ಭಾನುವಾರ, ಮೇ 9, 2021
26 °C

ಕರಾವಳಿಯಲ್ಲಿ ಜೋರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಶನಿವಾರ ಮಳೆ ರಭಸದಿಂದ ಸುರಿದಿದೆ. ಮಲೆನಾಡು ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ.ಮಂಗಳೂರು ನಗರದ ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿದೆ.ಅಳಕೆ ಗುಜರಾತಿ ಶಾಲೆ ಸಮೀಪ, ಅರೆಕೆರೆಬೈಲ್, ಅತ್ತಾವರಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತು. ಕೊಟ್ಟಾರ, ಕೊಡಿಯಾಲ್‌ಬೈಲ್, ಹಳೆ ಬಂದರು ಪ್ರದೇಶ, ಫಳ್ನೀರ್, ಜಪ್ಪಿನಮೊಗರು, ಕಣ್ಣೂರು ಮೊದಲಾದ ಕಡೆಗಳಲ್ಲಿ ನೀರು ರಸ್ತೆಯಲ್ಲಿ ನಿಂತು ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.ಕಣ್ಣೂರಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ರಸ್ತೆ ಬದಿಯಲ್ಲಿ ಜನರ ಓಡಾಟವೂ ಕಷ್ಟವಾಯಿತು. ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೆಲ್, ನಂತೂರು ವೃತ್ತ, ಕಂಕನಾಡಿ ಸಹಿತ ಹಲವೆಡೆ ಸಂಚಾರ ದಟ್ಟಣೆಯೂ ಉಂಟಾಯಿತು.ಮಂಗಳೂರಿನಲ್ಲಿ 31.3 ಮಿ.ಮೀ., ಬಂಟ್ವಾಳದಲ್ಲಿ 19.2, ಪುತ್ತೂರಿನಲ್ಲಿ 28.1, ಬೆಳ್ತಂಗಡಿಯಲ್ಲಿ 9.4, ಸುಳ್ಯದಲ್ಲಿ 16.4, ಕಡಬದಲ್ಲಿ 50.1 ಹಾಗೂ ಮೂಡುಬಿದಿರೆಯಲ್ಲಿ 33.2 ಮಿ.ಮೀ. ಮಳೆಯಾಗಿದೆ.

ದೋಣಿಗಳು ದಡಕ್ಕೆ: ಮುಂಗಾರು ಮಳೆಯ ಅಬ್ಬರದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಳ್ಳತೊಡಗಿದ್ದು, ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ದಡ ಸೇರತೊಡಗಿವೆ. ಹಳೆ ಬಂದರು ಪ್ರದೇಶದಲ್ಲಿ ಶನಿವಾರ ಹೀಗೆ ಬಂದ ನೂರಾರು ದೋಣಿಗಳು ದಡದಲ್ಲಿ ಜಾಗ ಮಾಡಿಕೊಂಡು ನಿಲ್ಲುತ್ತಿದ್ದ ದೃಶ್ಯ ಕಂಡುಬಂತು.ಉಡುಪಿ ಜಿಲ್ಲೆಯಲ್ಲಿ ಸಹ ಬಿಟ್ಟು ಬಿಟ್ಟು ಬಿರುಸಿನಿಂದಲೇ ಮಳೆ ಸುರಿಯತೊಡಗಿದ್ದು, ಸಂಜೆ ವೇಳೆಗೆ ಬಿರುಸಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸಹ ಮಳೆ ತೀವ್ರಗೊಳ್ಳತೊಡಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ತುಂತುರು ಮಳೆಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ 34 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಾದ್ಯಂತ ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕೆಲ ಪ್ರದೇಶಗಳಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಆರಂಭವಾಗಿದೆ.ದಾವಣಗೆರೆ ನಗರದಲ್ಲಿ ಕೆಲಕಾಲ ತುಂತುರು ಮಳೆಯಾಯಿತು.ಜಿಲ್ಲೆಯ ಉಳಿದೆಡೆ ಮೋಡ ಕವಿದ ವಾತಾವರಣ ಇತ್ತು. ಧಾರವಾಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ  ಮಳೆಯಾಗಿದೆ.ಭಟ್ಕಳ, ಕಾರವಾರ ಮತ್ತಿತರ ಕಡೆ ಭಾರಿ ಮಳೆಯಾಗಿದೆ. ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.ಕಾರಿನ ಮೇಲೆ ಉರುಳಿ ಬಿದ್ದ ಮರ: ಕಾರವಾರದಲ್ಲಿ ಸಂಜೆ 5.40ರ ಸುಮಾರಿಗೆ ಮಳೆಯೊಂದಿಗೆ ಬಿರುಗಾಳಿ ಬೀಸಿದ್ದರಿಂದ ಮರವೊಂದು ಉರುಳಿ ಕಾರಿನ ಮೇಲೆ ಬಿತ್ತು. ನಗರಸಭೆ ಪೌರಕಾರ್ಮಿಕರು ಸ್ಥಳಕ್ಕೆ ಬಂದು ಮರದ ಟೊಂಗೆಗಳನ್ನು ಕತ್ತರಿಸಿ ತೆರವುಗೊಳಿಸಿದರು.ಕೊಡಗಿನಲ್ಲಿ ಮುಂಗಾರು ಚುರುಕು:  ಕೊಡಗು ಜಿಲ್ಲೆಯಾದ್ಯಂತ ಶನಿವಾರ ಮುಂಗಾರು ಚುರುಕುಗೊಂಡಿದೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಶ್ರೀಮಂಗಲ, ಅಮ್ಮತ್ತಿ, ಪೊನ್ನಂಪೇಟೆ, ಶನಿವಾರಸಂತೆ, ಕುಶಾಲನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮ, ಹಾರಂಗಿ ನದಿ, ಚಿಕ್ಲಿ ಹೊಳೆ, ಕಾವೇರಿ ನದಿ ತೀರ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾದಂತೆ ಹಾರಂಗಿ ಜಲಾಶಯದ ನೀರಿನಮಟ್ಟವೂ ಹೆಚ್ಚುತ್ತಿದೆ.ಗಾಳಿಬೀಡು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನಗರಕ್ಕೆ ನೀರು ಪೂರೈಸುವ ಕೂಟು ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಪ್ರವಾಸಿ ತಾಣ ಅಬ್ಬಿಫಾಲ್ಸ್ ನಲ್ಲಿಯೂ ನೀರು ಬೋರ್ಗರೆಯುತ್ತಿದೆ. ಮುಂಗಾರು ಚುರುಕುಗೊಳ್ಳುತ್ತಿರುವುದರಿಂದ ಬತ್ತಿಹೊಗಿದ್ದ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ.ಮಳೆಯಿಂದಾಗಿ ಕೆಲವು ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೊರತುಪಡಿಸಿದಂತೆ ಯಾವುದೇ ಹಾನಿ ಸಂಭವಿಸಿರುವ ವರದಿ ಆಗಿಲ್ಲ.ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯ ಅವಧಿಯಲ್ಲಿ 9.47ಮಿ.ಮೀ. ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.69 ಮಿ.ಮೀ. ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 245.76 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 224.94 ಮಿ.ಮೀ. ಮಳೆ ದಾಖಲಾಗಿತ್ತು.ಹಾರಂಗಿ ನೀರಿನಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನಮಟ್ಟ 2801.41 ಅಡಿ. ಇಂದಿನ ನೀರಿನ ಒಳಹರಿವು 102 ಕ್ಯೂಸೆಕ್ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.