ಕರಾವಳಿಯಲ್ಲೂ ಗರಿಗೆದರಿದ ಆಮಿಷ ರಾಜಕಾರಣ

7

ಕರಾವಳಿಯಲ್ಲೂ ಗರಿಗೆದರಿದ ಆಮಿಷ ರಾಜಕಾರಣ

Published:
Updated:

ಮಂಗಳೂರು: ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಹಣ, ಮದ್ಯ ಹಂಚುವುದು, ಔತಣ ಕೂಟ ಏರ್ಪಡಿಸುವ ಮೂಲಕ ಮತದಾರರನ್ನು ಸೆಳೆಯುವ ಯತ್ನಗಳು ನಡೆಯುತ್ತಿದ್ದರೂ, ಚುನಾವಣೆ ಘೋಷಣೆ ಆಗುವ ಮುನ್ನವೇ ಮತದಾರರನ್ನು `ಋಣ~ ಬಾಧೆಯಲ್ಲಿ ಸಿಲುಕಿಸುತ್ತಿದ್ದ ಪ್ರಕರಣಗಳು ತೀರಾ ಕಡಿಮೆ ಇದ್ದವು. ಆದರೆ, ಈ ಬಾರಿ ಚುನಾವಣೆ ಘೋಷಣೆಗೆ ಮುನ್ನವೇ ಮತದಾರರಿಗೆ ಆಮಿಷ ಒಡ್ಡುವ ಪ್ರಸಂಗಗಳು ಕರಾವಳಿಯಲ್ಲೂ ಕಂಡುಬಂದಿವೆ.ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರಲ್ಲಿ ಕಳೆದ ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನೇ ಮತದಾರರನ್ನು ಋಣದಲ್ಲಿ ಸಿಲುಕಿಸುವ ಯತ್ನಕ್ಕೆ ಬಳಸಿಕೊಳ್ಳಲಾಯಿತು. ಜನರಿಗೆ ನೀರು ಪೂರೈಸುವ ವಿಷಯದಲ್ಲಿ ಹಾಲಿ ಶಾಸಕ ಹಾಗೂ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಿಬ್ಬರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತು!ಇಲ್ಲಿನ ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ಓಲೈಸುವುದು ಇಲ್ಲಿನ ಧಾರ್ಮಿಕ ಸಂಘಟನೆಗಳಿಗೆ, ಕ್ರಿಕೆಟ್, ವಾಲಿಬಾಲ್ ಟೂರ್ನಿಗಳನ್ನು ಸಂಘಟಿಸುವ ಯುವ ಸಂಘಟನೆಗಳಿಗೆ ದೇಣಿಗೆ ನೀಡುವ ಮೂಲಕ. ಸಂಘಟನೆಗಳ ಸಾಮರ್ಥ್ಯ ನೋಡಿಕೊಂಡು ಕನಿಷ್ಠ ನಾಲ್ಕೈದು ಸಾವಿರದಿಂದ ಲಕ್ಷದವರೆಗೆ ದೇಣಿಗೆ ನೀಡಲೂ ಅವರು ಸಿದ್ಧ. ಅವರಿಂದ ದೇಣಿಗೆ ಪಡೆದ ಸಂಘಟನೆಗಳು ಚುನಾವಣೆಯ ಸಂದರ್ಭ ಅವರ ಪರವಾಗಿ ಕೆಲಸ ಮಾಡಬೇಕೆಂದು ಅವರು ನಿರೀಕ್ಷಿಸುತ್ತಾರೆ.ಸುರತ್ಕಲ್ ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಮೇಲೆ ಕಣ್ಣಿಟ್ಟಿರುವ `ಕಾರ್ಮಿಕ~ ಮುಖಂಡರೊಬ್ಬರು ಬೇರೊಂದು ಸಂಘಟನೆಯ ವೇದಿಕೆ ಬಳಸಿಕೊಂಡು ಸೀರೆ ಹಂಚಿದ್ದಾರೆ.ಟಿಕೆಟ್ ಮೇಲೆ ಕಣ್ಣಿಟ್ಟಿಲ್ಲ ಎಂದು ಹೇಳಿಕೊಂಡಿರುವ ಸಹಕಾರಿ ಧುರೀಣರೊಬ್ಬರು ತಮ್ಮ `ಕಪಿಮುಷ್ಟಿ~ಯಲ್ಲಿರುವ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಮವಸ್ತ್ರ ವಿತರಣೆ ಹೆಸರಿನಲ್ಲಿ ಸೀರೆ ಹಂಚುವ ಕಾರ್ಯವನ್ನು ಕಳೆದ ಮೂರ‌್ನಾಲ್ಕು ವರ್ಷಗಳಿಂದ ಆಗಾಗ ನಡೆಸುತ್ತಲೇ ಬಂದಿದ್ದಾರೆ.ಮಂಗಳೂರು ನಗರದಲ್ಲಿ ಈಗಾಗಲೇ ಸೀರೆ ಹಂಚಿರುವ ಅವರು, ಉಡುಪಿ ಜಿಲ್ಲೆಯಲ್ಲೂ ಈ ಸಲುವಾಗಿಯೇ ಭಾರಿ ಸಮಾವೇಶವೊಂದನ್ನು ಹಮ್ಮಿಕೊಂಡಿದ್ದಾರೆ. ಸಮಾವೇಶಕ್ಕೆ ಮುನ್ನವೇ ಸೀರೆ ಸ್ವಸಹಾಯ ಗುಂಪಿನ ಸದಸ್ಯರ ಮನೆ ಸೇರಿರುತ್ತದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಹಣಕೊಟ್ಟು ಸಮಾವೇಶಗಳಿಗೆ ಕರೆತಂದ ಬಗ್ಗೆಯೂ, ಚುನಾವಣೆ ಘೋಷಣೆ ಆಗುವ ಮುನ್ನವೇ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಣ ತಲುಪಿಸಿದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.`ಕರಾವಳಿಯಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸುವ ಕಾರ್ಯಕರ್ತರ ಖರ್ಚಿಗೆ ಹಣ ನೀಡುವ ಸಂಪ್ರದಾಯ ಇತ್ತು. ಆದರೆ ಕಳೆದ ನಾಲ್ಕೈದು ವರ್ಷದಲ್ಲಿ ಚುನಾವಣೆ ಘೋಷಣೆ ಆಗುವ ಮುನ್ನವೇ ಮತದಾರರನ್ನು ಖರೀದಿಸುವ ಪ್ರಯತ್ನಗಳು ಇಲ್ಲಿಯೂ ನಡೆಯುತ್ತಿವೆ. ಆದರೆ ರಾಜ್ಯದ ಬೇರೆ ಕಡೆಗಳಲ್ಲಿ ನಡೆಯುವಂತೆ ಇಲ್ಲಿ ಬಹಿರಂಗವಾಗಿ ಮನೆ ಮನೆಗೆ ಟಿ.ವಿ., ದುಡ್ಡು ಹಂಚುತ್ತಿಲ್ಲ~ ಎಂದು ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.ಬ್ರಹ್ಮಾವರ: ಬ್ಯಾನರ್ ಮೂಲಕ ಪ್ರಚಾರ!


ಬ್ರಹ್ಮಾವರ: ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡದೆ, ಚುನಾವಣೆಯ ಸಂದರ್ಭದಲ್ಲಿ ಮತದಾನದ ದಿನ ಕೇಂದ್ರಗಳಿಗೆ ಬಂದು ತಮ್ಮ ಹೆಸರು ಇಲ್ಲದಿರುವ ಬಗ್ಗೆ ಗಲಾಟೆ ಮಾಡುವುದು ಸರ್ವೆ ಸಾಮಾನ್ಯ.

ಕೆಲವರು ಪಡಿತರ ಚೀಟಿ ತಂದು ಅದರಲ್ಲಿ ತಮ್ಮ ಹೆಸರು ತೋರಿಸಿ ನಮಗೆ ಮತದಾನಕ್ಕೆ ಅವಕಾಶ ನೀಡಿ, ಇದರಲ್ಲಿ ಇದ್ದರೆ ಸಾಕು ಅಲ್ಲವೇ..!! ಎಂದು ಪ್ರಶ್ನೆ ಮಾಡುವವರು ತುಂಬಾ ಜನರಿದ್ದಾರೆ.ಮತದಾರ ಪಟ್ಟಿ ಮತ್ತು ಪಡಿತರ ಚೀಟಿ ಬೇರೆ ಬೇರೆ ಎನ್ನುವ ತಿಳುವಳಿಕೆಯೂ ಅವರಿಗೆ ಇರುವುದಿಲ್ಲ. ಕೆಲವೊಮ್ಮೆ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ತೀರಿ ಹೋದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆಸದೆ ಒಟ್ಟು ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ತಿಳುವಳಿಕೆಯಿಂದ ವರ್ತಿಸದಿದ್ದರೆ ಇಂತಹ ಸಮಸ್ಯೆ ಹಾಗೆಯೇ ಮುಂದುವರಿಯಲ್ಪಡುತ್ತಿರುತ್ತದೆ.ಈ ಎಲ್ಲಾ ರಾದ್ಧಾಂತಗಳಿಗೆ ಕಡಿವಾಣ ಹಾಕಲು ಮತ್ತು ಗ್ರಾಮೀಣ ಭಾಗದ ಜನತೆಯಲ್ಲಿ ಮತದಾನ, ಮತದಾರರ ಪಟ್ಟಿ, ಮತದಾನದ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಾರ್ಕೂರು

ಸುತ್ತಮುತ್ತ ವಿನೂತನ ಅಭಿಯಾನವನ್ನು ತಾ.ಪಂ ಮಾಜಿ ಅಧ್ಯಕ್ಷ ಬಾರ್ಕೂರು ಸತೀಶ ಪೂಜಾರಿ ಆರಂಭಿಸಿದ್ದಾರೆ.

ಪ್ರತೀ ಬಾರಿ ಇಂತಹ ಸೇರ್ಪಡೆ ಸಂದರ್ಭದಲ್ಲಿ ತನ್ನ ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಹಾಗೆಯೇ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಜನರನ್ನು ಉತ್ತೇಜಿಸಿ ಬಾರ್ಕೂರು ಹನೆಹಳ್ಳಿ ಭಾಗದಲ್ಲಿ ಹೆಚ್ಚಿನವರು ಸೇರ್ಪಡೆಯಾಗುವಂತೆ ಮಾಡಿ ಸಾಧನೆ ಮಾಡಿದವರು ಇವರು.ಈ ಬಾರಿ ಬಾರ್ಕೂರು ಅಲ್ಲದೆ ಹನೆಹಳ್ಳಿ, ಬ್ರಹ್ಮಾವರ ಹತ್ತಿರದ ಎಲ್ಲಾ ಗ್ರಾಮಗಳಿಗೆ ಬ್ಯಾನರ್ ಪ್ರಿಂಟ್ ಮಾಡಿ ಅಲ್ಲಲ್ಲಿ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.ಯುವಕರನ್ನು ಉತ್ತೇಜಿಸುವ ಸ್ಲೋಗನ್‌ಗಳನ್ನು ಉಚಿತವಾಗಿ ಮುದ್ರಿಸಿ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಮಾಜಸೇವೆ ಮಾಡುತ್ತಿರುವ ಇಂತಹ ರಾಜಕಾರಣಿಗಳು ಇಂದು ಸಿಗುತ್ತಿರುವುದು ಅಪರೂಪ. ಮನೆ ಮನೆಗೂ ಭೇಟಿ: ಗ್ರಾಮದ ಸಾಧ್ಯವಾದಷ್ಟು ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಮನವಿ ಮಾಡಿಕೊಳ್ಳುತ್ತಿರುವ ಸತೀಶ್ ಪೂಜಾರಿ ಅವರು ಕಳೆದ 1ರಿಂದ ಇದೇ 31ರವರೆಗೆ 18 ವರ್ಷ ಮೇಲ್ಪಟ್ಟವರು ತಮ್ಮ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅವಕಾಶವಿದ್ದು, ಈ ಬಗ್ಗೆ ಈಗಾಗಲೇ ಆಯಾ ಮತದಾನ ಕೇಂದ್ರಗಳಲ್ಲಿ ಒಬ್ಬ ಅಧಿಕಾರಿಯ ನೇಮಕವಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಭಾನುವಾರವೂ ನೋಂದಣಿಗೆ ಅವಕಾಶವಿದೆ. ಪ್ರತೀ ಬಾರಿ ಅವಕಾಶ ನೀಡಿದರೂ ಇನ್ನೂ ಕೂಡಾ ಎಷ್ಟೋ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ದೇಶದ ಭವಿಷ್ಯ ಇಂದಿನ

ಯುವಜನಾಂಗದಲ್ಲಿದೆ. ಆದ್ದರಿಂದ ಇಂತಹ ಕಾರ್ಯ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry