ಬುಧವಾರ, ಮೇ 12, 2021
18 °C

ಕರಡಕೆರೆ: ಮೂಲ ಸೌಕರ್ಯಕ್ಕೆ ಬರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಕೆರೆ ಗ್ರಾಮ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಭಾರತೀನಗರಕ್ಕೆ ಸನಿಹದಲ್ಲಿದ್ದರೂ ಅಭಿವೃದ್ಧಿ ಕಂಡಿಲ್ಲ. `ಸಮುದ್ರ ನಂಟು, ಉಪ್ಪಿಗೆ ಬರ~ ಎನ್ನುವ ಸ್ಥಿತಿ ಗ್ರಾಮದ್ದು.ಕರಡಕೆರೆ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. 1500ಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಗ್ರಾಮ ಪ್ರವೇಶದಲ್ಲೇ ಇರುವ ದಾಸನಕಟ್ಟೆ, ಗಿಡ ಗಂಟೆಗಳಿಂದ ತುಂಬಿ ಗಬ್ಬು ನಾರುತ್ತಿದೆ. ಇಂಥ ಪರಿಸ್ಥಿತಿಗೆ ಗ್ರಾಮಸ್ಥರು ಒಗ್ಗಿಕೊಂಡಿದ್ದಾರೆ.ಗ್ರಾಮದಲ್ಲಿ ಯಾವುದೇ ಮದುವೆ, ತಿಥಿ ಕಾರ್ಯಗಳು ನಡೆದರೂ ಉಪಯೋಗಿಸಿದ ಊಟದ ಎಲೆ, ಹಾಗೂ ತ್ಯಾಜ್ಯ ವಸ್ತುಗಳನ್ನು ಈ ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರಿಂದ ಗಬ್ಬು ವಾಸನೆ ಮತ್ತಷ್ಟೂ ಹೆಚ್ಚುತ್ತಿದೆ. ಇನ್ನು, ನಿಂಗಯ್ಯನ ಕಟ್ಟೆ, ಹೊಸಕಟ್ಟೆ (ದೇವರಕಟ್ಟೆ), ಕರಲ್‌ಕಟ್ಟೆ ಸೇರಿದಂತೆ ಇತರ ಕಟ್ಟೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.ಈ ಪೈಕಿ ಕೆಲವನ್ನು ಅಕ್ಕಪಕ್ಕದ ಜಮೀನಿನ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಾಲ್ಲೂಕು ಅಡಳಿತ ಕೆರೆಕಟ್ಟೆ ಹಾಗೂ ಸರ್ಕಾರಿ ಜಮೀನು ಒತ್ತವರಿಯನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಕೆ.ಎಂ.ಶಂಕರ್ ಒತ್ತಾಯಿಸುತ್ತಾರೆ.ಸರ್ಕಾರಿ ಪ್ರಾಥಮಿಕ ಶಾಲೆಯ ಕಾಪೌಂಡ್ ಪಕ್ಕದ ಜಾಗವನ್ನು ಗ್ರಾಮಸ್ಥರೊಬ್ಬರು ತಿಪ್ಪೆ ಮಾಡಿಕೊಂಡಿದ್ದಾರೆ. ಇದರ ವಾಸನೆ ಹರಡುವುದರಿಂದ ಶಾಲಾ ಮಕ್ಕಳಿಗೂ ಕಿರಿಕಿರಿ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗಿದ್ದರೂ, ತಿಪ್ಪೆ ತೆರವಾಗಿಲ್ಲ.ತ್ಯಾಜ್ಯ ನೀರು ಸರಾಗವಾಗಿ ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಕೆಲವು ಕಲ್ಲು ಮಣ್ಣುಗಳಿಂದ ತುಂಬಿ ಹೋಗಿವೆ. ಮಳೆ ಬಂತೆಂದರೆ, ಕೊಳಚೆ ನೀರು ರಸ್ತೆಗೆ ಬರುತ್ತದೆ. ಅರೆಚಾಕನಹಳ್ಳಿ ಮುಖ್ಯರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು, ಸಂಚಾರಕ್ಕೆ ತೊಡಕಾಗಿದೆ.ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ನಿಮಿತ್ತ ಅಕ್ಟೋಬರ್ ತಿಂಗಳಲ್ಲಿ 4 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ವೇಳೆಗೆ, ಗ್ರಾ.ಪಂ. ಅಧಿಕಾರಿಗಳು ಗ್ರಾಮದ ಎಲ್ಲ ಚರಂಡಿ ಮತ್ತು ರಸ್ತೆಗಳನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.ಕಳಪೆ ಕಾಮಗಾರಿ: ಶಾಸಕಿ ಕಲ್ಪನಾ ಸಿದ್ದರಾಜು ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ವಿಶೇಷ ಅನುದಾನದಡಿಯಲ್ಲಿ ಸುಮಾರು 3.60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ದಲಿತ ಕಾಲೋನಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿತ್ತಾದರೂ, ಕಾಮಗಾರಿ ನಡೆದು ಒಂದೆರಡು ತಿಂಗಳಲ್ಲೇ ಅಧ್ವಾನವಾಗಿದೆ.ಕೆ.ಶೆಟ್ಟಹಳ್ಳಿ ಗ್ರಾ.ಪಂ.ಗೆ ಪೂರ್ಣಕಾಲಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ನೇಮಕವಾಗಿಲ್ಲ. ಹೀಗಾಗಿ, ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿದೆ. ವಾಸಸ್ಥಳ ದೃಢೀಕರಣ, ಖಾತೆ ಬದಲಾವಣೆ ಮುಂತಾದ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಜನರು ದೂರುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.