ಶನಿವಾರ, ಮೇ 8, 2021
26 °C

ಕರಳುಬೇನೆ: 12ಮಂದಿ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಕರಳುಬೇನೆ ಕಾಣಿಸಿಕೊಂಡಿದ್ದು, ಕಳೆದ 3 ದಿನಗಳಲ್ಲಿ 35-40 ಪ್ರಕರಣಗಳು ಪತ್ತೆಯಾಗಿವೆ.ತಾಲೂಕಿನ ಕಟ್ಟಿಸಂಗಾವಿ, ಮಂದೇವಾಲ, ಕೋಳಕೂರ, ಕುಕನೂರ, ಸೊನ್ನ, ಮಾವನೂರ, ಹರವಾಳ, ಕೆಲ್ಲೂರ, ಹಾಲಗಡ್ಲಾ, ರೇವನೂರ,ಯಾಳವಾರ, ಕುರನಳ್ಳಿ, ಚಿಗರಹಳ್ಳಿ, ಗೌನಳ್ಳಿ, ಚೆನ್ನೂರ, ಶಖಾಪೂರ ಹಾಗೂ ಕಲಬುರ್ಗಿ ತಾಲೂಕಿನ ಫಿರೋಜಾಬಾದ್ ಗ್ರಾಮದ ರೋಗಿಗಳು ಜೇವರ್ಗಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಂಬಾರಾಯ ರುದ್ರವಾಡಿ, ಆಸ್ಪತ್ರೆಗೆ ಬೇಟಿ ನೀಡಿದ ಪತ್ರಕರ್ತರಿಗೆ ಮಾಹಿತಿ ನೀಡಿದರು.ಬುಧವಾರ ಆಸ್ಪತ್ರೆಯಲ್ಲಿ 12 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ದಾಖಲಾದ ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಫಿರೋಜಾಬಾದ್ ಗ್ರಾಮದ ಸತೀಶ(20), ಸೋನಾಬಾಯಿ(38) ರೇಣುಕಾ(25), ಮಂದೇವಾಲ ಗ್ರಾಮದ ಇಂದಿರಾಬಾಯಿ(55) ಹಾಗೂ ಕಟ್ಟಿಸಂಗಾವಿಯ ಮಂಜುಳಾ(19) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.ಕಳೆದ 3 ದಿನಗಳ ಹಿಂದೆ ಕರಳು ಬೇನೆಯಿಂದ ಜೇವರ್ಗಿ ಆಸ್ಪತ್ರೆಗೆ ದಾಖಲಾದ ಪಟ್ಟಣದ ನಿವಾಸಿಗಳಾದ ಚೈತನ್ಯ(3), ಚಂದ್ರಕಾಂತ(8), ನಿಂಗಣ್ಣ(35) ಇದುವರೆಗೂ ಗುಣಮುಖರಾಗಿಲ್ಲ. ಸೂಕ್ತ ಚಿಕಿತ್ಸೆ ಮುಂದುವರೆಸಲಾಗಿದೆ.ಕರಳುಬೇನೆಗೆ ಕಲುಷಿತ ನೀರು ಕಾರಣವೆನ್ನಲಾಗಿದ್ದು, ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರುದ್ರವಾಡಿ ತಿಳಿಸಿದ್ದಾರೆ.ಸಿಬ್ಬಂದಿ ಕೊರತೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರಳುಬೇನೆಯಿಂದ ಅನೇಕ ರೋಗಿಗಳು ದಾಖಲಾಗುತ್ತಿದ್ದು, ಅಗತ್ಯ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕದೇ ಪರದಾಡುವಂತಾಗಿದೆ.  ಒಟ್ಟು16 ಜನ ವೈದ್ಯಾಧಿಕಾರಿಗಳ ಹುದ್ದೆಯಿದ್ದು, ಕೇವಲ 3 ಜನ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 38 ಜನ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಗಳಿದ್ದು,11 ಜನ ಕಾರ್ಯನಿರ್ವಹಿಸುತ್ತಿದ್ದಾರೆ. 28 ಗ್ರೂಪ್ ಡಿ ಹುದ್ದೆಗಳಿದ್ದು,12 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ತಾಲೂಕಿನ ಅನೇಕ ಗ್ರಾಮಗಳಲ್ಲಿ ಕರಳು ಬೇನೆ ಉಲ್ಬಣಿಸಿದ್ದರಿಂದ ಆಯಾ ಗ್ರಾಮಸ್ಥರು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳದೇ ಜೇವರ್ಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಕರ್ತವ್ಯ ನಿರತ ವೈದ್ಯಾಧಿಕಾರಿಗಳು ಪರದಾಡುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.