ಕರಾವಳಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ

7

ಕರಾವಳಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ

Published:
Updated:

ಬೆಂಗಳೂರು: ‘ದೇಶದ ಭದ್ರತೆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ವಿಶೇಷ ನಿಗಾ ಇಡಲು ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರವೇ ಹಣಕಾಸಿನ ನೆರವು ನೀಡಲಿದೆ’ ಎಂದು ಗೃಹ ಸಚಿವ ಆರ್.ಅಶೋಕ್ ಮಂಗಳವಾರ ತಿಳಿಸಿದರು.ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಭೆಯಲ್ಲಿ ಈ ಸಲಹೆ ನೀಡಿದ್ದು, ಇದಕ್ಕೆ ರಾಜ್ಯ ಸರ್ಕಾರ ಪೂರ್ವ ತಯಾರಿ ನಡೆಸುತ್ತಿದೆ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.ರಾಜ್ಯದಲ್ಲಿ 320 ಕಿ.ಮೀ ಉದ್ದದ ಕರಾವಳಿ ತೀರ ಪ್ರದೇಶ ಇದ್ದು, ಈ ಮೂಲಕ ಉಗ್ರರು ನುಸುಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ನಿಗಾ ಇಡುವ ಉದ್ದೇಶದಿಂದ ಪ್ರತ್ಯೇಕ ಠಾಣೆಗಳನ್ನೇ ನಿರ್ಮಿಸಲು ಸಲಹೆ ನೀಡಲಾಗಿದೆ. ಎಲ್ಲಿ ಮತ್ತು ಎಷ್ಟು ಠಾಣೆಗಳನ್ನು ಸ್ಥಾಪಿಸಬೇಕು ಎನ್ನುವುದನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದರು.ಮೀನುಗಾರರ ಜತೆಗೂ ಈ ವಿಶೇಷ ಪೊಲೀಸರು ಮಾಹಿತಿ ಸಂಗ್ರಹಿಸಿಕೊಂಡು, ಅಪರಿಚಿತರು ಓಡಾಡದಂತೆ ನಿಗಾವಹಿಸಲಿದ್ದಾರೆ. ಈ ಮೂಲಕ  ಸಮುದ್ರದ ಮೂಲಕ ಉಗ್ರರು ದೇಶದೊಳಕ್ಕೆ ನುಸುಳುವುದನ್ನು ತಡೆಯಲಾಗುವುದು ಎಂದು ವಿವರಿಸಿದರು.ನಕ್ಸಲ್ ಪೀಡಿತ ರಾಜ್ಯಗಳ ಪಟ್ಟಿಯಿಂದ ಕರ್ನಾಟಕವನ್ನು ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಸಮಸ್ಯೆ ಇರುವ ರಾಜ್ಯಗಳಿಗೆ ಅನುದಾನ ನೀಡುವ ಹಾಗೆ ರಾಜ್ಯಕ್ಕೂ ಹಣಕಾಸಿನ ನೆರವು ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬಹುದು. ಶಸ್ತ್ರಾಸ್ತ್ರಗಳ ಖರೀದಿಗೂ ನೆರವಾಗಬೇಕು ಎಂದು ಹೇಳಿದರು.ಡಿಜಿಪಿ ನೇಮಕ: ಯುಪಿಎಸ್‌ಸಿ ಕೊಡುವ ಪಟ್ಟಿ ಪ್ರಕಾರ ಡಿಜಿಪಿ ನೇಮಕ ಮಾಡಬೇಕೆನ್ನುವುದಕ್ಕೆ ದೆಹಲಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ ಡಿಜಿಪಿ ನೇಮಕದ ವಿಚಾರವನ್ನು ಆಯಾ ರಾಜ್ಯಗಳಿಗೇ ವಹಿಸಲು ಸದ್ಯದಲ್ಲೇ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದೆಂದು ಕೇಂದ್ರ ಸ್ಪಷ್ಟನೆ ನೀಡಿದೆ ಎಂದರು.180 ಕೋಟಿಗೆ ಬೇಡಿಕೆ: ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ರೂ 80 ಕೋಟಿ ನೀಡಿದ್ದು, ಅದನ್ನು ಈ ವರ್ಷ 180 ಕೋಟಿ ರೂಪಾಯಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾಗಿಯೂ ಹೇಳಿದರು. ತನಿಖೆಗೆ ಪೊಲೀಸರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಪ್ರತಿ ಠಾಣೆಗೂ ತಲಾ 15 ಸಾವಿರ ರೂಪಾಯಿ ನೀಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ವ್ಯವಸ್ಥೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಭರವಸೆ ನೀಡಿತು ಎಂದರು.ಶಾಸಕರಿಗೂ ಭದ್ರತೆ: ರಾಜ್ಯದ ಶೇ 90ರಷ್ಟು ಶಾಸಕರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ಹೇಳಿದ ಅವರು ಅನಗತ್ಯವಾಗಿ ಪೊಲೀಸ್ ಭದ್ರತೆ ಪಡೆದವರ ಬಗ್ಗೆ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.‘ಶಾಸಕರಿಗೆ ಬೆದ್ದರಿಕೆ ಇದ್ದರೆ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ನನ್ನ ಪ್ರಕಾರ ಬಹುತೇಕ ಎಲ್ಲ ಶಾಸಕರೂ ಪೊಲೀಸ್ ರಕ್ಷಣೆ ಪಡೆದಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry