ಕರಾವಳಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್‌ಗೆ ಕ್ಷಣಗಣನೆ...

7

ಕರಾವಳಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್‌ಗೆ ಕ್ಷಣಗಣನೆ...

Published:
Updated:
ಕರಾವಳಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್‌ಗೆ ಕ್ಷಣಗಣನೆ...

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥ್ಲೆಟಿಕ್ಸ್‌ಗೆ ನೀಡಿದ ಕೊಡುಗೆ ಗಣನೀಯ. ಹಲವರು ವಿವಿಧ ಹಂತಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಆದರೆ ಮಂಗಳೂರಿನಲ್ಲಾಗಲಿ, ಉಡುಪಿಯಲ್ಲಾಗಲಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ಇರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಸರ್ಕಾರ ಕೊನೆಗೂ ಮನಸ್ಸು ಮಾಡಿತು. ಈಗ ರಾಜ್ಯದ ಕರಾವಳಿಯ ಮೊದಲ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಂಗಳೂರಿನಲ್ಲಿ ಅಂತಿಮ ಹಂತದಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದಲ್ಲಿ ತಿಂಗಳ ಒಳಗೇ (400 ಮೀಟರ್) ಟ್ರ್ಯಾಕ್ ನಿರ್ಮಾಣ ಪೂರ್ಣಗೊಳ್ಳುವುದು ಖಚಿತ.

ಜರ್ಮನಿಯಿಂದ ಆಮದಾದ ಸಿಂಥೆಟಿಕ್ ಹಾಸುವ ಕೆಲಸಕ್ಕೆ ಕ್ಷಣಗಣನೆ ನಡೆದಿದೆ. ಇಂಗ್ಲೆಂಡ್‌ನಿಂದ ಬಂದಿರುವ  ಮೂವರು ತಜ್ಞರು ಈ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅಡಿಗಲ್ಲು, ವಿಘ್ನ...: ಬಿ.ಎಸ್.ಯಡಿಯೂರಪ್ಪ  ಅವರು ಮುಖ್ಯಮಂತ್ರಿಯಾಗಿದ್ದಾಗ- 2010ರ ಆಗಸ್ಟ್ 23ರಂದು ಮಂಗಳ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ನಂತರವೂ ವಿಘ್ನಗಳು ಬಾಧಿಸಿದವು. ಟೆಂಡರ್ ಪ್ರಕ್ರಿಯೆ ಎರಡು ಬಾರಿ ಮುಂದಕ್ಕೆ ಹೋಯಿತು. ಟೆಂಡರ್‌ನಲ್ಲಿ ಗುತ್ತಿಗೆ ಪಡೆದ ಕಂಪೆನಿಯೊಂದು ಕಾಮನ್‌ವೆಲ್ತ್ ಕ್ರೀಡೆಗಳ ಹಗರಣದ ತನಿಖೆ ನಡೆಸಿದ ವಿ.ಕೆ.ಶುಂಗ್ಲು ಸಮಿತಿಯ ವರದಿಯಲ್ಲಿ ಉಲ್ಲೇಖಗೊಂಡಿತ್ತು. ಹೀಗಾಗಿ ಆ (ಜುಬಿಲಿ ಸ್ಪೋರ್ಟ್ಸ್ ಟೆಕ್ನಾಲಜಿ) ಕಂಪೆನಿಯನ್ನು ಕೈಬಿಡಲಾಯಿತು.

ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ದೆಹಲಿ ಮೂಲದ ಸಿನ್ಕಾಟ್ಸ್ ಕಂಪೆನಿಗೆ ಗುತ್ತಿಗೆ ದೊರೆಯಿತು. ಆದರೆ  ಕೆಲಸ ಮಾತ್ರ ಶುರುವಾಗಲಿಲ್ಲ!. 2012ರ ಜನವರಿ ಎರಡನೇ ವಾರ ರಾಷ್ಟ್ರೀಯ ಯುವಜನೋತ್ಸವಕ್ಕೆ ಮಂಗಳ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಯಿತು. ಹೀಗಾಗಿ ಕೆಲಸ ಮತ್ತೆ ಮುಂದಕ್ಕೆ ಹೋಯಿತು. ಕೊನೆಗೂ 2012ರ ಜನವರಿ ಕೊನೆಯ ವಾರ ಟ್ರ್ಯಾಕ್ ನಿರ್ಮಾಣದ ಕಾಮಗಾರಿಗೆ  ಚಾಲನೆ ದೊರೆಯಿತು.

ಒಪ್ಪಂದದ ಪ್ರಕಾರ 120 ದಿನಗಳ ಒಳಗೆ, ಅಂದರೆ ನಾಲ್ಕು ತಿಂಗಳ ಒಳಗೆ ಈ ಕೆಲಸ ಪೂರ್ಣಗೊಳ್ಳಬೇಕಿತ್ತು. ಮಳೆಗಾಲಕ್ಕೆ ಮೊದಲೇ ಮುಗಿಯಬೇಕಾದ ಕಾಮಗಾರಿ ಆಮೆಗತಿಯಲ್ಲಿ ಸಾಗಿತು. ಹೀಗಾಗಿ ನಿಗದಿ ವೇಳೆಗೆ ಶೇ 50ರಷ್ಟು ಕೆಲಸವೂ ಮುಗಿದಿರಲಿಲ್ಲ. ತಾಂತ್ರಿಕ ದೋಷಗಳಿಂದ ಮಾಡಿದ ಕೆಲಸವನ್ನು ಒಂದು ಕಡೆ ಎರಡು ಬಾರಿ ಮಾಡಲಾಯಿತು.

ಕಾಮಗಾರಿ ಆರಂಭವಾಗುತ್ತಲೇ, ಕ್ರೀಡಾಪ್ರೇಮಿಗಳ, ಕ್ರೀಡಾಂಗಣ ಸಮಿತಿಯಲ್ಲಿದ್ದ ಹಲವರ ಒತ್ತಾಯದ ಮೇರೆಗೆ ಮೂಲ ನಕ್ಷೆಯಲ್ಲಿದ್ದ ಟ್ರ್ಯಾಕ್‌ನ ಒಳಗೆ ಒಂದು `ಡಿ' ಬದಲು ಎರಡು `ಡಿ' ಆಕಾರದ ಟ್ರ್ಯಾಕ್‌ಗೆ ಸಮ್ಮತಿ ದೊರೆಯಿತು. ಎಸೆತ ಮತ್ತು ಜಂಪ್ ಸ್ಪರ್ಧೆಗಳು `ಡಿ' ಆಕಾರದ ಟ್ರ್ಯಾಕ್‌ನ ಒಳಭಾಗದಲ್ಲಿ ನಡೆಯುತ್ತವೆ. ಸಿಂಥೆಟಿಕ್ ಟ್ರ್ಯಾಕ್‌ನ ಅಂದಾಜು ವೆಚ್ಚ 3.60 ಕೋಟಿ ರೂ.ಗಳಾಗಿತ್ತು. ಎರಡನೇ `ಡಿ' ಕೆಲಸಕ್ಕಾಗಿ ಹೆಚ್ಚುವರಿಯಾಗಿ ಮತ್ತೆ 60 ಲಕ್ಷ ರೂಪಾಯಿ ಸೇರ್ಪಡೆಗೊಂಡಿತು.

ಕಳೆದ ನವೆಂಬರ್‌ನಲ್ಲಿ ಕೆಲಸ ಮತ್ತೆ ಚುರುಕು ಪಡೆಯಿತು. ಒಳಚರಂಡಿ ಕೆಲಸ ಮುಗಿಸಲಾಯಿತು. ಟ್ರ್ಯಾಕ್‌ನ ಹೊರ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ಜರ್ಮನಿಯಿಂದ ಕಳೆದ ವರ್ಷದ ಮಧ್ಯದಲ್ಲೇ ಸಿಂಥೆಟಿಕ್ ಹಾಸು ಇಲ್ಲಿಗೆ ತಲುಪಿತ್ತು. ಇತರ ಅಗತ್ಯ ವಸ್ತುಗಳೂ ತಲುಪಿದ್ದವು. ಈಗ ತಜ್ಞರ ಉಸ್ತುವಾರಿಯಲ್ಲಿ ಅಂತಿಮ ಹಂತದ ಕೆಲಸ ಆರಂಭವಾಗಿದೆ.

ಸಮಸ್ಯೆ: ಕಳೆದ ವರ್ಷದ ಮಾರ್ಚ್‌ನಿಂದ ಅಥ್ಲೀಟುಗಳಿಗೆ ಕ್ರೀಡಾಂಗಣ ಬಂದ್ ಆಯಿತು. ಮುಂಜಾವಿನ ಮತ್ತು ಸಂಜೆಯ ನಡಿಗೆಗೆ ಈ ಕ್ರೀಡಾಂಗಣ ಆಶ್ರಯಿಸಿದ್ದವರು `ಬೀದಿ ಪಾಲು' ಆದರು. ಅಥ್ಲೀಟುಗಳೂ ಜಾಗ ಖಾಲಿ ಮಾಡಬೇಕಾಯಿತು. `ವಾಕಿಂಗ್' ಬರುವವರು ಕದ್ರಿ ಪಾರ್ಕ್, ಮಣ್ಣಗುಡ್ಡೆಯ ಪಾರ್ಕ್ ಅವಲಂಬಿಸುವುದು ಅನಿವಾರ್ಯವಾಯಿತು. ಕ್ರೀಡಾಂಗಣದ ಮಗ್ಗುಲಲ್ಲೇ ಇರುವ ಕ್ರೀಡಾ ಹಾಸ್ಟೆಲ್‌ನ 28 ಮಂದಿ ಮಕ್ಕಳು ಕೆಲವು ದಿನ ಕರಾವಳಿ ಉತ್ಸವ ಮೈದಾನ ಮತ್ತು ಕೆಲವು ದಿನ ಉರ್ವ ಮೈದಾನ ಪರಿಸರದಲ್ಲಿ ಅಭ್ಯಾಸ ನಡೆಸುತ್ತ ಬಂದಿದ್ದಾರೆ. ದಸರಾ, ಪೈಕಾ, ಗ್ರಾಮೀಣ, ಮಹಿಳಾ ಕ್ರೀಡಾಕೂಟಗಳು ಪಣಂಬೂರಿನ ಎನ್‌ಐಟಿಕೆ ಮೈದಾನದಲ್ಲಿ ನಡೆದವು.

`ಗುಣಮಟ್ಟದ ಎಂಟು ಲೇನ್‌ನ ಟ್ರ್ಯಾಕ್, ಎರಡು `ಡಿ' ಸೌಲಭ್ಯ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಅಥ್ಲೀಟುಗಳು ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ' ಎಂದು ಸಮಾಧಾನದ ಮಾತು ಹೇಳುತ್ತಾರೆ ಹಿರಿಯ ಅಥ್ಲೀಟ್ ಆನಂದ್ ಶೆಟ್ಟಿ.

`ವಾಕಿಂಗ್' ಪಥ: ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಕ್ರೀಡಾಂಗಣದ ಹೊರ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸಿ 600 ಮೀಟರ್ ಉದ್ದದ `ವಾಕ್ ಪಥ' ನಿರ್ಮಿಸುವ ಯೋಚನೆಯಿದ್ದರೂ ಸದ್ಯಕ್ಕೆ ಆ ಕೆಲಸ ಆರಂಭವಾಗಿಲ್ಲ. ಪೆವಿಲಿಯನ್ ಎದುರಿನಿಂದ ಒಳಾಂಗಣ ಕ್ರೀಡಾಂಗಣದ ಹಿಂಭಾಗದವರೆಗೆ ಈ ವಾಕ್ ಪಥ ವಿಸ್ತರಿಸಲು ಅವಕಾಶವಿದೆ.

ಅಥ್ಲೀಟುಗಳಿಗೆ ಕೊನೆಗೂ ನ್ಯಾಯೋಚಿತ ಸೌಲಭ್ಯ ಒದಗಿದೆ. ಎಂದೊ ಆಗಬೇಕಾಗಿದ್ದು ಈಗ ಆಗುತ್ತಿರುವುದು  ಸಮಾಧಾನ ತಂದಿದೆ. ನಿರ್ಮಾಣದಂತೆ ನಿರ್ವಹಣೆಯ ಕಡೆಗೂ ಗಮನ ನೀಡುವುದು ಅತ್ಯವಶ್ಯ. ಸಿಂಥೆಟಿಕ್ ಟ್ರ್ಯಾಕ್ ಅಭ್ಯಾಸಕ್ಕೆ ಬೆಂಗಳೂರಿಗೆ ಹೋಗಬೇಕಾಗಿದ್ದ ಕರಾವಳಿಯ ಅಥ್ಲೀಟುಗಳು ಇನ್ನು ಮಂಗಳೂರಿನಲ್ಲೇ ಅಭ್ಯಾಸ ನಡೆಸಲು ಅವಕಾಶ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry