ಕರಮುಡಿ: ಸಮಸ್ಯೆಗಳ ಆಗರ

7

ಕರಮುಡಿ: ಸಮಸ್ಯೆಗಳ ಆಗರ

Published:
Updated:
ಕರಮುಡಿ: ಸಮಸ್ಯೆಗಳ ಆಗರ

ಯಲಬುರ್ಗಾ: `ಬಹಿರ್ದೆಶೆಗೆಂದು ಹೋಗಿದ್ದ ನಮ್ಮಮ್ಮ ಸಂಗಮ್ಮ ಕಾಲ್ಮುರಕಂಡು ಮನಿಗೆ ಬಂದ್ಲು, ಆರಾಮ ಆಗ್ಲಾರದ್ಕ ತಿಂಗ್ಳದಾಗ ಸತ್ತು ಹೋದ್ಲು, ಮತ್ತೆ ಆಗಾಗ ಒಬ್ಬಿಬ್ರು ಬಿದ್ದು ಗಾಯ ಮಾಡ್ಕೊಂಡ್ರು ಯಾರೊಬ್ರು ರಸ್ತೆ ಸುಧಾರಣೆಗೆ ಮುಂದೆ ಬಂದಿಲ್ಲ~ ಎಂಬುದು ಕರಮುಡಿ ಗ್ರಾಮದ ಕಾಶಮ್ಮ ಪತ್ತಾರ ಅವರ ಆಕ್ರೋಶದ ಮಾತು.ಹೌದು, ಅಭಿವೃದ್ಧಿಯಿಂದ ವಂಚಿತವಾದ ತಾಲ್ಲೂಕಿನ ಕರಮುಡಿ ಗ್ರಾಮದ ಜನರ ಜೀವನ ತೀರಾ ಕಳಹಂತದಲ್ಲಿ ಇರುವುದಕ್ಕೆ ಈ ಮಾತುಗಳೆ ಸಾಕ್ಷಿಯಾಗಬಲ್ಲದು. ಉತ್ತಮ ರಸ್ತೆ, ಸಮರ್ಪಕ ಕುಡಿಯುವ ನೀರು, ಚರಂಡಿ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳು ಇಲ್ಲಿ ಅನುಷ್ಠಾನಗೊಳ್ಳದಿರುವುದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಕನ್ನಡಿಯಾದಂತಿದೆ. ಅನುದಾನ ಮಾತ್ರ ಹರಿದು ಬರುತ್ತಲೇ ಇದೆ ಆದರೆ ಅಭಿವೃದ್ಧಿ ಮಾತ್ರ ಗ್ರಾಮಸ್ಥರಿಗೆ ಮಾತ್ರ ಇನ್ನೂ ಗಗನ ಕುಸುಮವಾದಂತಿದೆ.ಪ್ರಮುಖ ರಸ್ತೆಯ ಮೇಲೆಯೇ ಸಾಕಷ್ಟು ಕೊಳೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದೆ. ಹೀಗೆ ಕಳೆದ ಹತ್ತು ವರ್ಷಗಳಿಂದಲೂ ಇದೇ ಸ್ಥಿತಿಯಿದ್ದರೂ ಅದನ್ನು ದುರಸ್ತಿಗೊಳಿಸಬೇಕೆಂಬ ಕನಿಷ್ಠ ಸೌಜನ್ಯ ಯಾರಿಗೂ ಇಲ್ಲದಿರುವುದು, ರಸ್ತೆ ಪಕ್ಕದ ಚರಂಡಿ ಕೂಡಾ ಭರ್ತಿಯಾಗಿದ್ದರೂ ಅದನ್ನು ಸ್ವಚ್ಛಗೊಳಿಸಿ ನೀರು ಸುಲಭವಾಗಿ ಹೋಗುವಂತೆ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಲ್ಲದೇ ದುಡಿದ ಬೇಸತ್ತು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುವ ಬಸವಣ್ಣನ ಕಟ್ಟೆಗೆ ಹೊಂದಿಕೊಂಡೆ ಪ್ರಭಾವಿ ಮಾಜಿ ತಾಪಂ ಅಧ್ಯಕ್ಷರೊಬ್ಬರು ತಿಪ್ಪೆ ಹಾಕುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆಂದು ಹೇಳಲಾಗುತ್ತಿದೆ. ಹೀಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕೊಳಗೇರಿ, ತಿಪ್ಪೆಗಳು, ಶೌಚ್ಯದಿಂದಾಗಿ ವಿಪರೀತ ದುರ್ನಾತ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರ ಪರಿಣಾಮ ಸಾರ್ವಜನಿಕರ ಆರೋಗ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರಿದ್ದು, ಈಗ ಗ್ರಾಮದಲ್ಲಿ ಅನೇಕ ರೋಗಗಳ ಉಲ್ಬಣಕ್ಕೆ ಕಾರಣವಾಗಿದೆ.ಕನ್ಯೆ ಕೊಡ್ತಿಲ್ಲ: ಕುಡಿಯ್ಯಾಕ ನೀರು ತರಾಕ ಮೈಲಿ ದೂರ ಹೋಗಬೇಕು, ಶೌಚ್ಯಕ್ಕಾಗಿ ರಾತ್ರಿತನ ಕಾಯಬೇಕು ಅಂತ ಬೇರೆ ಊರಿನ ಜನ ಕರಮುಡಿ ಗ್ರಾಮಕ್ಕೆ ಕನ್ಯಾ ಕೋಡೊದಿಲ್ಲ ಅಂತ ಹೇಳಿ ಹೋಗ್ತಾರ, ಇಂತಹ ಪರಿಸ್ಥಿತಿಯಲ್ಲಿ ಜೀವನ ಮಾಡಬೇಕಾಗಿದೆ. ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎಂದು ಚನ್ನಮ್ಮ ಇಟಗಿ ಸಂಗಮ್ಮ ಪತ್ತಾರ ಅವರ ಅಸಹಾಯಕದ ನುಡಿಗಳಿವು.ಹೆಸರಿಗೆ ಮಾತ್ರ ಗ್ರಾಮ ಪಂಚಾಯತಿ, ಆದರೆ ಪಂಚಾಯತಿ ವತಿಯಿಂದ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಿಕೊಳ್ಳುವ ಸಾಧ್ಯತೆಗಳಿದ್ದರೂ ಅದು ಪಂಚಾಯತಿ ಅಧಿಕಾರಿಯ ವೈಯಕ್ತಿಕ ಅಭಿವೃದ್ಧಿಗೆ ಮೀಸಲಾದಂತಿದೆ. ಕಳೆದ 10ಕ್ಕು ಹೆಚ್ಚು ವರ್ಷಗಳ ಕಾಲ ಇದೇ ಪಂಚಾಯಿತಿ ಕಾರ್ಯದರ್ಶಿಯಾಗಿದ್ದು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಬರೀ ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಅವ್ಯವಹಾರ ಮಾಡಿದ್ದೆ ಹೆಚ್ಚು. ಅಲ್ಲದೇ ಮಾಹಿತಿಹಕ್ಕು ಅಧಿನಿಯಮದಡಿಯಲ್ಲಿ ಮಾಹಿತಿ ನೀಡದೇ ಸಾಕಷ್ಟು ಸಲ ದಂಡ ಕಟ್ಟಿದ ಈ ಕಾರ್ಯದರ್ಶಿ ಭ್ರಷ್ಟಾಚಾರದ ಮತ್ತೊಂದು ಮುಖ ಎಂದೇ ಸ್ಥಳೀಯರು ಆರೋಪಿಸುತ್ತಿದ್ದಾರೆ.ಮಹಿಳೆಯರಿಗೆ ಶೌಚಾಲಯವಿಲ್ಲದೇ ರಸ್ತೆ ಬದಿಗೋ, ಊರಾಚೆ ಇರುವ ಹಳ್ಳಕ್ಕೊ ಅಥವಾ ಹೊಲಗಳ ಬದುವಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲಿಯ ಮಹಿಳೆಯರಿಗಿದೆ. ಆದರೆ ಈ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಂಡಂತಿಲ್ಲ, ಹಾಗೆಯೇ ವಿವಿಧ ಓಣಿಯಲ್ಲಿ ಸಿಮೆಂಟ್ ರಸ್ತೆ ಮಾಡುವುದಾಗಿ ಕಳೆದ ವರ್ಷದಿಂದಲೂ ಹೇಳುತ್ತಲೇ ಇದ್ದಾರೆ, ಆದರೆ ಇನ್ನೂವರೆಗೆ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ, ಮೇಲಾಗಿ ಪೇಪರದಲ್ಲಿ ಗ್ರಾಮಕ್ಕೆ ಅಷ್ಟು ಅನುದಾನ ಬಂದಿದೆ. ಆ ಯೋಜನೆ ಜಾರಿಯಾಗಿದೆ ಹಾಗೆ ಹೀಗೆ ಎಂದು ಬರೀತಾನೇ ಇರ‌್ತಾರೆ ಆದರೆ ಗ್ರಾಮದಲ್ಲಿ ಮಾತ್ರ ಯಾವೊಂದು ಯೋಜನೆ ಕಣ್ಣಿಗೆ ಬೀಳುತ್ತಿಲ್ಲ ಎಂದು ಗ್ರಾಮದ ಶಂಕ್ರಪ್ಪ ರಾಂಪೂರ, ಮುತ್ತಣ್ಣ ನಿಂಗೋಜಿ ಬೇಸರ ವ್ಯಕ್ತಪಡಿಸಿದ್ದಾರೆ.ಅನುಷ್ಠಾನಗೊಳ್ಳದ ಸುವರ್ಣ ಗ್ರಾಮ: ಗ್ರಾಮದ ಸಮಗ್ರ ಅಭಿವೃದ್ಧಿಗಾಗಿಯೇ ರೂಪ ಗೊಂಡ ಸುವರ್ಣ ಗ್ರಾಮ ಯೋಜನೆಯ ಅನುಷ್ಠಾನಕ್ಕೆ ಕರಮುಡಿ ಆಯ್ಕೆಯಾಗಿದ್ದರೂ ನಿರ್ವಹಣೆಯ ಜವಾಬ್ದಾರಿ ಹೊತ್ತ ಭೂಸೇನಾ ನಿಗಮದವರು ಇನ್ನೂವರೆಗೂ ಗ್ರಾಮದ ಕಡೆ ಇಣುಕಿ ನೋಡಿಲ್ಲ,  ಗ್ರಾಮದ ಅಭಿವೃದ್ಧಿಗಾಗಿ ಇರುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣರ ಬದುಕು ಕೆಳದರ್ಜೆಯಲ್ಲಿರುವಂತೆ ಮಾಡಿದೆ ಎಂದು ಯುವಕ ಮಲ್ಲಿಕಾರ್ಜುನ ದೂರಿದ್ದಾರೆ.ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಈ ಭಾಗದ ಜಿಪಂ ಸದಸ್ಯರು, ಶಾಸಕರು ಹಾಗೂ ಸಂಸದರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಯುವಕ ಮಂಡಳದ ಸದಸ್ಯರು ಎಚ್ಚರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry