ಸೋಮವಾರ, ಮೇ 17, 2021
22 °C
ಲಿಂಗನಮಕ್ಕಿ, ಭದ್ರಾ ಅಣೆಕಟ್ಟೆಗಳಿಗೆ ಒಳಹರಿವು ಹೆಚ್ಚಳ

ಕರಾವಳಿ, ಮಲೆನಾಡಿನಲ್ಲಿ ಮಳೆ ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾವಳಿ, ಮಲೆನಾಡಿನಲ್ಲಿ ಮಳೆ ಬಿರುಸು

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಳೆ ಶುಕ್ರವಾರ ಬಿರುಸುಗೊಂಡಿದೆ. ಕರಾವಳಿಯಲ್ಲಿ ಮಳೆಯ ಅಬ್ಬರದಿಂದ ಮಂಗಳೂರು ಬಳಿ ಕಡಲ್ಕೊರೆತ ಭೀತಿ ಎದುರಾಗಿದೆ. ಶಿವಮೊಗ್ಗ ಜ್ಲ್ಲಿಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಗೆ ಲಿಂಗನಮಕ್ಕಿ, ಭದ್ರಾ ಅಣೆಕಟ್ಟೆಗಳ ಒಳಹರಿವು ಹೆಚ್ಚಾಗಿದೆ.ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಶುಕ್ರವಾರ  ಬೆಳಿಗ್ಗೆ 8ಕ್ಕೆ 1,754.35 ಅಡಿ ಇದ್ದು, ಒಳಹರಿವು 225 ಕ್ಯೂಸೆಕ್‌ಗೆ ಏರಿದೆ. ಭದ್ರಾ ಜಲಾಶಯದ ನೀರಿನಮಟ್ಟ 113.8 ಅಡಿ ಇದ್ದು, ಒಳಹರಿವು 833 ಕ್ಯೂಸೆಕ್‌ಗೆ ಹೆಚ್ಚಿದೆ.ಇಡೀ ದಿನ ಮಳೆ: ತೀರ್ಥಹಳ್ಳಿಯಲ್ಲಿ ಶುಕ್ರವಾರ ದಿನವಿಡೀ ಬಿರುಸಿನ ಮಳೆ ಸುರಿದಿದೆ. ಸಾಗರ, ಹೊಸನಗರಗಳಲ್ಲಿಯೂ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆಯಾಗಿದೆ.ಕೊಡಗಿನಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಗೋಣಿಕೊಪ್ಪಲು, ಶನಿವಾರಸಂತೆ, ಕುಶಾಲನಗರ, ನಾಪೋಕ್ಲು ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಆಗಿದೆ.  ಮಡಿಕೇರಿಯಲ್ಲಿ ಶುಕ್ರವಾರ ದಿನವಿಡೀ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮಂಜು ಕವಿದ ವಾತಾವರಣದೊಂದಿಗೆ ಆರಂಭವಾದ ಮಳೆ ಹಾಗೆಯೇ ಮುಂದುವರಿಯಿತು.

ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ನೆರೆಯ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮಳೆ ಜೋರಾಗಿ ಸುರಿಯತೊಡಗಿದೆ. ಉಳ್ಳಾಲ ಸಮೀಪದ ಸುಭಾಷ್ ನಗರ, ಮುಕ್ಕಚ್ಚೇರಿಗಳಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ.ಮಂಗಳೂರಿನಲ್ಲಿ 71.6 ಮಿ.ಮೀ, ಬಂಟ್ವಾಳದಲ್ಲಿ 32.6 ಹಾಗೂ ಮೂಡುಬಿದಿರೆಯಲ್ಲಿ 32.2 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ಮಂಗಳೂರಿನ ಬಜಾಲ್ ಸಮೀಪದ ಜಲ್ಲಿಗುಡ್ಡೆ ಜಯನಗರದ ದಮಯಂತಿ ಅವರ ಹೆಂಚಿನ ಮನೆ ಕುಸಿದಿದೆ. ಅತ್ತಾವರದ ಕೃಷ್ಣ ಮಂದಿರದಲ್ಲಿ ಬಹಳ ಹೊತ್ತು ಮಳೆ ನೀರು ನಿಂತು ಬಹಳ ತೊಂದರೆ ಎದುರಾಯಿತು. ಅಶೋಕನಗರದ ಶಾಲೆ ಸಮೀಪದ ಧರೆ ಕುಸಿದರೂ, ಯಾವುದೇ ಅಪಾಯ ಉಂಟಾಗಲಿಲ್ಲ.

ಪುತ್ತೂರು ತಾಲ್ಲೂಕಿನಲ್ಲಿ ಗಾಳಿ, ಮಳೆಯಿಂದಾಗಿ 5 ಟಾನ್ಸ್‌ಫಾರ್ಮರ್‌ಗಳು ಹಾನಿಗೊಂಡಿದ್ದು, 212 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹೀಗಾಗಿ 'ಮೆಸ್ಕಾಂ'ಗೆ 25 ಲಕ್ಷ ರೂಪಾಯಿ ಹಾನಿಯ ಅಂದಾಜು ಮಾಡಲಾಗಿದೆ. ಕೊಳ್ತಿಗೆ ಗ್ರಾಮದಲ್ಲಿ ಕರಿಯ ಎಂಬವರ ಹೆಂಚಿನ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಾಸರಗೋಡಿನಲ್ಲಿ ಕೇಳುಗುಡ್ಡೆ ಕುಚ್ಚಿಕ್ಕಾಡಿನ ಸುಬ್ರಹ್ಮಣ್ಯ ಎಂಬುವವರ ಮನೆ  ಕುಸಿದಿದೆ.ಉಡುಪಿ ಜಿಲ್ಲೆಯಲ್ಲೂ ಮಳೆ ಬಿರುಸಾಗಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಶುಕ್ರವಾರ ತುಂತುರು ಮಳೆ ಸುರಿಯಿತು. ಕಳೆದ 24 ಗಂಟೆಯಲ್ಲಿ ಕಳಸಾಪುರದಲ್ಲಿ 40.4 ಮಿ.ಮೀ. ಮಳೆ ಸುರಿದಿದೆ. ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತುಂತುರು ಮಳೆ ಸುರಿಯಿತು. ಯಾವುದೇ ಹಾನಿಯ ವರದಿಯಾಗಿಲ್ಲ.ಬಿರುಸಿನ ಮಳೆ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಮತ್ತು ಧಾರವಾಡ ನಗರದಲ್ಲಿ ಬಿರುಸಿನ ಮಳೆಯಾಗಿದೆ. ಹುಬ್ಬಳ್ಳಿ ನಗರ ಮತ್ತು ಹಾವೇರಿ ಜಿಲ್ಲೆಯ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ಮಳೆಯಿಂದಾಗಿ ಕಾರವಾರ ಸಮೀಪದ ಕಾಳಿ ಸೇತುವೆ ಬಳಿಯ ಗುಡ್ಡದಿಂದ ಸಣ್ಣ ಕಲ್ಲುಗಳು ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಪರಿಣಾಮ  ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಸೇತುವೆ ಜಲಾವೃತ: ಡೋಣಿ ನದಿಗೆ ಗುರುವಾರ ಹೆಚ್ಚು ನೀರು ಬಂದುದರಿಂದ ವಿಜಾಪುರ ಜಿಲ್ಲೆಯ ತಾಳಿಕೋಟೆ ಬಳಿಯ ಹಡಗಿನಾಳ ಸೇತುವೆ ಜಲಾವೃತವಾಗಿದ್ದು, ಶುಕ್ರವಾರ ಕೂಡ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳ್ಳಾರಿ ನಗರ ಹಾಗೂ ಜಿಲ್ಲೆಯ ಕೆಲವೆಡೆ ಗುರುವಾರ ಇಡೀ ರಾತ್ರಿ ಮಳೆಯಾಗಿದೆ.ಮನೆಗಳು ಜಲಾವೃತ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ  ಗುರುವಾರ ರಾತ್ರಿ  ಭಾರಿ ಮಳೆಯಿಂದ ಸುಮಾರು 40 ಮನೆಗಳು ಜಲಾವೃತಗೊಂಡವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.