು ನಮ್ಮ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಸದ್ಯ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರವೇಶ ಶುಲ್ಕದ ಹಣದಿಂದ ಸಿಬ್ಬಂದಿ ವೇತನ, ವಸ್ತು ಸಂಗ್ರಹಾಲಯ ನಿರ್ವಹಣೆ ವೆಚ್ಚ ಸರಿದೂಗುತ್ತಿದೆ.ಮೈಸೂರಿಗೆ ಪ್ರವಾಸ ಹೋಗುವವರೆಲ್ಲ ತಮ್ಮ ವೀಕ್ಷಣಾ ಸ್ಥಳಗಳ ಪಟ್ಟಿಯಲ್ಲಿ ಅರಮನೆ, ಪ್ರಾಣಿವಸ್ತು ಸಂಗ್ರಹಾಲಯ, ಚಾಮುಂಡಿ ಬೆಟ್ಟದ ಜೊತೆ ಸಿದ್ಧಾರ್ಥನಗರದಲ್ಲಿನ ವ್ಯಾಕ್ಸ್ ಸಂಗ್ರಹಾಲಯದ ಹೆಸರೂ ಸೇರಿಸಿಕೊಂಡರೆ ಮೈಸೂರು ಪ್ರವಾಸ ಪರಿಪೂರ್ಣವಾಗಬಹುದು.ಸಂಗ್ರಹಾಲಯ ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೂ ತೆರೆದಿರುತ್ತದೆ. ಟಿಕೆಟ್ ದರ ತಲಾ ರೂ.40 ಕ್ಯಾಮೆರಾ ರೂ.10.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.