ಶುಕ್ರವಾರ, ಫೆಬ್ರವರಿ 26, 2021
30 °C

ಕರಾವಳಿಯತ್ತ ವಿದ್ಯಾರ್ಥಿಗಳ ವಲಸೆ

ಪ್ರಜಾವಾಣಿ ವಾರ್ತೆ/ ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಕರಾವಳಿಯತ್ತ ವಿದ್ಯಾರ್ಥಿಗಳ ವಲಸೆ

ಬಾಗಲಕೋಟೆ: ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ರಾಜ್ಯದ ಕರಾವಳಿ ಜಿಲ್ಲೆಗಳತ್ತ ಶೈಕ್ಷಣಿಕ ವಲಸೆ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯತ್ತ ಪ್ರತಿನಿತ್ಯ ಸಂಚರಿಸುವ ನೂರಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಜಿಲ್ಲೆಯಿಂದ ಕೂಲಿಗಾಗಿ ಗುಳೇ ಹೋಗುವವರ ಜತೆ ಇದೀಗ ಶಿಕ್ಷಣ ಪಡೆಯಲು ವಲಸೆ ಹೋಗುವವರ ಸಂಖ್ಯೆಯೂ ಅಧಿಕವಾಗಿದೆ.

ಕರಾವಳಿ ಜನ ಬುದ್ದಿವಂತರು. ಆ ಪರಿಸರದಲ್ಲಿ ನಮ್ಮ ಮಕ್ಕಳು ಕಲಿತರೆ ಅವರಂತೆ ನಮ್ಮ ಮಕ್ಕಳು ಬುದ್ದಿವಂತರಾಗುತ್ತಾರೆ. ಭವಿಷ್ಯ ಚನ್ನಾಗಿರುತ್ತದೆ ಎಂಬ ಆಸೆಗೆ ಕಟ್ಟುಬಿದ್ದು, ನೆರೆಹೊರೆಯವರ ಮಾತು ಕೇಳಿ ಕರಾವಳಿಗೆ ಶಿಕ್ಷಣಕ್ಕಾಗಿ ವಲಸೆ ಹೋಗುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ.ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಬೇಕು. ಸಿಇಟಿಯಲ್ಲಿ ರ್‍ಯಾಂಕ್‌ ಗಳಿಸಬೇಕು. ಆ ಮೂಲಕ ವೈದ್ಯಕೀಯ, ಎಂಜನಿ­ಯರಿಂಗ್ ಇನ್ನಿತರ ವೃತ್ತಿಪರ ಕೋರ್ಸ್‌ಗಳಿಗೆ ಸೇರ್ಪಡೆಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲೆಯ ಸ್ಥಿತಿವಂತರು ತಮ್ಮ ಮಕ್ಕಳನ್ನು ಕರಾವಳಿಯತ್ತ ಕಳುಹಿಸಿಕೊಡುತ್ತಿ­ರುವುದು ಜಿಲ್ಲೆಯಲ್ಲಿ ಪ್ರತಿಷ್ಠೆಯ ವಿಷಯವಾಗಿದೆ.ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಮಂಗಳೂರಿನ ಏಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆ ಮತ್ತಿತರರ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿ ವರ್ಷ ದಾಖಲಾಗುವ ಮೂಲಕ ಗರಿಷ್ಠ ಅಂಕಗಳನ್ನು ಗಳಿಸಿ ಸಿಇಟಿಯಲ್ಲೂ ಉತ್ತಮ ರ್‍ಯಾಂಕ್‌ ಗಳಿಸುವ ಮೂಲಕ ವೈದ್ಯಕೀಯ, ಎಂಜಿನಿಯರಿಂಗ್‌, ಡೆಂಟಲ್‌ ಮತ್ತಿತರರ ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರುವ ಉದಾಹರಣೆಗಳಿವೆ.ಈ ನಡುವೆ ಶೋಷಣೆ: ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಬೇಕು ಅದರಲ್ಲೂ ಹೆಚ್ಚಿನ ಅಂಕ ಗಳಿಸುವ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಸೇರ್ಪಡೆಯಾಗಬೇಕು ಎಂಬ ಉದ್ದೇಶದಿಂದ ಕರಾವಳಿಯತ್ತ ವಲಸೆ ಹೋಗುವ ಜಿಲ್ಲೆಯ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಲ್ಲಿಯ ಶಿಕ್ಷಣ ಸಂಸ್ಥೆಗಳು ವಿವಿಧ ಶುಲ್ಕದ ನೆಪದಲ್ಲಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿವೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ ಶಿಸ್ತಿನ ನಿಯಮಗಳನ್ನು ಹೇರಿ ಮಾನಸಿಕ ಹಿಂಸೆ ನೀಡುತ್ತಿರುವ ಪ್ರಕರಣಗಳು  ಬೆಳಕಿಗೆ ಬಂದಿವೆ.ಉತ್ತರ ಕರ್ನಾಟಕ ಭಾಗದಲ್ಲಿ ಹತ್ತಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲಾ ಕಾಲೇಜುಗಳು ಇದ್ದರೂ ಜಿಲ್ಲೆಯ ಸ್ಥಿತಿವಂತರ ಕಣ್ಣಿಗೆ ಬೀಳುತ್ತಿಲ್ಲ. ದೂರದ ಕರಾವಳಿ ಅವರನ್ನು ಕೈಬೀಸಿ ಆಕರ್ಷಿಸುತ್ತಿದೆ. ಗುಣಮಟ್ಟದ ಶಿಕ್ಷಣ ಎಂಬ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಶೈಕ್ಷಣಿಕ ಮೋಸ: ‘ಎಸ್‌ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಗಳಿಗೆ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ₨ 1 ಲಕ್ಷ ರೂಪಾಯಿ ಶುಲ್ಕ ನೀಡಿ ಸೇರ್ಪಡೆ ಮಾಡಿದೆ. ಪ್ರತಿ ತಿಂಗಳು ಊಟ, ವಸತಿಗೆ  ₨ 5 ಸಾವಿರ ಹೆಚ್ಚುವರಿಯಾಗಿ ನೀಡಬೇಕಾಯಿತು. ಒಂದು ದಿನವೂ ರಜೆ ಇರುವುದಿಲ್ಲ. ವರ್ಷಪೂರ್ತಿ ಓದು ಓದು ಓದು. ಸ್ವಲ್ಪವೂ ಬಿಡುವಿಲ್ಲ. ಮನೆಯಲ್ಲಿ ಯಾವುದಾರರು ಶುಭ ಕಾರ್ಯ ನಡೆದರೂ ಕಳುಹಿಸುವುದಿಲ್ಲ. ಸಂಬಂಧಿಕರು ಸತ್ತರೂ ಕಳುಹಿಸುವುದಿಲ್ಲ. ತರಗತಿಗೆ ವಿಳಂಬವಾಗಿ ಹೋದರೆ ₨ 500 ದಂಡ ಕಟ್ಟಬೇಕು. ಸಂಸ್ಥೆಯ ವಿಚಾರಣೆಗೆ ಒಳಗಾಗಬೇಕು. ಮಕ್ಕಳೊಂದಿಗೆ ಬೆರೆಯಲು ಪೋಷಕರಿಗೆ ಅವಕಾಶ ನೀಡು­ವುದಿಲ್ಲ. ಕಾಲೇಜಿಗೆ ಸೇರ್ಪಡೆಗೂ ಮೊದಲು ಆಕರ್ಷಕ ಎನಿಸಿತು. ಇದೀಗ ಯಾಕಾದರು ಮಗಳನ್ನು ಅಲ್ಲಿಗೆ ಸೇರ್ಪಡೆ ಮಾಡಿದೆ ಎನಿಸುತ್ತದೆ’ ಎಂದು ಬಾಗಲಕೋಟೆಯ ಸಂಗಮೇಶ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.ಕಾಲೇಜಿನ ನಿಮಯ ಮತ್ತು ಶುಲ್ಕದ ಬಗ್ಗೆ ನಿಮಗೆ ಮೊದಲು ಗಮನಕ್ಕೆ ಬಂದಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ವಿದ್ಯಾರ್ಥಿಯ ಭವಿಷ್ಯದ ಬಗ್ಗೆ ಬಣ್ಣ ಕಟ್ಟಿ ಹೇಳಿದಾಗ ನಮಗೆ ಖುಷಿಯಾಯಿತು. ಅಲ್ಲದೇ, ಇದೇ ಸಂಸ್ಥೆಯಲ್ಲಿ ಓದಿ ಇಂದು ವೈದ್ಯಕೀಯ ಕೋರ್ಸ್‌ ಕಲಿಯುತ್ತಿರುವ ಸ್ನೇಹಿತರ ಮಗಳ ಸಾಧನೆ ನೋಡಿ ನಾನೂ ಅಲ್ಲಿಯೇ ಸೇರಿಸಬೇಕು ಎಂದು ತೀರ್ಮಾನಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಭವಿಷ್ಯದ ಜೀವನ ಚೆನ್ನಾಗಿರುತ್ತದೆ ಎಂಬ ಉದ್ದೇಶ ಹೊಂದಿದ್ದೆವು. ಆ ಮೇಲೆ ತಿಳಿಯಿತು. ಈ ಶಿಕ್ಷಣ ಸಂಸ್ಥೆ ನೀಡುತ್ತಿರುವುದು ಶಿಕ್ಷಣವಲ್ಲ, ಶಿಕ್ಷೆ ಎಂದು. ದಿನಪೂರ್ತಿ, ವರ್ಷ ಪೂರ್ತಿ ಕೊಠಡಿಯೊಳಗೆ ಕೂಡಿಹಾಕಿ ಕಠಿಣ ಅಭ್ಯಾಸ ಮಾಡಿಸಿ ಅಂಕ ಗಳಿಸುವಂತೆ ಮಾಡುತ್ತಾರೆ. ಪುಸಕ್ತ ಹೊರತು ಬೇರೇನನ್ನೂ ಮಕ್ಕಳಿಗೆ ಕಳುಹಿಸಿಕೊಂಡುವುದಿಲ್ಲ’ ಎಂದು ದೂರಿದರು.‘ನಮ್ಮ ಮಕ್ಕಳು ಬೆಳೆದ ವಾತಾವರಣಕ್ಕೂ ಕರಾವಳಿಯ ವಾತಾವರಣಕ್ಕೂ ಮತ್ತು ಅಲ್ಲಿಯ ಊಟ, ಭಾಷೆಗೂ ಭಾರಿ ವ್ಯತ್ಯಾಸ ಇರುವು­ದರಿಂದ ಮಕ್ಕಳು ಹಿಂಸೆ ಪಡುವಂತಾಗಿದೆ. ಈ ಬಗ್ಗೆ ಮೊದಲೇ ಅರಿವಿದ್ದರೆ ಖಂಡಿತಾ ಅಲ್ಲಿಗೆ ಮಗಳನ್ನು ಕಳುಹಿಸುತ್ತಿರಲಿಲ್ಲ’ ಎಂದು ಬೇಷರ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.