ಕರಡಿಮೋಳೆಯಲ್ಲಿ ನೀರಿಗೆ ತತ್ವಾರ

7

ಕರಡಿಮೋಳೆಯಲ್ಲಿ ನೀರಿಗೆ ತತ್ವಾರ

Published:
Updated:

ಸಂತೇಮರಹಳ್ಳಿ: ಮನೆಗಳ ಮುಂಭಾಗವೇ ಕಾವೇರಿ ಕುಡಿಯುವ ನೀರಿನ ಶುದ್ಧೀಕರಣ ಘಟಕವಿದೆ. ಆದರೆ, ಕುಡಿಯುವ ನೀರು ಪಡೆದುಕೊಳ್ಳುವ ಭಾಗ್ಯ ಕರಡಿಮೋಳೆ ಗ್ರಾಮದ ಜನರಿಗೆ ಇಲ್ಲ!ಗ್ರಾಮಕ್ಕೆ ಕಾವೇರಿ ಕುಡಿಯುವ ನೀರಿನ ಪೈಪ್‌ನಿಂದ ನೀರು ಕೊಡುವುದಾಗಿ ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಪೈಪ್‌ಗಳು ಮಣ್ಣಿನಲ್ಲಿ ಹೂತುಹೋಗಿ ಕೊಳೆಯುತ್ತಿವೆಯೇ ಹೊರತು ಕುಡಿಯುವ ನೀರು ಹರಿಯುತ್ತಿಲ್ಲ. ಇದರ ಪರಿಣಾಮ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ.ಗ್ರಾಮಕ್ಕೆ ಒವರ್‌ಹೆಡ್ ಟ್ಯಾಂಕ್ ನಿರ್ಮಿಸಿಲ್ಲ. ಇರುವ ಏಕೈಕ ಕೊಳವೆಬಾವಿಯಿಂದ ಕಿರುನೀರು ಸರಬರಾಜು ಘಟಕದ 2 ತೊಂಬೆಗಳಿಗೆ ನೀರು ತುಂಬಿಸಲಾಗುತ್ತಿದೆ. ಅಸಮರ್ಪಕ ವಿದ್ಯುತ್‌ನಿಂದ ಸಂಪೂರ್ಣವಾಗಿ ತೊಂಬೆಗಳು ತುಂಬುತ್ತಿಲ್ಲ. ತುಂಬುವ ಅಲ್ಪಸ್ವಲ್ಪ ನೀರಿಗಾಗಿ ಹೆಂಗಸರು, ಮಕ್ಕಳು ನೀರಿಗಾಗಿ ಹೆಚ್ಚು ಸಮಯ ಕಾಯಬೇಕಾಗಿದೆ.ಗ್ರಾಮದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆಬಾವಿ ಕೊರೆಯಿಸಿ 1 ವರ್ಷ ಕಳೆದಿದೆ. ಕಿರುನೀರು ಸರಬರಾಜು ಘಟಕ ಯೋಜನೆಯಡಿ ತೊಂಬೆ ಕೂಡ ನಿರ್ಮಿಸಲಾಗಿದೆ. ಪೈಪ್‌ಲೈನ್ ಕೂಡ ಅಳವಡಿಸಲಾಗಿದೆ. ಆದರೆ, ಇಂದಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೆ ಯೋಜನೆ ನೆನೆಗುದಿಗೆ ಬಿದ್ದಿದೆ.ಗ್ರಾಮದಲ್ಲಿ 3 ಕೈಪಂಪ್‌ಗಳಿದ್ದು, ಒಂದರಲ್ಲಿ ಸಾಧಾರಣವಾಗಿ ನೀರು ಬರುತ್ತಿದೆ. ಕೆಟ್ಟುನಿಂತಿರುವ 2 ಕೈಪಂಪ್‌ಗಳನ್ನು ದುರಸ್ತಿ ಮಾಡಿಸುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗಿಲ್ಲ. ಗ್ರಾಮದ ಒಂದು ಬಡಾವಣೆಗೆ ಮಾತ್ರ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಬಡಾವಣೆಗೆ ಚರಂಡಿ ವ್ಯವಸ್ಥೆ ಕಲ್ಪಿಸದಿರುವ ಪರಿಣಾಮ ಮನೆಗಳ ಮುಂಭಾಗ ಚರಂಡಿ ನೀರು ಹರಿಯುತ್ತಿದೆ. ಒಬ್ಬರ ಮನೆ ತ್ಯಾಜ್ಯ ನೀರು ಮತ್ತೊಬ್ಬರ ಮನೆ ಮುಂಭಾಗ ಹರಿಯುತ್ತಿರುವುದರಿಂದ ನಿತ್ಯವೂ ಜಗಳ ನಡೆಯುತ್ತದೆ ಎನ್ನುತ್ತಾರೆ ಮಹಿಳೆಯರು.ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಅದರ ಮುಂಭಾಗ ತ್ಯಾಜ್ಯವಸ್ತುಗಳನ್ನು ಬಿಸಾಡಲಾಗಿದೆ. ಶಾಲೆ ಮುಂಭಾಗವೇ ಅನೈರ್ಮಲ್ಯ ಸೃಷ್ಟಿಯಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡದ ಪರಿಣಾಮ ಮಕ್ಕಳು ವಿಷಕಾರಿ ಕಸ ತುಳಿದುಕೊಂಡು ತಿರುಗಾಡುವಂತಾಗಿದೆ.`ಈಗಾಗಲೇ, ಕಾವೇರಿ ಕುಡಿಯುವ ನೀರು ಪೂರೈಸಲು ಗ್ರಾಮಕ್ಕೆ ಪೈಪ್‌ಲೈನ್ ಅಳವಡಿಸಲಾಗಿದೆ. ಕೂಡಲೇ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀರು ಸರಬರಾಜಿಗೆ ಚಾಲನೆ ನೀಡಬೇಕು' ಎಂದು ಒತ್ತಾಯಿಸುತ್ತಾರೆ ಅಂಗಡಿ ರವಿ.`ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗಿದ್ದು, ಅನುಮತಿಯೂ ಸಿಕ್ಕಿದೆ. ಚರಂಡಿಯಿಂದ ವಂಚಿತವಾಗಿರುವ ಬಡಾವಣೆಗೆ ಅನುದಾನ ಕ್ರೋಡೀಕರಿಸಿ ನೀಡಲಾಗುವುದು' ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry