ಕರಾವಳಿಗೆ ರೈಲು: ಮಾರ್ಗ ಬದಲಿಸಲು ಆಗ್ರಹ

7

ಕರಾವಳಿಗೆ ರೈಲು: ಮಾರ್ಗ ಬದಲಿಸಲು ಆಗ್ರಹ

Published:
Updated:

ಉಡುಪಿ: `ಉದ್ದೇಶಿತ ಬೈಂದೂರು-ಕೊಲ್ಲೂರು-ಕಾರ್ಕಳ-ವೇಣೂರು ರೈಲು ಮಾರ್ಗ ನಿರ್ಮಾಣಕ್ಕೆ ಸಹಸ್ರಾರು ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಇರುವುದರಿಂದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಈ ಯೋಜನೆಗೆ ಅನುಮತಿ ಸಿಗುವುದಿಲ್ಲ~ ಎಂದು ಪ್ರತಿಪಾದಿಸಿರುವ ರೈಲ್ವೆ ಯಾತ್ರಿ ಸಂಘ, ಉದ್ದೇಶಿತ ಮಾರ್ಗ ಬದಲಿಸಲು ಆಗ್ರಹಿಸಿದೆ.ಕರಾವಳಿಗೆ ಹೊಸದಾಗಿ ರೈಲುಗಳನ್ನು ನೀಡುವ ಬಗ್ಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಇತ್ತೀಚೆಗೆ ರೈಲ್ವೆ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ್ದಾಗಿ ನೀಡಿರುವ ಹೇಳಿಕೆ ಕುರಿತು ಸಂಘದ ಅಧ್ಯಕ್ಷ ಆರ್.ಎಲ್.ಡಾಯಸ್ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.`ಪಡುಬಿದ್ರಿ-ಕಾರ್ಕಳ-ಉಜಿರೆ-ನೆಟ್ಟಣ ಮಾರ್ಗದ ನಕ್ಷೆಯನ್ನು ಸಂಘ ಈಗಾಗಲೇ ತಯಾರಿಸಿದೆ. ಅದರಂತೆ ಈ ಮಾರ್ಗ ಕೊಂಕಣ್ ರೈಲ್ವೆಯ ನಂದಿಕೂರು ನಿಲ್ದಾಣದಿಂದ ಆರಂಭಿಸಿ ಪಡುಬಿದ್ರಿ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ ಸಮಾನಾಂತರವಾಗಿ ಸಾಗಿ, ಕಾರ್ಕಳ-ಬಜಗೋಳಿ- ನಾರಾವಿ -ಅಳದಂಗಡಿಗಾಗಿ-ಉಜಿರೆ ತಲುಪುತ್ತದೆ.ಅಲ್ಲಿಂದ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣವನ್ನು ಜೋಡಿಸುತ್ತದೆ. ತನ್ಮೂಲಕ ಧರ್ಮಸ್ಥಳ- ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡುವ ಯಾತ್ರಿಗಳಿಗೆ ಪ್ರಯೋಜನ ಒದಗಿಸುತ್ತದೆ~ ಎಂದಿದ್ದಾರೆ.`ಉಜಿರೆಯಿಂದ ಈ ರೈಲನ್ನು ನಿಡ್ಗಲ್-ಮುಂಡಾಜೆ-ಚಾರ್ಮಾಡಿ-ನೆರಿಯ ಹೆಬ್ಬಾರ್ ಎಸ್ಟೇಟ್-ಯೇನಪೋಯ ಎಸ್ಟೇಟ್- ಮುಂದೆ ಇರುವ ಮಲೆಕುಡಿಯರ ವಸತಿಯಾಗಿ ಉತ್ತರ-ದಕ್ಷಿಣ ಪರ್ವತದ ಬುಡದ ಕಣಿವೆಯಲ್ಲಿ ಪೂರ್ವದ ಸೋಮನಕಾಡು ಪ್ರದೇಶಕ್ಕೆ ಹಾದು ಬರುತ್ತದೆ.ಅಲ್ಲಿ 2-3 ಸುರಂಗ ಮಾರ್ಗ ಮಾಡಿದರೆ, ಕೊಟ್ಟಿಗೆ ಹಾರಕ್ಕೆ ಸಂಪರ್ಕ ಕಲ್ಪಿಸಬಹುದು. ಅಲ್ಲಿಂದ ಬಣಕಲ್-ಹಳೆ ಮೂಡಿಗೆರೆ ಮೂಲಕ ಈಗ ನಿರ್ಮಾಣ ಹಂತದಲ್ಲಿರುವ ಕಡೂರು- ಚಿಕ್ಕಮಗಳೂರು- ಹಾಸನ ರೈಲ್ವೆ ಮಾರ್ಗಕ್ಕೆ ಚೀಕನಹಳ್ಳಿ ಅಥವಾ ಅರೇಹಳ್ಳಿಯಲ್ಲಿ ಜೋಡಿಸಬಹುದು. ಇದು ಕರಾವಳಿ-ಬೆಂಗಳೂರನ್ನು ಬೆಸೆಯುವ ಪರ್ಯಾಯ  ಮಾರ್ಗವಾಗಲಿದೆ. ಈ ಮಾರ್ಗದಲ್ಲಿ ಕಾಡುಗಳ ಸಂಖ್ಯೆ ಬಹಳ ಕಡಿಮೆ ಇದೆ~ ಎಂದು  ತಿಳಿಸಿದ್ದಾರೆ.`ಉದ್ದೇಶಿತ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ 2.65 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ  ಕಾರಣದಿಂದಾಗಿ ಕಳೆದ 12 ವರ್ಷಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಇದೇ ಪರಿಸ್ಥಿತಿ ಪ್ರಸ್ತಾವಿತ ಮಾರ್ಗಕ್ಕೂ ಬರುವ ಸಾಧ್ಯತೆ ಇದೆ. ಹೀಗಾಗಿ ಈ ಮಾರ್ಗ ಕೈಬಿಟ್ಟು ಬದಲಿಗೆ ನಂದಿಕೂರು- ಉಜಿರೆ - ಚಾರ್ಮಾಡಿ ಮಾರ್ಗಕ್ಕೆ ಸಮೀಕ್ಷೆ ನಡೆಸ ಬೇಕು~ ಎಂದು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry