ಸೋಮವಾರ, ಜೂನ್ 21, 2021
29 °C

ಕರಾಟೆ ಮಹಾಗುರು!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕರಾಟೆ ಮಹಾಗುರು!

ಅಂತಿಂಥ ಅಜ್ಜ ಇವರಲ್ಲ. ಯುವಕರನ್ನು ನಾಚಿಸುವಂತಹ ಅಂಗಸೌಷ್ಟವ ಹೊಂದಿರುವ ಈ ಅಜ್ಜನಿಗೆ 73ರ ಹರೆಯ ಎಂದರೆ ಯಾರೂ ನಂಬುವುದೂ ಇಲ್ಲ. ಕರಾಟೆ ದಿರಿಸು ತೊಟ್ಟು, ತೊಡೆ ತಟ್ಟಿ ನಿಂತರೆಂದರೆ ಎಂತಹ ಜಟ್ಟಿಯನ್ನೂ ಅನಾಮತ್ತಾಗಿ ಎತ್ತಿ ಒಗೆಯುವಂತಹ ಸಾಮರ್ಥ್ಯ ಅವರಲ್ಲಿದೆ.ಈ ಅಜ್ಜನ ಗರಡಿಯಲ್ಲಿ ಪಳಗಲು ಪೊಲೀಸರು ಸಾಲುಗಟ್ಟಿ ನಿಲ್ಲುತ್ತಾರೆ. ಮಿಲಿಟರಿ ಮಂದಿಯೂ ಅವರನ್ನು ಹುಡುಕಿಕೊಂಡು ಬರುತ್ತಾರೆ. ಕರಾಟೆ, ದೇಹದಾರ್ಢ್ಯ ಹಾಗೂ ವೇಟ್ ಲಿಫ್ಟಿಂಗ್ ಮೂರೂ ಕ್ರೀಡೆಗಳಲ್ಲಿ ಪ್ರಭುತ್ವ ಹೊಂದಿರುವ ಆ ಅಜ್ಜ ಬೇರಾರೂ ಅಲ್ಲ; ಧಾರವಾಡದ ಎಂ.ಎಂ. ಖತೀಬ್.ಮೂರೂ ಕ್ರೀಡೆಗಳ ಹುಟ್ಟು, ಬೆಳವಣಿಗೆ ಮತ್ತು ವರ್ತಮಾನದ ಸ್ಥಿತಿ ಕುರಿತಂತೆ ಅತ್ಯಂತ ಅಧಿಕಾರಯುತವಾಗಿ ಮಾತನಾಡುವ ಸಾಮರ್ಥ್ಯವುಳ್ಳ ಈ ಅಜ್ಜ, ಧಾರವಾಡದ ಹೆಮ್ಮೆ ಎನಿಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲೇ ತಮ್ಮ ಅಧ್ಯಯನ ಪೂರೈಸಿದ ಖತೀಬ್, ಕಾಲೇಜು ದಿನಗಳಲ್ಲಿ ಕರಾಟೆಯತ್ತ ವಾಲಿದರು.

 

ಜಪಾನ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಓಕಿನಾವಾ ಕರಾಟೆ ಸಂಸ್ಥೆಯಿಂದ ಶಾಸ್ತ್ರೀಯವಾಗಿ ಆ ಕ್ರೀಡೆಯನ್ನು ಕರಗತ ಮಾಡಿಕೊಂಡರು. ಈಗ ಆ ಸಂಸ್ಥೆಯ ಕರ್ನಾಟಕದ ಪ್ರಧಾನ ತರಬೇತುದಾರರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. 50 ವರ್ಷಗಳ ಅವರ ಕ್ರೀಡಾ ಸೇವೆಗೆ ದಣಿವೇ ಇಲ್ಲವಾಗಿದೆ.ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕಾತಿ ನಡೆದಾಗಲೆಲ್ಲ ಇಲಾಖೆ ಮುಖ ಮಾಡುವುದು ಈ ಅಜ್ಜನತ್ತಲೇ. ಹೊಸ ಅಧಿಕಾರಿಗಳಿಗೆ ಅಜ್ಜನಿಂದ ಒಂದಿಷ್ಟು ತರಬೇತಿ ಕೊಡಿಸಿದರೆ ಪೊಲೀಸ್ ವರಿಷ್ಠರಿಗೂ ಸಮಾಧಾನ. ಪೊಲೀಸ್ ತರಬೇತಿ ಶಾಲೆಗಳೂ ಇವರ ಸೇವೆಯ ಲಾಭವನ್ನು ಪಡೆದುಕೊಂಡಿದೆ. ಮಹಿಳಾ ಪೇದೆಗಳಿಗೂ ಇವರೇ ರಕ್ಷಣೆ `ಪಾಠ~ಗಳನ್ನು ಹೇಳಿಕೊಟ್ಟಿದ್ದಾರೆ.ಕರ್ನಾಟಕ ಮತ್ತು ಕೃಷಿ ವಿಶ್ವವಿದ್ಯಾಲಯ ಹಾಗೂ ಕಿತ್ತೂರಿನ ರಾಣಿ ಚನ್ನಮ್ಮ ವಸತಿ ಶಾಲೆ ಸೇರಿದಂತೆ ಅಸಂಖ್ಯ ವಿದ್ಯಾಸಂಸ್ಥೆಗಳು ಖತೀಬ್ ಅವರಿಂದ ತಮ್ಮ ವಿದ್ಯಾರ್ಥಿಗಳಿಗೆ ಕರಾಟೆ ದೀಕ್ಷೆ ಕೊಡಿಸಿವೆ.ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ಕೆಲವು ಜಿಲ್ಲಾಧಿಕಾರಿಗಳೂ ಇವರ ಬಳಿ ತರಬೇತಿ ಪಡೆದಿದ್ದು ವಿಶೇಷವಾಗಿದೆ. ರಾಜ್ಯ ಕಂಡ ಧೀಮಂತ ನಾಯಕರಾಗಿದ್ದ ಬಿ.ಡಿ. ಜತ್ತಿ ಮತ್ತು ಎಸ್.ನಿಜಲಿಂಗಪ್ಪ ಸಮಾರಂಭವೊಂದರಲ್ಲಿ ಅಜ್ಜನ ಶಿಷ್ಯಂದಿರು ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಸದೃಢ ಹಾಗೂ ಗುಣಸಂಪನ್ನ ಯುವ ಸಮುದಾಯವನ್ನು ಕಟ್ಟುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಹೇಳಿದ್ದನ್ನು ಖತೀಬ್ ಇನ್ನೂ ಮರೆತಿಲ್ಲ.ಕರಾಟೆ ಮಾತ್ರವಲ್ಲದೆ ದೇಹದಾರ್ಢ್ಯ ಮತ್ತು ವೇಟ್ ಲಿಫ್ಟಿಂಗ್‌ನಲ್ಲೂ ಈ ಅಜ್ಜನದು ಎತ್ತಿದ ಕೈ. 1970ರ ದಶಕದಲ್ಲಿ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಗರಡಿಯಲ್ಲಿ ಪಳಗಿದ ಎಂ.ಎಂ. ಬ್ಯಾಹಟ್ಟಿ `ಭಾರತ್ ಕುಮಾರ~, `ಮಿಸ್ಟರ್ ಇಂಡಿಯಾ~ ಪ್ರಶಸ್ತಿಗಳನ್ನು ಜಯಿಸಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲೂ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.ಇನ್ನು ಕೆಲವು ಶಿಷ್ಯಂದಿರು ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್)ಯಲ್ಲಿ ಪದವಿ ಪಡೆದು, ದೇಶದ ಬೇರೆ, ಬೇರೆ ಭಾಗಗಳಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಕರಾಟೆ ತರಬೇತಿ ಕೊಡುತ್ತಿದ್ದಾರೆ. ಆ ಗುರುಗಳಿಗೆಲ್ಲ ಈ ಅಜ್ಜ `ಮಹಾಗುರು~ ಎನಿಸಿದ್ದಾರೆ.

ವೇಟ್ ಲಿಫ್ಟಿಂಗ್‌ನಲ್ಲಿ ಎನ್‌ಐಎಸ್ ಕೋಚ್ ಆಗಿರುವ ಖತೀಬ್, 1985ರಲ್ಲಿ ಮಲೇಷ್ಯಾ ಮತ್ತು ಜಪಾನ್ ಮಾಸ್ಟರ್‌ಗಳಿಂದ ಫಸ್ಟ್ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.ಧಾರವಾಡದಲ್ಲಿ ತರಬೇತಿ ಶಾಲೆಯನ್ನು ಹೊಂದಿರುವ ಅವರು, ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಖತೀಬ್ ಅವರ ಪುತ್ರ ನಿಯಾಜ್ 13 ಸಲ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮಲೇಷ್ಯಾ, ಜಪಾನ್ ಮತ್ತು ಇಂಗ್ಲೆಂಡ್‌ನಿಂದ ಅನೇಕ ಗಣ್ಯರು ಬಂದು, ಈ ಕರಾಟೆ ಅಜ್ಜನ ತರಬೇತಿ ಶಿಬಿರಗಳನ್ನು ನೋಡಿಕೊಂಡು ಹೋಗಿದ್ದಾರೆ.ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಹುಡುಗಿಯರನ್ನು ಚುಡಾಯಿಸುವ ಖಯಾಲಿ ಹೆಚ್ಚಿದ್ದಾಗ ಈ ಅಜ್ಜ ಮಾಡಿದ್ದೇನು ಗೊತ್ತೆ? ಶಾಲಾ-ಕಾಲೇಜುಗಳಿಗೆ ಹೋಗಿ ಯುವತಿಯರಿಗೆ ಆತ್ಮ ರಕ್ಷಣೆಗಾಗಿ ಸುಲಭದ ತಂತ್ರಗಳನ್ನು ಹೇಳಿಕೊಟ್ಟರು. ಆಗ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥ್ ಇವರ ಪ್ರಯತ್ನಕ್ಕೆ ಅಭಿಮಾನದಿಂದ ಬೆನ್ನು ತಟ್ಟಿದ್ದರು.ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಖತೀಬ್, ಉರ್ದು ಶಾಲೆಯೊಂದರ ಕಟ್ಟಡದ ಪುನರ್ ನಿರ್ಮಾಣಕ್ಕೆ ಸಾಕಷ್ಟು ನೆರವು ಒದಗಿಸಿದ್ದರು. ನೂರಾರು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನೂ ಅವರು ಮಾಡಿದ್ದಾರೆ. 73 ವರ್ಷಗಳನ್ನು ಪೂರೈಸಿದರೂ ಬಿಡುವಿಲ್ಲದೆ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಖತೀಬ್, ಬೆಳಿಗ್ಗೆ ಎದ್ದೊಡನೆ ಕರಾಟೆ ಶಾಲೆಯಲ್ಲಿ ಇರುತ್ತಾರೆ.`ಜೀವನದಲ್ಲಿ ಎಲ್ಲವನ್ನೂ ಕಂಡಿದ್ದೇನೆ. ಇನ್ನು ನಾನು ಪಡೆಯಬೇಕಾದದ್ದು ಏನಿಲ್ಲ. ಆಟದ ಮೇಲಿನ ಅಭಿಮಾನ, ಕಿರಿಯರ ಮೇಲಿನ ಮಮತೆಯಿಂದ ನಾನು ಇನ್ನೂ ತರಬೇತಿಯನ್ನು ಬಿಡದೆ ನಡೆಸಿದ್ದೇನೆ~ ಎನ್ನುತ್ತಾರೆ ಖತೀಬ್. ಅಜ್ಜನ ಕ್ರೀಡಾ ಪ್ರೀತಿಗೆ ಇದಕ್ಕಿಂತ ಬೇರೆ ಸಾಕ್ಷಿ ಯಾವುದೂ ಬೇಕಿಲ್ಲ.

ಚಿತ್ರ: ಬಿ.ಎಂ. ಕೇದಾರನಾಥ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.