ಶುಕ್ರವಾರ, ಮೇ 14, 2021
31 °C

ಕರಡಕಲ್ಲದಲ್ಲಿ ದ್ಯಾಮಮ್ಮದೇವಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಪ್ರತಿ ವರ್ಷದ ಸಾಂಪ್ರದಾಯದಂತೆ ಈ ವರ್ಷವೂ ಸಹ ಹುಣ್ಣಿಮೆಯ ದಿನವಾದ ಶುಕ್ರವಾರ ಕರಡಕಲ್ಲ ಗ್ರಾಮದಲ್ಲಿ ದ್ಯಾಮಮ್ಮಸೇವಿ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರುಗಿತು.ಗುರುವಾರ ಸಾಂಪ್ರದಾಯಿಕ ಆಚರಣೆಗಳನ್ನು ಪೂರೈಸಿ ದೈವದ ಕಟ್ಟೆಯಲ್ಲಿ ದ್ಯಾಮಮ್ಮದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಉತ್ಸವಮೂರ್ತಿಯ ಮೆರವಣಿಗೆ, ಗ್ರಾಮದ ಸುತ್ತ ಹಾಲೆರೆಯುವ ಕಾರ್ಯಕ್ರಮದ ನಂತರ ದೇವಿಗೆ ದೈವದ ಸೀರೆ ಅರ್ಪಿಸಿ ಉಡಿ ತುಂಬಲಾಯಿತು. ಕರಡಕಲ್ಲ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಉಡಿತುಂಬಿ ಕಾಯಿ ಕರ್ಪೂರ ಅರ್ಪಿಸಿ ಭಕ್ತಿಭಾವ ಮೆರೆದರು. ಶುಕ್ರವಾರ ಸಂಜೆ ಕುದಿಯುವ ಅಕ್ಕಿಪಾಯಸದಲ್ಲಿ ಕೈ ಹಾಕಿ ದೇವಿಗೆ ನೈವೇದ್ಯ ಅರ್ಪಿಸುವ ಹಾಗೂ ಅಗ್ನಿ ತುಳಿಯುವ ಕಾರ್ಯಕ್ರಮ ಭಕ್ತರನ್ನು ಭಕ್ತಿಯಲ್ಲಿ ತೇಲಾಡುವಂತೆ ಮಾಡಿತ್ತು.ದೇವಿ ಜಾತ್ರೆಯಲ್ಲಿ ನೈವೇದ್ಯಗೆಂದು ಗಡುಗೆಯಲ್ಲಿ ಮಾಡುವ ಅಕ್ಕಿಪಾಯಸ ಮತ್ತು ಅಗ್ನಿಕುಂಡದ ಬೂದಿಯನ್ನು ಭಕ್ತರು ಭಕ್ತಿಯಿಂದ ಮನೆಗೆ ಒಯ್ಯುತ್ತಾರೆ. ಬಿತ್ತನೆ ಮಾಡುವಾಗ ಅಕ್ಕಿಪಾಯಸ ಮತ್ತು ಬೂದಿಯನ್ನು ಬೀಜೋಪಚಾರಕ್ಕೆ ಬಳಸಿದರೆ ಬೆಳೆಗೆ ರೋಗ ರುಜಿನ ಬರುವುದಿಲ್ಲ ಎಂಬುದು ರೈತ ಸಮೂಹದ ನಂಬಿಕೆಯಾಗಿದೆ ಎಂದು ಮುಖಂಡರು ಪ್ರಜಾವಾಣಿಗೆ ವಿವರಿಸಿದರು. ಗ್ರಾಮದ ಹಿರಿಯರಾದ ಗಿರಿಮಲ್ಲನಗೌಡ ಕರಡಕಲ್ಲ, ಭೂಪನಗೌಡ ಕರಡಕಲ್ಲ ಸೇರಿದಂತೆ ಸರ್ವ ಜಾತಿ ಜನಾಂಗದವರು ಪಾಲ್ಗೊಂಡು ದೇವಿ ಜಾತ್ರೆಯ ಕಾರ್ಯಕ್ರಮಗಳನ್ನು ಸಾಕ್ಷಿಕರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.