ಶುಕ್ರವಾರ, ಮೇ 7, 2021
25 °C

ಕರಡಿ ಧಾಮದಲ್ಲಿ ನೀರಿಗೆ ಬರ

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ದರೋಜಿ ಬಳಿ ಇರುವ ಕರಡಿ ಧಾಮದಲ್ಲಿ ನೀರಿನ ಮೂಲವಾಗಿರುವ ಬಹುತೇಕ ಕೆರೆಗಳು ಬತ್ತಿಹೋಗಿವೆ. ಹೀಗಾಗಿ ನೂರಾರು ಕರಡಿಗಳು, ಸಾವಿರಾರು ಕಾಡುಹಂದಿಗಳು, ನವಿಲುಗಳು, ವಿವಿಧ ಪ್ರಭೇದದ ಪಕ್ಷಿಗಳು ನೀರಿಲ್ಲದೆ ಪರದಾಡುವಂತಾಗಿದೆ.ಹೊಸಪೇಟೆ ತಾಲ್ಲೂಕಿನ ದರೋಜಿ, ರಾಮಸಾಗರ, ಕಮಲಾಪುರ, ಪಾಪಿನಾಯಕನಹಳ್ಳಿ, ಗಾದಿಗನೂರು ಸುತ್ತಮುತ್ತ 82 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಚಾಚಿಕೊಂಡಿರುವ ಈ ಕರಡಿ ಧಾಮದಲ್ಲಿ 70ಕ್ಕೂ ಅಧಿಕ ಸಣ್ಣ ಕೆರೆಗಳಿದ್ದು, ಎಲ್ಲವೂ ಈಗ ಖಾಲಿಯಾಗಿವೆ.

 

ಅಲ್ಲದೆ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕಟ್ಟಿಸಿದ ದೊಡ್ಡದಾದ ಗೌರಮ್ಮನಕೆರೆ ಹಾಗೂ ಓಬಳಾಪುರ ಕೆರೆಗಳೂ ಕಳೆದ ವರ್ಷ ಮಳೆಯೇ ಸುರಿಯದ್ದರಿಂದ ಸಂಪೂರ್ಣ ಬರಿದಾಗಿವೆ. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಎರಡೂ ಕೆರೆಗಳು ಬತ್ತಿವೆ.ಕಳೆದ ವರ್ಷವಷ್ಟೇ ರೂ 2 ಲಕ್ಷ ವ್ಯಯಿಸಿ ಹೂಳೆತ್ತಿ, ದುರಸ್ತಿಗೊಳಿಸಲಾದ ಗೌರಮ್ಮನ ಕೆರೆಯೂ ಈ ಬಾರಿ ತುಂಬದಿರುವುದು ಪ್ರಾಣಿಗಳು ನೀರಿಗೆ ಅಲೆದಾಡುವಂತೆ ಮಾಡಿದೆ ಎಂದು ಕರಡಿಧಾಮದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಬುಕ್ಕಸಾಗರ, ರಾಮಸಾಗರ ಮತ್ತು ದೇವಲಾಪುರ ಗ್ರಾಮಗಳಿಗೆ ಅಂಟಿಕೊಂಡಿರುವ ಭಾಗದಲ್ಲಂತೂ ನೀರಿಲ್ಲದೆ ಕೆಲವು ಬಾರಿ ಕರಡಿಗಳು ದಾಹ ತೀರಿಸಿಕೊಳ್ಳಲು ರಾತ್ರಿ ವೇಳೆ ರೈಲು ಹಳಿಗಳ ಪಕ್ಕದಲ್ಲೇ ಇರುವ ದರೋಜಿ ಕೆರೆಗೂ ಧಾವಿಸುತ್ತಿವೆ.ನೀರಿಗಾಗಿ ಪರಿತಪಿಸುವ ಕೆಲವು ಕರಡಿಗಳು ತಮ್ಮ ಮರಿಗಳ ಸಮೇತ ಹತ್ತಿರದ ಗ್ರಾಮಗಳಿಗೆ ನುಗ್ಗಿರುವ ಉದಾಹರಣೆಗಳೂ ಇವೆ. ಧಾಮದಲ್ಲಿ ಕರಡಿ, ಕಾಡುಹಂದಿಗಳಲ್ಲದೆ 15ರಿಂದ 20 ಚಿರತೆಗಳೂ ಇವೆ. ನೀರು, ಆಹಾರ ದೊರೆಯದಿದ್ದರೆ ಈ ಎಲ್ಲ ಪ್ರಾಣಿಗಳೂ ನಾಡಿಗೆ ಧಾವಿಸುವ ಅಪಾಯ ಇದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.ಧಾಮದಲ್ಲಿರುವ ಪ್ರಾಣಿ, ಪಕ್ಷಿಗಳ ದಾಹ ತಣಿಸಲೆಂದೇ ಸುತ್ತಮುತ್ತಲ ಗ್ರಾಮಗಳ ಜನರ ಸಹಕಾರದೊಂದಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ನಿರ್ಧರಿಸಲಾಗಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ತಿಳಿಸುತ್ತಾರೆ.ಜೂನ್‌ವರೆಗೂ ಪ್ರತಿ ಎರಡು ದಿನಕ್ಕೊಮ್ಮೆಯಂತೆ ಸಿಮೆಂಟ್‌ನ ಹೊಂಡಗಳಿಗೆ ನೀರು ಪೂರೈಸಬೇಕು ಎಂದು ದರೋಜಿ ಗ್ರಾಮಸ್ಥರು ಆಗ್ರಹಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.