ಶುಕ್ರವಾರ, ಮೇ 14, 2021
21 °C

ಕರಗ: ಮೂಡದ ಒಮ್ಮತ- ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಪಟ್ಟಣದ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಡೆಯಬೇಕಿರುವ ಕರಗ ಮಹೋತ್ಸವವನ್ನು ಯಾರು ಮಾಡಬೇಕು ಎಂಬ ಬಗ್ಗೆ ಮಂಗಳವಾರ ನಿರ್ಧರಿಸುವುದಾಗಿ ತಹಶೀಲ್ದಾರ್ ಎಚ್.ಎನ್. ಶಿವೇಗೌಡ ಹೇಳಿದರು.ಕರಗ ಉತ್ಸವ ನಡೆಸುವ ಸಂಬಂಧ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶಾಂತಿಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು. ದೇವಾಲಯದ ಅರ್ಚಕರು ಹಾಗೂ ಕುಲಸ್ಥರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಒಮ್ಮತದಿಂದ ಕರಗ ಉತ್ಸವ ಆಚರಿಸುವ ಸಂಬಂಧ ಶಾಂತಿಸಭೆಯಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾದ್ದರಿಂದ ಒಮ್ಮತ ಮೂಡಲಿಲ್ಲ.ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಒಮ್ಮತ ಮೂಡದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.ಸೊರಗದಿರಲಿ ಕರಗ: `ಜನರಿಗೆ ಕರಗ ನೋಡುವ ಆಸೆಯಿದೆ. ಕಿತ್ತಾಟ ಹಾಗೂ ಒಣ ಪ್ರತಿಷ್ಠೆಗಳಿಂದ ಕರಗ ಸೊರಗುವುದು ಬೇಡ. ಎಲ್ಲರು ಒಟ್ಟಾಗಿ ಉತ್ಸವ ಆಚರಿಸಿ~ ಎಂದು ಜೆಡಿಎಸ್ ಅಧ್ಯಕ್ಷ ಟಿ.ಶ್ರೆನಾಥ್ ರೆಡ್ಡಿ ಸಭೆಯಲ್ಲಿ ಮನವಿ ಮಾಡಿದರು.ಮುಖಂಡ ಹನುಮದಾಸ್ ಮಾತನಾಡಿ, `ಅರ್ಚಕರಿಗೆ ನ್ಯಾಯಾಲಯದಲ್ಲಿ ಉತ್ಸವ ನಡೆಸಲು ಅವಕಾಶ ನೀಡುವಂತೆ ಆದೇಶಿಸಲಾಗಿದೆ. ಆದ್ದರಿಂದ ತಹಶೀಲ್ದಾರ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದರು.ಕುಲದ ಮುಖಂಡ ಹಾಗೂ ವಹ್ನಿ ಕುಲಸೇವಾ ಸಮಿತಿ ಕಾರ್ಯದರ್ಶಿ ರಾಮಯ್ಯ ಮಾತನಾಡಿ, `ದೇವಾಲಯದಲ್ಲಿ ಮೂರು ವರ್ಷಗಳಿಂದ ಕರಗ ಉತ್ಸವ ಮಾಡಲು ಅವಕಾಶ ನೀಡಲಾಗಿದೆ. ಈ ಬಾರಿಯೂ ಅವಕಾಶ ಒದಗಿಸಬೇಕು. ಒಂದು ವರ್ಷ ಕುಲಸ್ಥರು ಮತ್ತೊಂದು ವರ್ಷ ಅರ್ಚಕರು ಉತ್ಸವ ನಡೆಸಲಿ ಎಲ್ಲ ರೀತಿಯ ಸಹಕಾರ ನೀಡುತ್ತೇವೆ~ ಎಂದು ಹೇಳಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಚಕರ ಕುಟುಂಬದ ಶಾಮಮೂರ್ತಿ ಹಾಗೂ ರಮೇಶ್, `ಕರಗ ಉತ್ಸವ ಹಾಗೂ ಗರ್ಭಗುಡಿ ಪ್ರವೇಶ ಮಾಡುವುದು ಅರ್ಚಕರ ಕರ್ತವ್ಯ. ಉಳಿದ ಕೆಲಸಗಳನ್ನು ಕುಲಸ್ಥರು ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸಾಂಪ್ರಾದಾಯಿಕವಾಗಿ ಹತ್ತಾರು ಆಚರಣೆಗಳಿವೆ ಇದನ್ನು ಅರ್ಚಕರೇ ನಡೆಸಬೇಕು~ ಎಂದರು.ಎಲ್ಲರೂ ಒಗ್ಗೂಡಿ ಕರಗ ನಡೆಸುವಂತೆ ಹಲವಾರು ಮಂದಿ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅರ್ಚಕರು ಹಾಗೂ ಕುಲಸ್ಥರ ಪರವಿದ್ದವರು ಅವರವರಿಗೆ ಅನುಕೂಲವಾಗುವಂತೆ  ಮಾತನಾಡಲು ಪ್ರಾರಂಭಿಸಿದಾಗ ಸಭೆಯಲ್ಲಿ ಗೊಂದಲ ಉಂಟಾಗಿ ಮಾತಿನ ಚಕಮಕಿ ನಡೆಯಿತು.ತದನಂತರ ತಹಶೀಲ್ದಾರ್ ಅರ್ಚಕರು ಮತ್ತು ಕುಲಸ್ಥರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಹೊರಗೆ ಕಳುಹಿಸಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಆದರೆ ಒಮ್ಮತ ಮೂಡದ ಕಾರಣ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.