ಕರಾರುಪತ್ರ ನೀಡದ ಬಿಬಿಎಂಪಿ

7
ಮಂಡೂರು ಗ್ರಾಮಸ್ಥರ ದೂರು

ಕರಾರುಪತ್ರ ನೀಡದ ಬಿಬಿಎಂಪಿ

Published:
Updated:

ಮಹದೇವಪುರ: `ಮಂಡೂರಿಗೆ ತಂದು ಕಸ ವಿಲೇವಾರಿ ಪ್ರಮಾಣವನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ ಸಂಪೂರ್ಣ ನಿಲ್ಲಿಸಲಾಗುವುದು. ಈಗಾಗಲೇ ಹಾಕಿರುವ ಕಸವನ್ನೂ ಸ್ಥಳಾಂತರಿಸುವ ಭರವಸೆ ಒಳಗೊಂಡ ಲಿಖಿತ ಕರಾರು ಪತ್ರವನ್ನು ಬಿಬಿಎಂಪಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಈವರೆಗೆ ಕರಾರು ಪತ್ರ ನೀಡದೆ ಗ್ರಾಮಸ್ಥರನ್ನು ವಂಚಿಸಿದ್ದಾರೆ' ಎಂದು ಮಂಡೂರು ಗ್ರಾಮಸ್ಥರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.ಪಂಚಾಯ್ತಿ ಆವರಣದಲ್ಲಿ ಮಾತನಾಡಿದ ಗ್ರಾಮಸ್ಥರು, `ಕಸ ಸುರಿಯುತ್ತಿರುವ ಬಗ್ಗೆ ದೂರು ನೀಡಲು ಹೋದ ನಮ್ಮನ್ನೆ ವಿನಾಕಾರಣ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ ಹಿಂಸೆ ನೀಡಲಾಯಿತು. ನಮ್ಮ ಸಮಸ್ಯೆ ಆಲಿಸಲು ಠಾಣೆಗೆ ಬಂದ ಸಚಿವ ಅರವಿಂದ ಲಿಂಬಾವಳಿಗೂ ಎರಡು ಗಂಟೆ ಕಾಲ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ ಹೊಸಕೋಟೆ ಪೊಲೀಸ್ ಠಾಣಾಧಿಕಾರಿ ಕಾಶಿ ವಿರುದ್ಧ ಗೃಹ ಸಚಿವರು ಸೂಕ್ತ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದರು.ಪಂಚಾಯಿತಿ ಸದಸ್ಯ ರಾಕೇಶ್‌ಗೌಡ ಮಾತನಾಡಿ, `ಬಿಬಿಎಂಪಿ ಅಧಿಕಾರಿಗಳು ಕರಾರು ಪತ್ರ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಧಕ್ಕೆಯಾಗದಂತೆ ಶಾಂತಿಯುತ ಹೋರಾಟ ನಡೆಸಿದ್ದೆವು. ಪೊಲೀಸರಿಗೆ ತಿಳಿಸಿಯೇ ಕಸದ ಲಾರಿಗಳನ್ನು ಗ್ರಾಮಕ್ಕೆ ಪ್ರವೇಶ ಮಾಡದಂತೆ ತಡೆದಿದ್ದೆವು. ಆದರೆ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಹೊಸಕೋಟೆ ಪೊಲೀಸ್ ಠಾಣಾಧಿಕಾರಿ ಕಾಶಿ, ಬಂದೂಕು ತೊರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾರೆ' ಎಂದು ಸ್ಥಳೀಯ ಗ್ರಾಮ ಆರೋಪಿಸಿದರು.ಸ್ಥಳೀಯ ನಿವಾಸಿಗಳಾದ ಗೋಪಾಲರಾವ್, ಶ್ರೀನಿವಾಸಗೌಡ  ಇತರರು ಮಾತನಾಡಿ, `ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸಾರ್ವಜನಿಕರು ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಸದ ರಾಶಿಯಿಂದ ಸುರಿಯುತ್ತಿರುವ, ವಿಷಕಾರಿ ನೀರು ಅಂತರ್ಜಲ ಸೇರಿ ಕೊಳವೆಬಾವಿಗಳಲ್ಲಿನ ನೀರು ಕಲುಷಿತಗೊಳ್ಳುತ್ತಿದೆ. ಗ್ರಾಮಸ್ಥರು ಈ ನೀರನ್ನು ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry