ಮಂಗಳವಾರ, ನವೆಂಬರ್ 19, 2019
27 °C

`ಕರಪತ್ರ, ಪ್ರಚಾರ ಸಾಮಗ್ರಿಗೂ ಅನುಮತಿ ಕಡ್ಡಾಯ'

Published:
Updated:

ವಿಜಾಪುರ: `ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಪರವಾಗಿ ಪ್ರಚಾರ ಮಾಡುವವರು ಮುದ್ರಿಸುವ ಕರಪತ್ರ, ಪ್ರಚಾರ ಸಾಮಗ್ರಿ ಹಾಗೂ ಎಲ್ಲ ಬಗೆಯ ಜಾಹೀರಾತು ಪ್ರಕಟಿಸುವ ಮುನ್ನ ತಮ್ಮ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ' ಎಂದು ಚುನಾವಣೆಯ ಜಿಲ್ಲಾ ಮಟ್ಟದ ಮಾಧ್ಯಮ ದೃಢೀಕರಣ ಮತ್ತು ಮುನ್ನೆಚ್ಚರಿಕೆ ಸಮಿತಿ (ಎಂ.ಸಿ.ಎಂ.ಸಿ)ಯವರು ಹೇಳಿದರು.ಸಮಿತಿಯ ಸದಸ್ಯರಾದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಡಾ.ಗಂಗೂಬಾಯಿ ಮಾನಕರ, ಕ್ಷೇತ್ರ ಪ್ರಚಾರ ಅಧಿಕಾರಿ ಶಿವಯೋಗಿ ಮೇಸ್ತ್ರಿ, ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಮಾಧ್ಯಮಗಳಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಣೆ ಮತ್ತು ಪ್ರಸಾರದ ಮೇಲೆ ನಿಗಾ ವಹಿಸಲು ಹಾಗೂ ಪ್ರಚಾರ ಸಾಮಗ್ರಿಗಳನ್ನು ಪತ್ತೆ ಹಚ್ಚಿ ಅದರ ವೆಚ್ಚವನ್ನು ಅಭ್ಯರ್ಥಿಗಳ ಖಾತೆಗೆ ಸೇರಿಸಲಿಕ್ಕಾಗಿ ಜಿಲ್ಲಾಧಿಕಾರಿಗಳು ನಾಲ್ಕು ಜನರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚಿಸಿದ್ದಾರೆ ಎಂದರು.`ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಕೇಬಲ್ ಆಪರೇಟರ್‌ಗಳು, ರೇಡಿಯೊ, ಮೊಬೈಲ್, ಸಗಟು ಎಸ್‌ಎಂಎಸ್ ಮತ್ತಿತರ ಬಗೆಯ ಪ್ರಚಾರ ನಮ್ಮ ಸಮಿತಿ ವ್ಯಾಪ್ತಿಗೆ ಬರುತ್ತವೆ. ಕರಪತ್ರ ಮುದ್ರಿಸುವ ಮುನ್ನ ಅಭ್ಯರ್ಥಿಗಳು ನಮ್ಮ ಸಮಿತಿಯಿಂದ ಅನುಮತಿ ಪಡೆಯಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಚಾರಿತ್ರ್ಯ ವಧೆಗೆ ಅವಕಾಶ ನೀಡುವ ಅಂಶಗಳ ಪ್ರಕಟಣೆ-ಪ್ರಸಾರಕ್ಕೆ ಅವಕಾಶ ಇಲ್ಲ' ಎಂದರು.`ಕರಪತ್ರದ ಮೇಲೆ ಮುದ್ರಕರ ಹೆಸರು, ಮುದ್ರಣ ಪ್ರತಿಗಳ ಸಂಖ್ಯೆಯನ್ನು ನಮೂದಿಸಬೇಕು. ಅಭ್ಯರ್ಥಿ ನಮ್ಮ ಸಮಿತಿಯಿಂದ ಅನುಮತಿ ಪಡೆದಿರುವುದನ್ನು ದೃಢೀಕರಿಸಿಕೊಂಡು ಮುದ್ರಿಸಿಕೊಡಬೇಕು ಎಂದು ಜಿಲ್ಲೆಯ ಎಲ್ಲ ಮುದ್ರಣ ಮಾಲೀಕರ ಸಭೆ ಕರೆದು ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘಿಸುವ ಮುದ್ರಣ ಮಾಲೀಕರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 127 (ಎ) ಪ್ರಕಾರ ಸಂಬಂಧಿಸಿದ ಚುನಾವಣಾಧಿಕಾರಿಗಳ ಮೂಲಕ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯಡಿ ಎರಡು ವರ್ಷ ಶಿಕ್ಷೆ ಮತ್ತು ರೂ.2000 ದಂಡ ವಿಧಿಸಲು ಅವಕಾಶವಿದೆ' ಎಂದು ಮಾನಕರ ಹೇಳಿದರು.`ಚುನಾವಣಾ ಪ್ರಚಾರಕ್ಕೆ ಬಳಸುವ ಎಲ್ಲ ಬಗೆಯ ಪ್ರಚಾರ ಮಾಧ್ಯಮದ ಅಂದಾಜು ದರಪಟ್ಟಿ ಚುನಾವಣಾ ಆಯೋಗ ಸಿದ್ಧಪಡಿಸಿಟ್ಟುಕೊಂಡಿದೆ. ಮುದ್ರಕರು-ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿದರೂ ಆಯೋಗದ ಬಳಿ ಇರುವ ದರಪಟ್ಟಿಯಂತೆಯೇ ಅಭ್ಯರ್ಥಿಯ ವೆಚ್ಚದ ಖಾತೆಗೆ ಸೇರಿಸಲಾಗುವುದು' ಎಂದರು.`ಪ್ರಥಮ ಬಾರಿಗೆ ಜಿಲ್ಲೆಗೆ ಇಬ್ಬರು ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ನಿಯಮ ಉಲ್ಲಂಘಿಸಿ ಪ್ರಚಾರ ಸಾಮಗ್ರಿ ಬಳಸಿದರೆ ಯಾರಾದರೂ ಸಮಿತಿಗೆ ದೂರು ಸಲ್ಲಿಸಬಹುದು. ಸಮಿತಿಯಿಂದ ಎಲ್ಲ ಪತ್ರಿಕೆಗಳನ್ನು ತರಿಸಲಾಗುತ್ತಿದ್ದು, ನಾಲ್ವರು ಸಿಬ್ಬಂದಿ ನಿಯೋಜಿಸಿ ಅವರಿಂದ ನಿತ್ಯ ಪರಿಶೀಲನೆ ನಡೆಸಲಾಗುತ್ತಿದೆ. ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಚುನಾವಣಾ ಸಂಬಂಧಿ ವಿಷಯಗಳ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿದೆ. ಸಂಶಯ ಬಂದರೆ ಸಮಿತಿಯೇ ಪರಿಶೀಲನೆ ನಡೆಸಲಿದೆ' ಎಂದು ಹೇಳಿದರು.`ವರದಿ ಅಥವಾ ಲೇಖನ ಬರೆಯುವವರು ಅಭ್ಯರ್ಥಿ ಅಥವಾ ಪಕ್ಷಕ್ಕೆ ಅನುಕೂಲಕರವಾಗುವಂತೆ ವೈಯಕ್ತಿಕ ಅಭಿಪ್ರಾಯ ಸೇರಿಸಿದರೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ' ಎಂದರು.ಈ ವಿಷಯ ಕುರಿತು ದೂರು ನೀಡಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಗಂಗೂಬಾಯಿ ಮಾನಕರ ಮೊ.9449032319, 08352-222988.

ಶಿವಯೋಗಿ ಮೇಸ್ತ್ರಿ ಮೊ.9448102994.

ಡಾ.ಓಂಕಾರ ಕಾಕಡೆ 9611488205.

ಡಾ.ಬಿ.ಆರ್. ರಂಗನಾಥ 9448300048.

ಪ್ರತಿಕ್ರಿಯಿಸಿ (+)